ಬೆಂಗಳೂರು(ಆ.01): ಕೊರೋನಾ ಒಂದೆಡೆ ಜನರ ಬದುಕನ್ನು ಛಿದ್ರಗೊಳಿಸಿದ್ದರೆ, ಮತ್ತೊಂದೆಡೆ ಸಂಕಷ್ಟದ ಸಮಯದಲ್ಲಿ ಮಾನವೀಯತೆಯನ್ನು ಅನಾವರಣಗೊಳಿಸುತ್ತಿದೆ ಎಂಬುದಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಯುವಕನ ಅಂತ್ಯಕ್ರಿಯೆ ನೆರವೇರಿಸಿರುವುದೇ ಸಾಕ್ಷಿ.

ಆರ್‌.ಟಿ.ನಗರದ ಮಹಮ್ಮದ್‌ ಇಬ್ರಾಹಿಂ ಅವರು ಮೃತ ಸೋಂಕಿತನ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳ ಪ್ರಕಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜು.18 .ರಂದು ಪಶ್ಚಿಮ ಬಂಗಾಳ ಮೂಲದ 37 ವರ್ಷದ ಸುದೀಪ್‌ ಸಾಹಾ ಎಂಬ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತರಾಗಿದ್ದರು. ಮೃತರ ಕುಟುಂಬದವರೆಲ್ಲ ಪಶ್ಚಿಮ ಬಂಗಾಳದಲ್ಲಿದ್ದರು. ಈ ವೇಳೆ ಸ್ನೇಹಿತರಿಂದ ಮಾಹಿತಿ ಪಡೆದುಕೊಂಡ ಆರ್‌.ಟಿ.ನಗರ ನಿವಾಸಿ ಮಹಮ್ಮದ್‌ ಇಬ್ರಾಹಿಂ ಖುದ್ದು ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ. ಅಲ್ಲದೆ ಸಂಪ್ರದಾಯದಂತೆ ಮೃತರ ಅಸ್ಥಿಯನ್ನು ಅರ್ಕಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ.

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಕೊರೋನಾ ಆತಂಕ

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮಹಮ್ಮದ್‌ ಇಬ್ರಾಹಿಂ, ನನ್ನ ಸ್ನೇಹಿತ ಸೋಂಕಿತ ಮೃತರಾಗಿರುವ ಬಗ್ಗೆ ಕರೆ ಮಾಡಿ ಹೇಳಿದರು. ಬಳಿಕ ಮೃತರ ಸಂಬಂಧಿಯೂ ಕರೆ ಮಾಡಿ ಕೋವಿಡ್‌ ಇರುವುದರಿಂದ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ನೀವೇ ಮುಂದೆ ನಿಂತು ಶವ ಸಂಸ್ಕಾರ ಮಾಡುವಂತೆ ಮನವಿ ಮಾಡಿದರು. ಸೇಂಟ್‌ ಜಾನ್‌ ಆಸ್ಪತ್ರೆಯಲ್ಲಿ ಪೊಲೀಸರ ಮಾರ್ಗದರ್ಶನದಲ್ಲಿ ಶವ ಪಡೆದುಕೊಂಡು ಪಿಪಿಇ ಕಿಟ್‌ ಧರಿಸಿ ವಿಲ್ಸನ್‌ ಗಾರ್ಡನ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಂತಿಮವಾಗಿ ಯುಟ್ಯೂಬ್‌ನಲ್ಲಿ ಗಾಯತ್ರಿ ಮಂತ್ರ ಹಾಕಿಕೊಂಡು ಕನಕಪುರ ರಸ್ತೆಯ ಅರ್ಕಾವತಿ ನದಿಗೆ ಅಸ್ಥಿ ವಿಸರ್ಜನೆ ಮಾಡಿದ್ದೇನೆ ಎಂದರು.