ಮಂಗಳೂರು(ಜು.30): ಕೊರೋನಾ ಸೋಂಕು ತಗುಲಿ ಸಾವಿಗೀಡಾದ 80ರ ಹರೆಯದ ವೃದ್ಧೆಯ ಅಂತ್ಯಸಂಸ್ಕಾರವನ್ನು ಸರ್ಕಾರದ ನಿಯಮ ಗಾಳಿಗೆತೂರಿ ಅಕ್ರಮವಾಗಿ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ 150 ಮಂದಿ ಊರಿನವರೇ ಸೇರಿ ಮಾಡಿದ ಆಘಾತಕಾರಿ ಘಟನೆ ಮಂಗಳೂರಿನ ಬೋಳೂರಿನಲ್ಲಿ ನಡೆದಿದ್ದು, ಇದೀಗ ಊರಿನವರಿಗೆ ಸೋಂಕು ಹರಡುವ ತೀವ್ರ ಆತಂಕ ಎದುರಾಗಿದೆ.

ಕೊರೋನಾ ಸಾಮುದಾಯಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ. ಭಾನುವಾರ ರಾತ್ರಿ ಅಂತ್ಯಸಂಸ್ಕಾರದ ಪೂರ್ವ ವಿಧಿಗಳನ್ನು ಮಾಡಿ ಸೋಮವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆದಿರುವ ಕುರಿತು ‘ಕನ್ನಡಪ್ರಭ’ಕ್ಕೆ ಖಚಿತ ಮಾಹಿತಿ ಲಭಿಸಿದೆ. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿ ಕೂಡ ದೃಢಪಡಿಸಿದ್ದಾರೆ.

'ಇವತ್ತು ಖಾದರ್ ಕಾಲವಲ್ಲ': ಶಾಸಕರಿಗೆ ಸಚಿವ ಕೋಟ ಟಾಂಗ್..!

ವೃದ್ಧೆ ಕೊರೋನಾದಿಂದ ಸತ್ತ ವಿಚಾರ ಗೊತ್ತಿದ್ದೂ ಖಾಸಗಿ ಆಸ್ಪತ್ರೆಯವರು ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ, ಮನೆಯವರು ಈ ವಿಚಾರ ಮುಚ್ಚಿಟ್ಟು ಊರವರನ್ನು ಸೇರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದು, ಇದರ ಹಿಂದೆ ಪ್ರಬಲ ಲಾಬಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಅಂತ್ಯಕ್ರಿಯೆ ನಡೆದ ಬಳಿಕ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಆದರೆ ಯಾವುದೇ ರೀತಿಯ ಸಾವು ಸಂಭವಿಸಲಿ, ಕೊರೋನಾ ವರದಿ ಬಾರದೆ ಅಂತ್ಯಕ್ರಿಯೆ ಮಾಡುವಂತಿಲ್ಲ. ಒಂದು ವೇಳೆ ಪಾಸಿಟಿವ್‌ ಬಂದರೆ ಸಕಲ ಸುರಕ್ಷಾ ಕ್ರಮಗಳೊಂದಿಗೆ ಸರ್ಕಾರದ ವತಿಯಿಂದಲೇ ಅಂತ್ಯಸಂಸ್ಕಾರ ನಡೆಯುತ್ತದೆ. ನೆಗೆಟಿವ್‌ ಬಂದರೆ ಮಾತ್ರ ಮನೆಯವರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಶವಕ್ಕೆ ಸ್ನಾನ ಮಾಡಿಸಿದ್ದರು!:

ತೀವ್ರ ಜ್ವರದಿಂದ ಬಳಲುತ್ತಿದ್ದ ಬೋಳೂರಿನ 80ರ ಹರೆಯದ ವೃದ್ಧೆಯೋರ್ವರು ಭಾನುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೂಡಲೆ ಮಲೇರಿಯಾ ಮತ್ತು ಕೋವಿಡ್‌-19 ಮಾದರಿ ಪಡೆದುಕೊಳ್ಳಲಾಗಿತ್ತು. ಮಲೇರಿಯಾ ಇರುವುದು ತಕ್ಷಣ ದೃಢಪಟ್ಟಿದೆ. ಆದರೆ ಕೊರೋನಾ ವರದಿ ಬಂದಿರಲಿಲ್ಲ. ಅದೇ ದಿನ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಪ್ರಭಾವ ಬಳಸಿದ ಮನೆಯವರು ಆಸ್ಪತ್ರೆಯಿಂದ ಮೃತದೇಹವನ್ನು ಪಡೆದು ಮನೆಗೆ ತೆರಳಿದ್ದಾರೆ.

'ಮೊದಲು ಇವಳನ್ನು ಕಡಿದು ಕೊಲ್ಲಬೇಕು': ಡಿಸಿ ಸಿಂಧೂ ರೂಪೇಶ್‌ಗೆ ಕೊಲೆ ಬೆದರಿಕೆ ಹಾಕಿದವ ಅಂದರ್

ಅಲ್ಲಿ ರಾತ್ರಿ ಸುಮಾರು 150ರಷ್ಟುಸ್ಥಳೀಯರು ಜಮಾಯಿಸಿದ್ದು, ಸಂಪ್ರದಾಯಬದ್ಧವಾಗಿ ಮೃತದೇಹವನ್ನು ಮುಟ್ಟಿಸ್ನಾನಾದಿ ಕ್ರಿಯಾ ಕರ್ಮಗಳನ್ನು ಮಾಡಿಸಿದ್ದಾರೆ, ತುಳಸಿ ನೀರು ಬಿಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಬೋಳೂರಿನ ವಿದ್ಯುತ್‌ ಚಿತಾಗಾರದಲ್ಲಿ, ಕಟ್ಟಿಗೆಯ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಕ್ರಿಯೆಗಳಲ್ಲಿ ಕೂಡ ಊರಿನವರು ಭಾಗವಹಿಸಿದ್ದಾರೆ.

ಪಕ್ಕದ ಮನೆ ಮಹಿಳೆಗೆ ಸೋಂಕು: ಬೆಳಗ್ಗೆ ಅಂತ್ಯಕ್ರಿಯೆ ನಡೆದ ಬಳಿಕ ಮೃತ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದ ವಿಷಯ ಸ್ಥಳೀಯರಿಗೂ ಗೊತ್ತಾಗಿದ್ದು, ತೀವ್ರವಾಗಿ ಆತಂಕಿತರಾಗಿದ್ದಾರೆ. ಅನೇಕರು ಮನೆಯಿಂದ ಹೊರಬಾರದೆ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದರೆ, ಇನ್ನೂ ಅನೇಕರು ನಗರದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಸ್ಥಳೀಯರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಅಂತ್ಯಕ್ರಿಯೆ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದ ಪಕ್ಕದ ಮನೆಯ ಮಹಿಳೆಗೂ ಕೊರೋನಾ ದೃಢಪಟ್ಟಿದೆ. ಇದು, ಇನ್ನೂ ಅನೇಕರಿಗೆ ಸೋಂಕು ತಗಲುವ ಅಪಾಯದ ಮುನ್ಸೂಚನೆ ನೀಡಿದೆ.

ಫೋನ್‌ನಲ್ಲಿ ಹರಟುತ್ತಾ ಕೊರೋನಾ ಒತ್ತಡ ಮರೆತ ವ್ಯಾಪಾರಿ!

ಸ್ಥಳೀಯವಾಗಿ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಷಯವನ್ನೇ ಮುಚ್ಚಿಹಾಕಲು ತೀವ್ರ ಪ್ರಯತ್ನ ನಡೆದಿದೆ. ಇದೀಗ ವೃದ್ಧೆ ಮತ್ತು ಪಕ್ಕದ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ದೂರು ನೀಡಿದರೆ ಕ್ರಮ: ಡಿಎಚ್‌ಒ

ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಏನೇ ಸಾವು ಸಂಭವಿಸಿದರೂ ಕೋವಿಡ್‌-19 ಟೆಸ್ಟ್‌ ಮಾಡಲೇಬೇಕು. ಒಮ್ಮೆ ಗಂಟಲು ದ್ರವ ಮಾದರಿ ಕಳಿಸಿದ ಬಳಿಕ ವರದಿ ಬಾರದೆ ಅಂತ್ಯಸಂಸ್ಕಾರ ನಡೆಸುವಂತೆಯೇ ಇಲ್ಲ. ಬೋಳೂರಿನ ಮಹಿಳೆಯ ಕೊರೋನಾ ವರದಿ ಬರುವ ಮೊದಲೇ ಮನೆಯವರಿಗೆ ಮೃತದೇಹ ಹಸ್ತಾಂತರ ಮಾಡಿದ್ದಾರೆ. ಈ ಕುರಿತು ಲಿಖಿತ ದೂರು ನೀಡಿದರೆ ಖಾಸಗಿ ಆಸ್ಪತ್ರೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

-ಸಂದೀಪ್‌ ವಾಗ್ಲೆ