ಬೆಂಗಳೂರು(ಜ.26): ದುಪ್ಪಟ್ಟು ಲಾಭದ ಆಸೆ ತೋರಿಸಿ ನೂರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ್ದ ಇಬ್ಬರು ವಂಚಕರನ್ನು ತಿಲಕನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ದೇವರಚಿಕ್ಕನಹಳ್ಳಿಯ ಬಿ.ಮಂಜುನಾಥ್‌ ಹಾಗೂ ದೊಡ್ಡಕಮ್ಮನಹಳ್ಳಿಯ ಮಸೀವುಲ್ಲಾ ಷರೀಫ್‌ ಬಂಧಿತರು. ಕೃತ್ಯ ಬೆಳಕಿಗೆ ಬಂದ ನಂತರ ದುಬೈಗೆ ಓಡಿ ಹೋಗಿರುವ ದೊಡ್ಡಕಮ್ಮನಹಳ್ಳಿಯ ಹಬೀಬುಲ್ಲಾ ಷರೀಫ್‌ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂತ್‌ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆರೋಪಿಗಳ 80 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಸೇರಿ ಮೂರು ದುಬಾರಿ ಕಾರುಗಳು, ದ್ವಿಚಕ್ರ ವಾಹನಗಳು, ನಿವೇಶನ ಮತ್ತು ಮನೆ ಸೇರಿದಂತೆ ಒಟ್ಟು 3 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ವಿತರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಡಿಸಿಪಿ ಹೇಳಿದ್ದಾರೆ.

ಹಬೀಬುಲ್ಲಾ ಮತ್ತು ಮಸೀವುಲ್ಲಾ ಸಹೋದರರಾಗಿದ್ದು, 2018ರಲ್ಲಿ ತಿಲಕನಗರದ ಸಮೀಪ ‘ಟಿಫಪ್‌ರ್‍ ಟ್ರೇಡಿಂಗ್‌ ಸರ್ವಿಸ್‌ ಪ್ರೈ.ಲಿ’ ಹೆಸರಿನ ಕಂಪನಿ ಆರಂಭಿಸಿದ್ದರು. ಇದಕ್ಕೆ ಅವರ ಸ್ನೇಹಿತ ಮಂಜುನಾಥ್‌ ಕೂಡಾ ಪಾಲುದಾರನಾಗಿದ್ದ. ತಮ್ಮ ಕಂಪನಿಯಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುತ್ತದೆ. ವಿದೇಶದಲ್ಲಿ ಟ್ರೇಡಿಂಗ್‌ ಬಿಸಿನೆಸ್‌ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬರುವ ಲಾಭಾಂಶದಲ್ಲಿ ಹೂಡಿಕೆದಾರರಿಗೆ ಅಧಿಕ ಲಾಭ ಕೊಡುವುದಾಗಿ ಆರೋಪಿಗಳು ಹೇಳಿದ್ದರು. ಈ ಮಾತು ನಂಬಿದ ನೂರಾರು ಮಂದಿ ಹಣ ತೊಡಗಿಸಿದ್ದರು. ಅದರಂತೆ ಆರಂಭದ ಆರು ತಿಂಗಳು ವಂಚಕರಿಂದ ಲಾಭಾಂಶವು ಸಂದಾಯವಾಯಿತು. ತರುವಾಯ ಹಾದಿ ತಪ್ಪಿತು.
ನಮ್ಮ ಆರ್ಥಿಕ ವ್ಯವಹಾರ ನಷ್ಟದಲ್ಲಿದೆ ಎಂದು ಹೇಳಿದ ಆರೋಪಿಗಳು, ಷೇರು ಮಾರುಕಟ್ಟೆಯಲ್ಲಿ ಲಾಭ ಬರುತ್ತಿಲ್ಲವೆಂದು ಹೇಳಿ ಲಾಭದ ಹಂಚಿಕೆ ನಿಲ್ಲಿಸಿದ್ದರು. ಇದರಿಂದ ನೊಂದ ಹೂಡಿಕೆದಾರರು ತಿಲಕನಗರ ಠಾಣೆಯಲ್ಲಿ ದೂರು ನೀಡಿದರು. ತಕ್ಷಣ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿವರಿಸಿದ್ದಾರೆ.

10 ಕೋಟಿ ವಂಚನೆ?

ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಆರೋಪಿಗಳಿಗೆ ನೂರಾರು ಮಂದಿ ಸುಮಾರು .10 ಕೋಟಿ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದುವರೆಗೆ ತಿಲಕನಗರ ಠಾಣೆಯಲ್ಲಿ 50 ಮಂದಿ ದೂರು ನೀಡಿದ್ದು, 1.25 ಕೋಟಿ ಮೋಸ ಮಾಡಿರುವುದು ಗೊತ್ತಾಗಿದೆ. ದೂರುದಾರರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಅಂದಾಜು 10 ಕೋಟಿ ಮೋಸವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.