ಬೆಳ್ತಂಗಡಿ(ಜು.07): ಇಲ್ಲೊಬ್ಬ ವಿದೇಶಿ ಪ್ರಜೆ ಲಾಕ್‌ಡೌನ್‌ನಿಂದ ತನ್ನ ದೇಶಕ್ಕೆ ಮರಳಲು ಸಾಧ್ಯವಾಗದಿರುವ ಸಂದರ್ಭವನ್ನು ಕನ್ನಡ ಕಲಿಯಲು ಉಪಯೋಗಿಸಿದ್ದಾರೆ. ಒಂದು ವರ್ಷದ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದ 25 ವರ್ಷದ ಫ್ರೆಂಚ್‌ ಪ್ರಜೆ ಬ್ಯಾಪ್ಟಿಸ್ಟ್‌ ಮರಿಯೋಟ್‌, ಬೆಳ್ತಂಗಡಿ ತಾಲೂಕಿನ ಮುಂಡಾಜೆಯೆಂಬ ಹಳ್ಳಿಯಲ್ಲಿನ ಬಾಡಿಗೆ ಕೋಣೆಯೊಂದರಲ್ಲಿ ಉಳಿಯಬೇಕಾಗಿ ಬಂತು.

ಮಾರ್ಚ್ ಅಂತ್ಯದೊಳಗೆ ಹಿಂತಿರುಗಬೇಕಾಗಿದ್ದ ಅವರು ಅನಿರೀಕ್ಷಿತ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಾಗ ಕನ್ನಡ ಭಾಷೆಯನ್ನು ಕಲಿಯುವತ್ತ ಮನಸ್ಸು ಮಾಡಿ, ಈಗ ಕನ್ನಡ ಪುಸ್ತಕಗಳನ್ನು ಓದುವ ಹಂತಕ್ಕೆ ಬಂದಿದ್ದಾರೆ. ಮುಂಡಾಜೆಯ ಕೃಷಿಕ ಅಜಿತ್‌ ಭಿಡೆ ಹಾಗೂ ಸಚಿನ್‌ ಭಿಡೆ ಕನ್ನಡ ಕಲಿಸುವಲ್ಲಿ ಪೂರ್ತಿ ಸಹಕಾರ ನೀಡಿದ್ದಾರೆ.

ಮಂಗಳೂರಿಗೆ ನಿತ್ಯಪಾಸ್‌ ರದ್ದು: ಕೇರಳ ಕರ್ನಾಟಕ ಸಂಚಾರವೇ ಬಂದ್

ಮೂಲತಃ ಕಲಾವಿದರಾದ ಬ್ಯಾಪ್ಟಿಸ್ಟ್‌ ಮರಿಯೋಟ್‌, ಫ್ರಾನ್ಸ್‌ನ ಫೆä್ಲೕರೆನ್ಸ್‌ ಅಕಾಡೆಮಿ ಆಫ್‌ ಆಟ್ಸ್‌ರ್‍ನ ವಿದ್ಯಾರ್ಥಿ. ಸ್ಪೈನ್‌ನ ಒಂದು ಕಲಾಶಾಲೆಯ ಶಿಕ್ಷಕ ಅನುಭವಿ ಸ್ಯಾಕ್ಸೋಫೋನ್‌ ಕಲಾವಿದ ಮೈಕಲ್‌ ಮಿಷೆಲ್‌ ಎಂಬವರಿಂದ ಮುಂಡಾಜೆಯ ಬಗ್ಗೆ ಮಾಹಿತಿ ಸಿಕ್ಕಿತ್ತಂತೆ.

‘ನಾನು 2017ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಹಿಂದಿ ಭಾಷೆಯ ಬಗ್ಗೆ ತಿಳಿದುಕೊಂಡೆ. ಹೆಚ್ಚಿನ ಭಾರತೀಯರು ಹಿಂದಿ ಭಾಷೆಯನ್ನೇ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಹಳ್ಳಿಗೆ (ಮುಂಡಾಜೆ) ಬಂದಾಗ ಕನ್ನಡ ಭಾಷೆಯೂ ಒಂದಿದೆ. ಅದನ್ನೂ ಕಲಿಯುವ ಅವಶ್ಯಕತೆಯನ್ನು ಮನಗಂಡೆ. ಸನಿಹದ ನಿವಾಸಿ ಸಚಿನ್‌ ಭಿಡೆ ಕನ್ನಡವನ್ನು ಕಲಿಸುತ್ತಿದ್ದಾರೆ’ ಎಂದು ಮರಿಯೋಟ್‌, ಫ್ರೆಂಚ್‌ ಶೈಲಿಯ ಕನ್ನಡದಲ್ಲೇ ಹೇಳುತ್ತಾರೆ.

ನಿಲ್ಲದ ಮರಣಮೃದಂಗ, ದಕ್ಷಿಣ ಕನ್ನಡದಲ್ಲಿ ಮಹಾಮಾರಿಗೆ ಮತ್ತೆ ಇಬ್ಬರು ಬಲಿ

ಕೃಷಿಕ, ಸಹ್ಯಾದ್ರಿ ಸಂಚಯದ ಸದಸ್ಯ ಸಚಿನ್‌ ಭಿಡೆ ಕನ್ನಡದ ಜತೆಗೆ ದಕ್ಷಿಣ ಕನ್ನಡದ ವಿವಿಧ ಖಾದ್ಯಗಳನ್ನೂ ಪರಿಚಯಿಸಿದ್ದಾರೆ. ಹೀಗಾಗಿ ಇಲ್ಲಿಂದ ಹೊರಡಲೂ ಮನಸ್ಸಾಗುತ್ತಿಲ್ಲ ಎನ್ನುತ್ತಾರೆ ಅವರು. ಈ ಮಧ್ಯೆ ಭಿಡೆಯವರ ಗೆಳೆಯ ಧನುಷ್‌ ರಾಜೇಂದ್ರ ಅವರಿಗೆ ಡ್ರಮ್ಸ್‌ ವಾದವನ್ನು ಕಲಿಸುತ್ತಿರುವ ಮರಿಯೋಟ್‌, ಅವರಿಂದಲೂ ಕನ್ನಡವನ್ನು ಅಭ್ಯಸಿಸುತ್ತಿದ್ದಾರೆ.

ಕಲಾವಿದ ಕುಟುಂಬದ ಮರಿಯೋಟ್‌, ಡ್ರಮ್ಸ್‌ ಕಲೆಯ ಜತೆಗೆ ಛಾಯಾಚಿತ್ರಕಾರರೂ ಹೌದು. ಪ್ರರ್ವತ ಶ್ರೇಣಿಗಳ, ಹಸಿರು ಕಾನನಗಳ ಭಾವಚಿತ್ರಕಾರ. ಚಾರ್ಮಾಡಿ ಕಣಿವೆಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಮಳೆಗಾಲ ಅಂದರೆ ಅವರಿಗೆ ತುಂಬಾ ಪ್ರೀತಿ. ಫ್ರೆಂಚ್‌ನ ಜತೆಗೆ ಇಟಾಲಿಯನ್‌, ಸ್ಪಾನಿಷ್‌, ಇಂಗ್ಲಿಷ್‌ ಹಾಗೂ ಕನ್ನಡವನ್ನು ಸರಾಗವಾಗಿ ಮಾತನಾಡಬಲ್ಲರು. ಹಿಂದಿಯ ಬಗ್ಗೆಯೂ ಮಾಹಿತಿ ಅವರಿಗಿದೆ ಎನ್ನುತ್ತಾರೆ ಸಚಿನ್‌ ಭಿಡೆ.