5 ತಿಂಗಳ ಮಗು ಸೇರಿ ಒಂದೇ ಮನೆಯ ನಾಲ್ವರಿಗೆ ಕೊರೋನಾ..!
ಬೆಂಗಳೂರಿನ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್ ಇತ್ತೀಚೆಗೆ ತಮ್ಮ ಪತ್ನಿಯ ಹೆರಿಗೆಗೆಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ನಾರಾಯಣಪುರಕ್ಕೆ ಬಂದು ಹೋಗಿದ್ದರು. ಬೆಂಗಳೂರಿಗೆ ತೆರಳಿದಾಗ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಇದರ ಜತೆಗೆ ತಿಂಗಳ ಮಗು ಸೇರಿ ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚಿಕ್ಕಮಗಳೂರು(ಜೂ.23): ಪತ್ನಿ ಹಾಗೂ ಮಗುವನ್ನು ನೋಡಿಕೊಂಡು ಬರಲು ಮಾವನ ಮನೆಗೆ ಬಂದಿದ್ದ ಕಾನ್‌ಸ್ಟೇಬಲ್‌ನಿಂದಾಗಿ ಒಂದೇ ಮನೆಯ ನಾಲ್ವರಿಗೆ ಕೊರೋನಾ ಸೋಂಕು ಸೋಮವಾರ ದೃಢಪಟ್ಟಿದೆ. ಇದೀಗ ಆತನ ಕುಟುಂಬದ ಐದು ತಿಂಗಳ ಮಗು, ಪತ್ನಿ, ಅತ್ತೆ ಮತ್ತು ಮಾವನಿಗೂ ಕೊರೋನಾ ದೃಢಪಟ್ಟಿದೆ.
ಬೆಂಗಳೂರಿನ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್ ಇತ್ತೀಚೆಗೆ ತಮ್ಮ ಪತ್ನಿಯ ಹೆರಿಗೆಗೆಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ನಾರಾಯಣಪುರಕ್ಕೆ ಬಂದು ಹೋಗಿದ್ದರು. ಬೆಂಗಳೂರಿಗೆ ತೆರಳಿದಾಗ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ನಾರಾಯಣಪುರಕ್ಕೆ ಬಂದು ಹೋಗಿದ್ದು ತಿಳಿದು ಮನೆಯವರೆಲ್ಲ ಗಂಟಲು ದ್ರವ, ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಇದೀಗ ಬಂದ ವರದಿಯಲ್ಲಿ ಕುಟುಂಬದ ನಾಲ್ವರಿಗೆ ಸೋಂಕು ದೃಢಪಟ್ಟಿದೆ.
22 ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ 5 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಅಜ್ಜಂಪುರ ತಾಲೂಕಿನಲ್ಲಿ ಪೊಲೀಸ್ ಸಿಬ್ಬಂದಿ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಮಹಾರಾಷ್ಟ್ರದಿಂದ ಬಂದಿರುವ ಒಬ್ಬರಿಂದ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಸೋಮವಾರ ಜಿಲ್ಲೆಯಲ್ಲಿ ಪತ್ತೆಯಾಗಿರುವ 5 ಪ್ರಕರಣಗಳು ಸೇರಿ ಒಟ್ಟು 22 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಸೋಂಕಿರುವವರಿಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಕ್ವಾರಂಟೈನ್ ಉಲ್ಲಂಘನೆ-ಎಫ್‌ಐಆರ್ ದಾಖಲು:
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿತ ರೋಗಿಯು ಎರಡನೇ ಸಂಪರ್ಕ ಹೊಂದಿದ ಜನರನ್ನು ಮತ್ತು ಹೊರ ರಾಜ್ಯಗಳಿಂದ ಬಂದ ಗರ್ಭಿಣಿ ಮಹಿಳೆಯರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ಮತ್ತು ಬೇರೆ ರೋಗದಿಂದ ಬಳಲುತ್ತಾರೆಂಬ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಬದಲಾಗಿ ಹೋಂಕ್ವಾರಂಟೈನ್‌ನಲ್ಲಿರಿಸಲಾಗಿದೆ. ಗ್ರಾಮಲೆಕ್ಕಿಗರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಬಿಲ್ ಕಲೆಕ್ಟರ್‌ಗಳು ಪ್ರತಿದಿನ ಹೋಂ ಕ್ವಾರಂಟೈನ್‌ಗೆ ಬಂದು ಅವರ ಭಾವಚಿತ್ರವನ್ನು ಕ್ವಾರಂಟೈನ್ ವಾಚ್‌ಆ್ಯಪ್ ಮೂಲಕ ಅಪಲೋಡ್ ಮಾಡುತ್ತಿದ್ದಾರೆ. ಇದನ್ನು ಹೋಂಕ್ವಾರಂಟೈನ್‌ನಲ್ಲಿ ಇರುವವರು ಕೂಡಾ ಸ್ವತಃ ಮೊಬೈಲ್ ಮೂಲಕ ಮಾಡಬಹುದು.
ಕೊರೋನಾ ಚಿಕಿತ್ಸೆಗೆ ಶಿವಮೊಗ್ಗದಲ್ಲಿ 22 ಖಾಸಗಿ ಆಸ್ಪತ್ರೆ ಗುರುತು
ಜಿಲ್ಲೆಯಾದ್ಯಂತ ಜೂ.19ರವರೆಗೆ ಒಟ್ಟು 2094 ಜನ ನಿರ್ಬಂಧಿತ ಪ್ರದೇಶವನ್ನು ಬಿಟ್ಟು ಬಂದಿರುವುದು (ಜಿಯೋಫೇನ್ಸಿಂಗ್ ಬ್ರೀಚಿಂಗ್) ಕಂಡು ಬಂದಿದ್ದು, ಈ ಪ್ರಕರಣಗಳಲ್ಲಿ ಈಗಾಗಲೇ 15 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಇನ್ನೂ ಉಳಿದವರಿಗೆ ಪೋಲಿಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿರುತ್ತದೆ.
ಸಾರ್ವಜನಿಕರಿಗೆ ಹೋಂ ಕ್ವಾರಂಟೈನ್ ಸೀಲ್ ಹೊಂದಿರುವವರು ಅವಶ್ಯಕವಾಗಿ ನಿಗದಿಪಡಿಸಿರುವ ದಿನಾಂಕಗಳಿಗೆ ಮುಂಚಿತವಾಗಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ಅಗತ್ಯ ಶಿಸ್ತು ಕ್ರಮಕೈಗೊಳ್ಳಲು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.