ಕೊಡಗಿನ ಪೊನ್ನಂಪೇಟೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಲಾಗಿದೆ. ಪಶ್ಚಿಮ ಬಂಗಾಳದ ಬ್ರೋಕರ್‌ಗಳ ಮೂಲಕ ಭಾರತಕ್ಕೆ ನುಸುಳಿದ್ದ ಇವರ ಬಳಿ ಬೆಂಗಳೂರು ನೋಂದಣಿಯ ಬೈಕ್ ಪತ್ತೆಯಾಗಿದೆ.ಸಮಗ್ರ ತನಿಖೆಗೆ ಆಗ್ರಹ.

ಅಕ್ರಮ ನುಸುಳುಕೋರರು ಕೊಡಗಿಗೆ ಬಂದಿದ್ದು ಹೇಗೆ?

  • ರಾಜ್ಯದಲ್ಲಿ ಮುಂದುವರಿದ ಅಕ್ರಮ ಬಾಗ್ಲಾದೇಶಿ ನುಸುಳಿಕೋರರ ಬೇಟೆ
  • ಗಡಿಯಲ್ಲಿ ನುಸುಳಿ ಭಾರತ ಪ್ರವೇಶ ಮಾಡಿದ್ದ ನಾಲ್ವರು ವ್ಯಕ್ತಿಗಳು ವಶಕ್ಕೆ
  • ಪಶ್ಚಿಮ ಬಂಗಾಳದ ಬ್ರೋಕರ್‌ಗಳ ಮೂಲಕ ಭಾರತಕ್ಕೆ ಬಂದಿದ್ದೇವೆ
  • ಪೊಲೀಸರ ಮುಂದೆ ಹೇಳಿಕೆ. ಇವರ ಬಳಿ ಬೆಂಗಳೂರಿನ ಬೈಕ್‌ ಪತ್ತೆ
  • ಇಂಥ ವಲಸಿಗರ ಮೇಲೆ ಸೂಕ್ತ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

--

ಮಡಿಕೇರಿ (ಅ.15): ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ತಲೆ ಮರೆಸಿಕೊಂಡಿದ್ದ ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಕೊಡಗಿನಲ್ಲಿ ಪತ್ತೆ ಹಚ್ಚಲಾಗಿದೆ. ಹಿಂದೂ ಜಾಗರಣಾ ವೇದಿಕೆ ಹಾಗೂ ಆಟೋ ಚಾಲಕರ ಸಂಘದವರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದು, ಬ್ರೋಕರ್‌ ಮೂಲಕ ಭಾರತಕ್ಕೆ ಇವರು ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಬೆಂಗಳೂರು ನೋಂದಣಿಯ ಬೈಕ್‌ ಪತ್ತೆ ಆಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ‘ಪೊನ್ನಂಪೇಟೆ ತಾಲೂಕಿನ ಬಾಳೆಲೆಯಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದಿದ್ದಾರೆ.

ಕೊಡಗಿನ ತೋಟದಲ್ಲಿ ಕೆಲಸ:

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಾಳೆಲೆ ವ್ಯಾಪ್ತಿಯ ಕೊಟ್ಟಿಗೇರಿ ಗ್ರಾಮದ ತೋಟವೊಂದರಲ್ಲಿ ಕಾರ್ಮಿಕರಾಗಿ ಅಕ್ರಮ ಬಾಂಗ್ಲಾದ ನಾಲ್ವರು ಪ್ರಜೆಗಳು ಕೆಲಸ ಮಾಡುತ್ತಿದ್ದರು. ಅವರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಆಟೋ ಚಾಲಕರ ಸಂಘದವರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಶಕ್ಕೆ ಪಡೆದವರನ್ನು ಸುಜಾನ್ (32), ಸೋನಿಯಾ(28), ಸಂಜಿಧ್(10) ಮತ್ತು ಶಿಯಾಮ (5) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಪಶ್ಚಿಮ ಬಂಗಾಳದ ಬ್ರೋಕರ್ ಮೂಲಕ ಭಾರತಕ್ಕೆ ಬಂದಿರುವುದಾಗಿ ವಲಸಿಗರೇ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅವರ ಬಳಿ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನವೂ ಪತ್ತೆಯಾಗಿದೆ.

ಅಕ್ರಮ ನುಸುಳುಕೋರರ ವಿರುದ್ಧ ಕ್ರಮಕ್ಕೆ ಒತ್ತಾಯ:

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಅಕ್ರಮ ವಲಸಿಗರ ಹಿನ್ನೆಲೆ ಹಾಗೂ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಹಲವು ವರ್ಷಗಳಿಂದ ಈ ಬಗ್ಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸಂಘಟನೆಗಳು, ಆಂತರಿಕ ಭದ್ರತೆ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಬಾಳೆಲೆಯಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

-ಬಿಂದುಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ