ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಆಘಾತಕ್ಕೊಳಗಾಗಿರುವ ಹೆಚ್.ಡಿ. ರೇವಣ್ಣ, 'ಆಕೆ ನನ್ನ ತಾಯಿಯಷ್ಟೇ ಅಲ್ಲ, ದೇವತೆ ಸಮಾನ' ಎಂದು ಹೇಳುತ್ತಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಾಯಿಗೆ ತಿರುಪತಿ ಪ್ರಸಾದ ನೀಡಿದ್ದ ಕೊನೆಯ ಕ್ಷಣವನ್ನು ನೆನೆದು ಅವರು ಕಣ್ಣೀರಿಟ್ಟರು.

ಹಾಸನ (ಜು.19): 'ಆಕೆ ತಾಯಿ ಅಷ್ಟೇ ಅಲ್ಲ ಸಾರ್.. ನನಗೆ ದೇವತೆ ಸಮಾನ ಸಾರ್.. ನನ್ನ ದೇವರನ್ನು ಕಳ್ಕೊಂಡೆ...' ತಾಯಿ ಚೆನ್ನಮ್ಮ ನಿಧನದಿಂದ ಆಘಾತಕ್ಕೊಳಗಾಗಿರುವ ಹೆಚ್‌ಡಿ ರೇವಣ್ಣ ಕಣ್ಣೀರಾಕುತ್ತಾ ಹೇಳಿದ ಮಾತುಗಳಿವು.

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಧರ್ಮಪತ್ನಿ, ಹೆಚ್‌ಡಿ ರೇವಣ್ಣ ಅವರ ತಾಯಿ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯ ಸ್ಥಿರವಾಗಿದೆ ಎಂದಿದ್ದ ವೈದ್ಯರು, ಹುಷಾರಾಗಿ ಮನೆಗೆ ವಾಪಸ್ ಬರುತ್ತಾಳೆ ಎಂದು ನಂಬಿದ್ದ ಕುಟುಂಬಕ್ಕೆ ಚೆನ್ನಮ್ಮ ಅವರ ಸಾವು ಬರಸಿಡಿಲು ಬಡಿದಂತಾಗಿದೆ.. ಪತ್ನಿಯ ನಿಧನದಿಂದ ಹೆಚ್‌ಡಿ ದೇವೇಗೌಡರು ಮೌನವಾಗಿ ರೋದಿಸುತ್ತಿದ್ದರೆ, ಇತ್ತ ಮಕ್ಕಳು ಅಮ್ಮನ ಸಾವು ಕೇಳಿದಾಗಿಂದ ಕಣ್ಣೀರು ಹಾಕುತ್ತಲೇ ಇದ್ದಾರೆ.

ತಾಯಿ ನೆನೆದು ಹೆಚ್‌ಡಿ ರೇವಣ್ಣ ಕಣ್ಣೀರು

ಇಂದು ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯುವುದರಿಂದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ರೇವಣ್ಣ, ತಾಯಿ ನೆನಪಾಗುತ್ತಿದ್ದಂತೆ ದುಃಖ ಉಮ್ಮಳಿಸಿ ಬಂದು ತಡೆಯಲಾರದೆ ಕಣ್ಣೀರಿಟ್ಟರು. ಹಸಿವು ಅಂತಾ ಬಂದ ಎಷ್ಟೋ ಜನರಿಗೆ ಅನ್ನ ಹಾಕಿದ್ದಾಳೆ ಸರ್. ನನ್ನ ದೇವರು ಅವ್ರು ಅವರನ್ನ ಕಳ್ಕೊಂಡುಬಿಟ್ಟೆ ಸಾರ್‌... ಎಂದು ಕಣ್ಣೀರು ಹಾಕಿದ್ರು.

ಕೊನೆಯದಾಗಿ ತಿರುಪತಿ ಪ್ರಸಾದ್ ಸೇವಿಸಿದ ಚೆನ್ನಮ್ಮ

ಕೊನೆಯದಾಗಿ ತಿರುಪತಿಯಿಂದ ತಂದ ಪ್ರಸಾದ ಕೊಟ್ಟು ಮಾತನಾಡಿಸಿ ಆರೋಗ್ಯ ವಿಚಾರಿದ್ದೆ. ಕೆಲವು ದಿನಗಳಿಂದಲೂ ವಯೋಸಹಜ ಅನಾರೋಗ್ಯ ಕಾಡುತ್ತಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆಯೂ ವೈದ್ಯರು ಅಮ್ಮನ ಆರೋಗ್ಯ ಚೆನ್ನಾಗಿದೆ ಗುಣವಾಗ್ತಾರೆ ಅಂತಾ ಹೇಳಿದ್ರು ನಮಗೆ ಅದೇ ನಂಬಿಕೆ ಇತ್ತು. ಅಮ್ಮ ಎಂದಿನಂತೆ ಚಿಕಿತ್ಸೆ ಪಡೆದು ವಾಪಸ್ ಬರುತ್ತಾಳೆ ಎಂದೇ ನಂಬಿದ್ದೆವು. ಆದರೆ ಅವರು ಬರಲಿಲ್ಲ ಸಾರ್.. ಎಂದು ರೋದಿಸಿದರು.