'ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ವಿಷಾದನೀಯ'
ರಾಜ್ಯದಲ್ಲಿಯೇ ಕನ್ನಡ ಅಸ್ತಿತ್ವಕ್ಕೆ ಹೋರಾಟ|ರಾಜ್ಯದಲ್ಲಿಯೇ ಕನ್ನಡ ಉಳಿವಿಗೆ ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ವಿಷಾದನೀಯ|ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡಕ್ಕೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ| ಕನ್ನಡ ನೆಲ, ಜಲ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕಾಗಿದೆ| ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಉಳಿವು ಹಾಗೂ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವುದು ನೋವು ತರಿಸಿದೆ ಎಂದ ಮಾಜಿ ಸಚಿವ ಶಿವರಾಜ್ ತಂಗಡಗಿ|
ಕನಕಗಿರಿ(ಡಿ.06): ರಾಜ್ಯದಲ್ಲಿಯೇ ಕನ್ನಡ ಉಳಿವಿಗೆ ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಸುವರ್ಣಗಿರಿ ಉದ್ಯಾನದ ರಂಗಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ-ಕಾಲೇಜಿಗೊಂದು ಕಾರ್ಯಕ್ರಮದ ಸಮಾರೋಪದ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡಕ್ಕೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ. ನಮ್ಮ ಭಾಷೆ ರಾಜ್ಯದ ವಿವಿಧೆಡೆ ವಿಭಿನ್ನವಾಗಿ ಮಾತನಾಡುತ್ತಾರೆ. ಕನ್ನಡ ನೆಲ, ಜಲ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕಾಗಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಉಳಿವು ಹಾಗೂ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವುದು ನೋವು ತರಿಸಿದೆ. ಉದ್ಯೋಗ ಕ್ಷೇತ್ರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಜನರು ಸಹ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಆದರಿಂದ ಸರ್ಕಾರ ಈ ಕುರಿತು ಚಿಂತನೆ ನಡೆಸಿ ಕನ್ನಡಿಗರಿಗೂ ನ್ಯಾಯ ದೊರಕಿಸಿ ಕೊಟ್ಟರೆ ನಾಡಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿದ್ಯಾರ್ಥಿಗಳು ನೌಕರಿ ಪಡೆಯಲು ಓದದೇ ಸಾಧಿಸುವುದಕ್ಕಾಗಿ ಓದಿ. ಸಮಾಜ ಹಾಗೂ ಕುಟುಂಬವನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸುವ ಮಹಿಳೆಯರಿಗೆ ಗೌರವ ಕೊಡುವುದು ಕಲಿಯ ಬೇಕು ಎಂದು ಕರೆ ನೀಡಿದರು.
ಕಸಾಪ ತಾಲೂಕು ಘಟಕದ ವತಿಯಿಂದ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ-ಕಾಲೇಜಿಗೊಂದು ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ, ರಸಪ್ರಶ್ನೆ, ಜಾನಪದ, ಚಲನಚಿತ್ರಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ಮಕ್ಕಳಿಗೆ ಪಾರಿತೋಷಕ, ಪ್ರಶಸ್ತಿ ನೀಡಿ ಗೌರವಿಸಿತು. ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬ್ ಹುಸೇನ ಬೇಲ್ದಾರ್ ಪ್ರಾಸ್ತಾವಿಕ ಮಾತನಾಡಿ, ತಾಲೂಕು ಕಸಾಪ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿವೆ. ನೆರೆ ಸಂತ್ರಸ್ತರಿಗೆ ದವಸ ಧಾನ್ಯ ಹಾಗೂ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ವೇಳೆ ತಾಪಂ ಸದಸ್ಯ ಬಸವಂತಗೌಡ ಪಾಟೀಲ್, ಪಪಂ ಮುಖ್ಯಾಧಿಕಾರಿ ತಿರುಮಲಮ್ಮ, ಸದಸ್ಯರಾದ ಶರಣಬಸಪ್ಪ ಭತ್ತದ, ಖಾಜಸಾಬ್ ಗುರಿಕಾರ, ಪಾಷುಸಾಬ್ ಮುಲ್ಲಾರ್, ಹುಲುಗಪ್ಪ ವಾಲೇಕಾರ, ಮಂಜುನಾಥ ಗಡಾದ, ಪ್ರಮುಖರಾದ ಸಿದ್ಧಪ್ಪ ನಿರಲೂಟಿ, ವೀರೇಶ ಸಮಗಂಡಿ, ಕೆ. ಗಂಗಾಧರಸ್ವಾಮಿ, ಡಾ. ದೇವರಾಜ್ ಮಂಗಳೂರು, ನವಲಿ ಹೋಬಳಿ ಕಸಾಪ ಅಧ್ಯಕ್ಷ ವಿರೂಪಣ್ಣ ಕಲ್ಲೂರು, ಕಸಾಪ ಜಿಲ್ಲಾ ಮಾಧ್ಯಮ ಸಮಿತಿ ಸದಸ್ಯ ಪ್ರವೀಣ ಕೋರಿ, ಹಿರಿಯ ಶಿಕ್ಷಕ ಪರಸಪ್ಪ ಹೊರಪೇಟೆ, ಯುವ ಮುಖಂಡ ಕನಕರೆಡ್ಡಿ ಕೆರಿ ಸೇರಿದಂತೆ ಕನ್ನಡಾಭಿಮಾನಿಗಳು ಇದ್ದರು.