ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ನ.16):  ಮಾಜಿ ಸಚಿವ ಹಾಗೂ ಹಾವೇರಿ ಜಿಲ್ಲೆ ಕಾಂಗ್ರೆಸ್‌ ನಾಯಕ ರುದ್ರಪ್ಪ ಲಮಾಣಿ ಅಧಿಕಾರದಲ್ಲಿದ್ದಾಗಲೇ ಅವರ ಪುತ್ರ ದರ್ಶನ್‌ನನ್ನು ಗಾಳಕ್ಕೆ ಬೀಳಿಸಿಕೊಂಡಿದ್ದ ಡ್ರಗ್ಸ್‌ ದಂಧೆಕೋರರು, ಬೆಂಗಳೂರಿನ ಸಂಜಯನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ‘ಮಿಡ್‌ ನೈಟ್‌ ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದರು ಎಂಬ ಮಹತ್ವದ ಸಂಗತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾಜಿ ಸಚಿವರ ಪುತ್ರನನ್ನು ಹೀಗೆ ಖೆಡ್ಡಾಕ್ಕೆ ಬೀಳಿಸಿಕೊಳ್ಳಲು ಎರಡು ದಂಧೆಗಳು ಕಾರಣವಾಗಿದ್ದವು. ಒಂದು ಡ್ರಗ್ಸ್‌ ದಂಧೆಯಾಗಿದ್ದರೆ, ಇನ್ನೊಂದು ತಮ್ಮ ರಿಯಲ್‌ ಎಸ್ಟೇಟ್‌ ವ್ಯವಹಾರಗಳಿಗೆ ಸಚಿವರ ಪ್ರಭಾವ ಬಳಸಿಕೊಳ್ಳುವುದು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಹಾವೇರಿ ಕ್ಷೇತ್ರದ ಶಾಸಕರಾಗಿದ್ದ ರುದ್ರಪ್ಪ ಲಮಾಣಿ ಅವರು, ಮಾಜಿ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೊನೆ ಅವಧಿಯಲ್ಲಿ ಮಂತ್ರಿಗಿರಿ ಪಡೆದಿದ್ದರು. ಆಗ ಸದಾಶಿವನಗರದಲ್ಲಿ ಮಾಜಿ ಸಚಿವರು ನೆಲೆಸಿದ್ದರು. ಅಲ್ಲೇ ನೆಲೆಸಿದ್ದ ಆರೋಪಿಗಳಾದ ಹೇಮಂತ್‌, ಸುನೀಶ್‌ ಹೆಗಡೆ, ಪ್ರಸಿಧ್‌ ಶೆಟ್ಟಿ ಹಾಗೂ ಸುಜಯ್‌ ಅವರು ಕಿರಿಯ ವಯಸ್ಸಿನ ಲಮಾಣಿ ಪುತ್ರ ದರ್ಶನ್‌ ಸ್ನೇಹ ಮಾಡಿದ್ದರು.

ಡ್ರಗ್ಸ್‌ ಆರೋಪಿಗೆ ಮಾಜಿ ಸಚಿವರ ಪುತ್ರನಿಂದ ಲಾಡ್ಜ್‌ನಲ್ಲಿ ಆತಿಥ್ಯ

ಈ ಸ್ನೇಹದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂಬ ಆರೋಪದ ಮೇಲೆ ದರ್ಶನ್‌ನನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಡ್ರಗ್ಸ್‌ ಜಾಲದೊಂದಿಗೆ ಮಾಜಿ ಸಚಿವರ ಒಡನಾಟದ ಸಂಗತಿಗಳು ಬಯಲಾಗುತ್ತಿವೆ. ಗೋವಾದಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ಗೆಳೆಯರೊಂದಿಗೆ ತಂಗಿದ್ದ ದರ್ಶನ್‌ ಸ್ವತಃ ಡ್ರಗ್ಸ್‌ ವ್ಯಸನಿಯೇ ಎಂಬ ಶಂಕೆ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವೈದ್ಯರ ಮಕ್ಕಳ ಡ್ರಗ್ಸ್‌ ಪಾರ್ಟಿ:

ಡ್ರಗ್ಸ್‌ ಪ್ರಕರಣದಲ್ಲಿ ದರ್ಶನ್‌ ಲಮಾಣಿ ಹಾಗೂ ಆತನ ಸ್ನೇಹಿತರಾದ ಕೊಡಗು ಮೂಲದ ಹೇಮಂತ್‌, ಕುಮಟಾ ತಾಲೂಕಿನ ಸುನೀಶ್‌ ಹೆಗಡೆ, ಚಿತ್ರದುರ್ಗದ ಸುಜಯ್‌, ಕುಂದಾಪುರದ ಪ್ರಸಿದ್ಧ ಶೆಟ್ಟಿಸೇರಿದಂತೆ ಒಂಬತ್ತು ಮಂದಿ ಸೆರೆಯಾಗಿದ್ದಾರೆ. ಆರೋಪಿತರು ಅಗರ್ಭ ಶ್ರೀಮಂತಿಕೆ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ.

ಈ ಪೈಕಿ ಹೇಮಂತ್‌ ಸದಾಶಿವನಗರ ಸಮೀಪ ಜಿಮ್‌, ಒನ್‌ ಆಫ್‌ ಎಂಬ ಹೆಸರಿನ ಕಂಪನಿ ನಡೆಸುತ್ತಿದ್ದಾನೆ. ಈ ಕಂಪನಿಯು ವ್ಯವಹಾರ ದೇಹಾದಾಢ್ರ್ಯ ಪಟುಗಳಿಗೆ ಪೌಷ್ಟಿಕ ಆಹಾರ ಮಾರಾಟ ಮಾಡುವುದು. ವೈದ್ಯರ ಮಕ್ಕಳಾದ ಸುನೀಶ್‌ ಹಾಗೂ ಪ್ರಸಿದ್ಧ ಶೆಟ್ಟಿಅವರ ಪೋಷಕರು ವೈದ್ಯರಾಗಿದ್ದು, ಡಾಲ​ರ್‍ಸ್ ಕಾಲೋನಿಯಲ್ಲಿ ನೆಲೆಸಿದ್ದಾರೆ. ಈ ಇಬ್ಬರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದಾರೆ. ಸುಜಯ್‌ ತಂದೆ ಕೂಡಾ ಬಿಲ್ಡರ್‌ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಸ್ ಕೇಸಲ್ಲಿ ಪ್ರತಿಷ್ಠಿತರ ಮಕ್ಕಳ ಬಂಧನ; ಡ್ರಗ್ಸ್‌ ಜೊತೆ ನಡೀತಿತ್ತು ಸೆಕ್ಸ್ ದಂಧೆ!

ದರ್ಶನ್‌ ಪದವಿ ಓದುವಾಗಲೇ ಡ್ರಗ್ಸ್‌ ಜಾಲದ ಸದಸ್ಯರ ಬಲೆಗೆ ದರ್ಶನ್‌ ಬಿದ್ದಿದ್ದಾನೆ. ಆರೋಪಿಗಳ ಜತೆ ಸೇರಿ ಡಾರ್ಕ್ನೆಟ್‌ನಲ್ಲಿ ಡ್ರಗ್ಸ್‌ ಖರೀದಿಸುತ್ತಿದ್ದರು. ಮಧ್ಯರಾತ್ರಿ ಪಾರ್ಟಿಗಳನ್ನು ದರ್ಶನ್‌ಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಮಾಡುತಿತದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಲ್ಲಿ ಓದು ಮುಗಿಸಿ ಬಂದಿದ್ರು

ಹೇಮಂತ್‌, ಸುನೀಶ್‌ ಹೆಗಡೆ ಹಾಗೂ ಪ್ರಸಿಧ್‌ ಶೆಟ್ಟಿ ಕೆಲ ಕಾಲ ಲಂಡನ್‌ನಲ್ಲಿ ನೆಲೆಸಿದ್ದರು. ಬಳಿಕ ನಗರಕ್ಕೆ ಮರಳಿ ರಿಯಲ್‌ ಎಸ್ಟೇಟ್‌ ವ್ಯವಹಾರ ಶುರು ಮಾಡಿದ್ದರು. ಲಾಕ್‌ಡೌನ್‌ ಮುನ್ನ ಸಹ ವಿದೇಶ ಪ್ರವಾಸ ಹೋಗಿದ್ದ ಆರೋಪಿಗಳು, ಆರು ತಿಂಗಳ ಹಿಂದಷ್ಟೆ ವಾಪಸಾಗಿದ್ದರು ಎಂದು ಮೂಲಗಳು ಹೇಳಿವೆ.

ಗೋವಾದಲ್ಲಿ ದಿನಕ್ಕೆ 1 ಲಕ್ಷ ಖರ್ಚು!

‘ಡ್ರಗ್ಸ್‌ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಸಚಿವರ ಪುತ್ರ ದರ್ಶನ್‌ ಹಾಗೂ ಆತನ ಗೆಳೆಯರು, ಅಲ್ಲಿ ಐಷರಾಮಿ ಹೋಟೆಲ್‌ನಲ್ಲಿ ತಂಗಿದ್ದರು. ಪ್ರತಿ ದಿನ 1 ಲಕ್ಷ ವ್ಯಯಿಸುತ್ತಿದ್ದರು. ಎರಡು ದಿನಗಳ ಹುಡುಕಾಟದ ನಂತರ ಅವರನ್ನು ಪತ್ತೆ ಹಚ್ಚಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.