ಬೆಂಗಳೂರು(ನ.12): ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿದ್ದ ತನ್ನ ಸ್ನೇಹಿತನಿಗೆ ಗೋವಾದಲ್ಲಿ ಅಶ್ರಯ ಕಲ್ಪಿಸುವ ಮುನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಸತಿ ಗೃಹದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ವಾಸ್ತವ್ಯದ ವ್ಯವಸ್ಥೆ ಮಾಡಿದ್ದ ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ವಿದೇಶಿ ಅಂಚೆ ಕಚೇರಿ ಬಳಿ ವಿದೇಶದಿಂದ ಪಾರ್ಸಲ್‌ನಲ್ಲಿ ಬಂದಿದ್ದ ಹೈಡ್ರೋ ಗಾಂಜಾ ಸ್ವೀಕರಿಸಲು ಮಾಜಿ ಸಚಿವರ ಪುತ್ರನ ಸ್ನೇಹಿತರಾದ ಹೇಮಂತ್‌, ಸುಜಯ್‌, ಸುನೇಶ್‌ ಹಾಗೂ ಪ್ರಸಿದ್ಧ ಶೆಟ್ಟಿ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು, ಪಾರ್ಸಲ್‌ ಸ್ವೀಕರಿಸಲು ಬಂದ ಸುಜಯ್‌ನನ್ನು ಬಂಧಿಸಿದ್ದರು. ಆದರೆ ಆ ವೇಳೆ ಪೊಲೀಸರಿಂದ ಉಳಿದವರು ತಪ್ಪಿಸಿಕೊಂಡಿದ್ದರು.

ಸಂಜನಾ, ರಾಗಿಣಿಯನ್ನು ಟಾರ್ಗೆಟ್‌ ಮಾಡ​ಲಾಗ್ತಿದೆ: ನಟ ಜೈಜಗದೀಶ್‌

ಹೀಗೆ ಬೆಂಗಳೂರಿನಲ್ಲಿ ಪೊಲೀಸರ ಬಲೆಯಿಂದ ಪಾರಾದ ದರ್ಶನ್‌ನ ಸ್ನೇಹಿತರ ಪೈಕಿ ಹೇಮಂತ್‌, ತನ್ನೂರು ಕೊಡುಗೆ ತೆರಳಿದ್ದಾನೆ. ಇನ್ನುಳಿದ ಸುನೇಶ್‌, ಆಶಿಶ್‌ ಮತ್ತು ಪ್ರಸಿದ್‌ ಗೋವಾಕ್ಕೆ ಪರಾರಿಯಾಗಿದ್ದರು. ಕೊಡಗಿನಲ್ಲಿದ್ದ ಹೇಮಂತ್‌, ಮರುದಿನ ದರ್ಶನ್‌ಗೆ ಕರೆ ಮಾಡಿ ಸಹಾಯ ಕೋರಿದ್ದಾನೆ. ಆಗ ಗೆಳೆಯನ ರಕ್ಷಣೆಗೆ ಧಾವಿಸಿದ ಮಾಜಿ ಸಚಿವರ ಪುತ್ರ, ‘ನೀನು ಕೂಡಲೇ ಹಾವೇರಿ ಜಿಲ್ಲೆಗೆ ಬಾ. ಇಲ್ಲಿ ನಿನಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇನೆ’ ಎಂದಿದ್ದ.
ಅಂತೆಯೇ ಕೊಡಗಿನಿಂದ ಹಾವೇರಿ ಜಿಲ್ಲೆಗೆ ತೆರಳಿದ ಹೇಮಂತ್‌ಗೆ ರಾಣೆಬೆನ್ನೂರಿನ ವಸತಿಗೃಹದಲ್ಲಿ ದರ್ಶನ್‌ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದಾನೆ. ಆ ದಿನ ಆ ವಸತಿ ಗೃಹದಲ್ಲೇ ಉಳಿದುಕೊಂಡಿದ್ದ ಹೇಮಂತ್‌, ಮಾರನೆ ದಿನ ಗೋವಾಕ್ಕೆ ದರ್ಶನ್‌ ಜೊತೆಯಲ್ಲೇ ಗೋವಾಕ್ಕೆ ಪ್ರಯಾಣ ಬೆಳೆಸಿದ್ದಾನೆ. ಅಲ್ಲಿ ಆಗಲೇ ಇದ್ದ ಸುನೇಶ್‌, ಆಶಿಶ್‌ ಹಾಗೂ ಪ್ರಸಿದ್‌ ಜೊತೆಯಾಗಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಪೊಲೀಸರು ತಮ್ಮ ಬೆನ್ನು ಹತ್ತಿರುವ ವಿಚಾರ ತಿಳಿದ ಆರೋಪಿಗಳು, ಗೋವಾದಲ್ಲಿ ಪ್ರತಿ ದಿನ ಹೋಟೆಲ್‌ ಬದಲಾಯಿಸುತ್ತಿದ್ದರು. ಎರಡು ದಿನಗಳು ಗೆಳೆಯರ ಜತೆ ಓಡಾಡಿದ್ದ ದರ್ಶನ್‌, ಆ ವೇಳೆ ಡ್ರಗ್ಸ್‌ ಪ್ರಕರಣದ ಪಾರಾಗುವ ಬಗ್ಗೆ ಅವರೆಲ್ಲ ಸಮಾಲೋಚಿಸಿದ್ದರು. ಗೋವಾ ಸಂಚಾರದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.