ತಮ್ಮ ಇಮೇಜ್ ಉಳಿಸಿಕೊಳ್ಳಲು ಮೋದಿಯಿಂದ ಸುಳ್ಳಿನ ಪ್ಯಾಕೇಜ್: ಯಾವಗಲ್
* ಕೋವಿಡ್‌ನಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಯಾವಗಲ್
* ಕೊರೋನಾ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ
* ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಅಸುನೀಗಿದ ಸಾವಿರಾರು ಅಮಾಯಕರು
ಗಜೇಂದ್ರಗಡ(ಜು.18): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಹೀಗಾಗಿ ದೇಶದ ಜನತೆಯ ದಾರಿ ತಪ್ಪಿಸಲು ಪ್ರಧಾನಿ ಮೋದಿ ಅವರು ತಮ್ಮ ಇಮೇಜ್ ಉಳಿಸಿಕೊಳ್ಳಲು ಸುಳ್ಳಿನ ಪ್ಯಾಕೇಜ್‌ಗಳನ್ನು ಘೋಷಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಆರೋಪಿಸಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ಕುಟುಂಬ, ಸಂತ್ರಸ್ತರು ಹಾಗೂ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಸಹಾಯ ಹಸ್ತ ಕಾರ್ಯಕ್ರಮ ಹಿನ್ನಲೆಯಲ್ಲಿ ಅವರು ಶನಿವಾರ ಸೂಡಿ ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು.
ಕೋವಿಡ್ ಅಲೆಯು ದೇಶದಲ್ಲಿ ಸುನಾಮಿಯಂತೆ ಅಪ್ಪಳಿಸಲಿದೆ. ಹೀಗಾಗಿ ತುರ್ತು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೀಡಿದ್ದ ಸಲಹೆಯನ್ನು ಅಂದು ಕುಹಕವಾಡಿದ್ದ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಅಮಾಯಕರು ಅಸುನೀಗಿದ್ದಾರೆ. ಆದರೆ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಸಹ ಬಿಜೆಪಿ ನೇತೃತ್ವದ ಸರ್ಕಾರ ಮೀನಮೇಷ ಮಾಡುತ್ತಿದೆ.
ಕೋವಿಡ್ 3ನೇ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದರೂ ಸಹ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗದೇ ಪರೀಕ್ಷೆಗಳನ್ನು ನಡೆಸುತ್ತಿರುವುದು ವಿಪರ್ಯಾಸ. ಇತ್ತ ಪರಿಹಾರ ನೀಡಲಾಗದ ಅಸಹಾಯಕ ಬಿಜೆಪಿ ಸರ್ಕಾರ ಕೋವಿಡ್‌ನಿಂದ ಅಸುನೀಗಿದವರ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿವೆ. ಹೀಗಾಗಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಕಾಂಗ್ರೆಸ್‌ನಿಂದ ಸಾಂತ್ವನ, ಸಹಾಯದ ಜೊತೆಗೆ ಮೃತ ಕುಟುಂಬಗಳಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
'ಬಿಜೆಪಿ ಸರ್ಕಾರ ರೈತರ ಕಣ್ಣೀರು ಒರೆಸುವ ಕಾರ್ಯ ಮಾಡಿದೆ'
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕೊರೋನಾ 1 ಮತ್ತು 2ನೇ ಅಲೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರಗಳ ನೀತಿಯಿಂದ ಜಿಲ್ಲೆಯಲ್ಲಿನ ಜನತೆ ಸಹ ಬೆಡ್ ಮತ್ತು ಆಕ್ಸಿಜನ್‌ಗಾಗಿ ಪರದಾಡುವ ದುಸ್ಥಿತಿ ನಿರ್ಮಾಣವಾಗಿತ್ತು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಬಿಜೆಪಿ ಆಡಳಿತ ನಿದ್ರೆಗೆ ಜಾರಿದ್ದರೆ ಕಾಂಗ್ರೆಸ್ ಜನರ ಪರವಾಗಿ ಆಸ್ಪತ್ರೆ ತೆರೆಯುವುದರ ಜೊತೆಗೆ ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಮಾಡಿದ್ದಾರೆ ಎಂದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿಸೇರಿ ನೀಡಿದ ಹತ್ತು ಹಲವು ಆಶ್ವಾಸನೆಗಳ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದರೆ ಇತ್ತ ಸಿಎಂ ಬಿಎಸ್‌ವೈ ವಿರುದ್ಧ ಸ್ವಪಕ್ಷೀಯರು ಗಂಭೀರ ಅರೋಪವನ್ನು ಮಾಡುತ್ತಿದ್ದಾರೆ. ಹೀಗಾಗಿ ಆರೋಪಗಳನ್ನು ಆಧಾರಿಸಿ ತನಿಖೆಗೆ ಆಗ್ರಹಿಸಲಾಗುವುದು ಎಂದರು.
ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ, ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಐ.ಎಸ್. ಪಾಟೀಲ, ಅಂದಪ್ಪ ಬಿಚ್ಚೂರ, ಬಿ.ಬಿ. ಸೋಮನಕಟ್ಟಿಮಠ, ಗ್ರಾಪಂ ಅಧ್ಯಕ್ಷೆ ಹುಲಿಗೆವ್ವ ಕಡಬಿನ, ಉಪಾಧ್ಯಕ್ಷೆ ಗಂಗಮ್ಮ ಗೊರವರ, ಹುಯಾಯೂನ್ ಮಾಗಡಿ, ಜಗದೀಶ ಹಿರೇಮಠ, ನಿಂಗಪ್ಪ ಕಾಶಪ್ಪನವರ, ಶರೀಪ್ ಡಾಲಾಯತ ಸೇರಿ ಇತರರು ಇದ್ದರು.