ಶರಾವತಿ ಸಂತ್ರಸ್ತರ ಮರೆತ ಸಿಎಂ, ಮಾಜಿ ಸಿಎಂ : ತೀ.ನ.ಶ್ರೀನಿವಾಸ್
- ಶರಾವತಿ ಸಂತ್ರಸ್ತರ ಮರೆತ ಸಿಎಂ, ಮಾಜಿ ಸಿಎಂ
- ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸದಿದ್ದರೆ ಯಡಿಯೂರಪ್ಪರಿಗೆ ದೇವರು ಕ್ಷಮಿಸಲ್ಲ: ತೀ.ನ.ಶ್ರೀನಿವಾಸ್ ಹೇಳಿಕೆ
ಶಿವಮೊಗ್ಗ (ನ.25) : ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶಿಕಾರಿಪುರದ ಶ್ರೀ ಹುಚ್ಚುರಾಯಸ್ವಾಮಿ ದೇವರು ಕ್ಷಮಿಸುವುದಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಹರಿಹಾಯ್ದರು.
ಇಲ್ಲಿನ ಪ್ರೆಸ್ ಟ್ರಸ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 20 ದಿನಗಳಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ. ಆದರೆ, ಅವರ ಕ್ಷೇತ್ರದಲ್ಲೇ ಅಂದಾಜು 14 ಸಾವಿರ ರೈತರ ಸಾಗುವಳಿ ಅರ್ಜಿಯನ್ನು ವಿಚಾರಣೆ ಮಾಡದೆ ವಜಾ ಮಾಡಲಾಗಿದೆ ಎಂದು ಕುಟುಕಿದರು.
ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಕೈ-ಕಮಲ ರಾಜಕಾರಣ
ಬಿ.ಎಸ್. ಯಡಿಯೂರಪ್ಪ ಅವರು ಸಾಗುವಳಿದಾರರ ಬಗ್ಗೆ ಅಪಾರ ಪ್ರೇಮ ಇಟ್ಟುಕೊಂಡವರು, ಬಗರ್‌ಹುಕುಂ ಚಾಂಪಿಯನ್ ಎಂದು ಘೋಷಿಸಿಕೊಂಡವರು. ಅರಣ್ಯ ಭೂಮಿ ಸಾಗುವಳಿದಾರರ ಪರ ಪಾದಯಾತ್ರೆ ಮಾಡಿದವರು. ಈಗ ಅವರಿಗೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲವಾಗಿದೆ. ಈಗೀನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ದೂರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಬಂದಾಗ ಸಂತ್ರಸ್ತರ ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ 20 ದಿನಗಳಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದಾರೆ. ಮಾತು ಕೊಟ್ಟು ಒಂದು ವಾರವಾರ ಕಳೆದಿದೆ. ಯಡಿಯೂರಪ್ಪ ಅಲ್ಲ, ಮುಖ್ಯಮಂತ್ರಿ ಅವರಿಗೂ ಆ ಬಗ್ಗೆ ಮನಸ್ಸಿಲ್ಲ. ಜೊತೆಗೆ ಬಿಜೆಪಿ ಶಾಸಕರಿಗೂ ಆಸಕ್ತಿ ಇಲ್ಲ. ಸಂಸದರೂ ಸುಮ್ಮನಿದ್ದಾರೆ. ಇಡೀ ಸರ್ಕಾರವೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಗೋಡು ತಿಮ್ಮಪ್ಪ ಅವರು ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಯಾವುದೋ ಒಂದೆರಡು ಕೇಸುಗಳಲ್ಲಿ ನ್ಯಾಯಾಲಯದ ತೀರ್ಪು ಬಂದಿರುವುದನ್ನೇ ಗಮನದಲ್ಲಿಟ್ಟುಕೊಂಡು ಎಲ್ಲ ಸಂತ್ರಸ್ತರಿಗೂ ಅನ್ವಯಿಸುವಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಿಂದ ಹಕ್ಕುಪತ್ರ ಪಡೆದಿರುವವರೂ ಕೂಡ ಸಂಕಟ ಅನುಭವಿಸುತ್ತಿದ್ದಾರೆ. ವಿಚಾರಣೆ ಮಾಡದೇ ಸಾವಿರಾರು ಅರ್ಜಿಗಳನ್ನು ವಜಾ ಮಾಡುತ್ತಿದ್ದಾರೆ. ಈಗಾಗಲೇ ಹಕ್ಕುಪತ್ರ ಪಡೆದವರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಶಿವಮೊಗ್ಗದಲ್ಲಿ ಎರಡು ದಿನ ಇದ್ದು ಹೋಗಲಿ:
ಬಿಜೆಪಿ ತಂಡ ಸಮಸ್ಯೆ ಆಲಿಸಲು ಶಿವಮೊಗ್ಗಕ್ಕೆ ಬರುತ್ತಿಲ್ಲ. ಬದಲು ಚುನಾವಣಾ ಸಮಾಲೋಚನೆ ಮಾಡಲು ಬರುತ್ತಿದ್ದಾರೆ ಎಂದು ತೀ.ನಾ.ಶ್ರೀನಿವಾಸ್ ಆರೋಪಿಸಿದರು. ಈಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿ ಕಾರ್ಯಕ್ರಮ ಹಿನ್ನೆಲೆ ನ.25ರಂದು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಅವರು ಹಾಗೆ ಬಂದು ಹೀಗೆ ಹೋಗುವುದಲ್ಲ. ಮಲೆನಾಡಿನಲ್ಲಿ ಒಂದೆರಡು ದಿನ ಉಳಿದು ಇಲ್ಲಿನ ಜನರ ಪರಿಸ್ಥಿತಿಯನ್ನು ಆಲಿಸಬೇಕು. ಎಲೆಚುಕ್ಕೆ ರೋಗದಿಂದ ಸುಮಾರು 40 ಸಾವಿರ ರೈತರು ಬೀದಿಪಾಲಾಗಿದ್ದಾರೆ. ಕೊಳೆ ರೋಗದಿಂದ ತತ್ತರಿಸಿ ಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸಿಎಂ ಖುದ್ದು ಪರಿಶೀಲನೆ ನಡೆಸಿದರೆ ಅವರಿಗೆ ಸಮಸ್ಯೆ ಬಗ್ಗೆ ಅರಿವಾಗಲಿದೆ ಎಂದರು.
ಸಿಎಂಗೆ ತಾಕತ್ತಿದ್ರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ: ಮಧು ಬಂಗಾರಪ್ಪ
ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ನಮ್ಮ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ನಮ್ಮ ಹೋರಾಟ ಅನಿವಾರ್ಯ. ಸಂತ್ರಸ್ತರ ನಡೆ ಶರಾವತಿ ಡ್ಯಾಮಿನ ಕಡೆ ಚಳುವಳಿಯನ್ನು ಆರಂಭಿಸುತ್ತೇವೆ. ಕಾಂಗ್ರೆಸ್ ನೇತೃತ್ವದಲ್ಲಿ ನ.28ರಂದು ನಡೆಯುವ ಸಂತ್ರಸ್ತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ
- ತೀ.ನ.ಶ್ರೀನಿವಾಸ್