Asianet Suvarna News Asianet Suvarna News

ಸಿಎಂಗೆ ತಾಕತ್ತಿದ್ರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ: ಮಧು ಬಂಗಾರಪ್ಪ

ಮುಖ್ಯಮಂತ್ರಿಗಳು ಮಾತೆತ್ತಿದರೆ ಧಮ್‌, ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಿಜವಾಗಿಯೂ ತಾಕತ್ತು ಇದ್ದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ ಎಂದು ಕಾಂಗ್ರೆಸ್‌ ಮುಖಂಡ ಮಧು ಬಂಗಾರಪ್ಪ ಗುಡುಗಿದರು.

Sharavati victims problems resolved if the CM is strong says madhu rav
Author
First Published Nov 16, 2022, 1:31 PM IST

ಶಿವಮೊಗ್ಗ (ನ.16) : ಮುಖ್ಯಮಂತ್ರಿಗಳು ಮಾತ್ತೆತ್ತಿದರೆ ಧಮ್‌, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಿಜವಾಗಿಯೂ ತಾಕತ್ತು ಇದ್ದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ ಎಂದು ಕಾಂಗ್ರೆಸ್‌ ಮುಖಂಡ ಮಧು ಬಂಗಾರಪ್ಪ ಗುಡುಗಿದರು.

ಮಂಗಳವಾರ ಪತ್ರಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಸಂತ್ರಸ್ತರ ಪರವಾಗಿ ಬಿಜೆಪಿ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ. ರೈತರನ್ನು ಒಕ್ಕಲೆಬ್ಬಿಸುತ್ತಲೇ ಇದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕೇವಲ ಭರವಸೆಯ ಹೇಳಿಕೆ ಕೊಟ್ಟರೆ ಪ್ರಯೋಜನವಿಲ್ಲ. ಇದರ ವಿರುದ್ಧ ಕಾಂಗ್ರೆಸ್‌ ಜನಾಂದೋಲನವನ್ನೇ ಹಮ್ಮಿಕೊಂಡಿದೆ. ಇದರ ಜೊತೆಗೆ ಮಲೆನಾಡು ಭಾಗದ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಇದು ರಾಜಕಾರಣವಲ್ಲ. ಬದುಕಿನ ಪ್ರಶ್ನೆ ಎಂದು ಹರಿಹಾಯ್ದರು.

ಕೃಷಿ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸಿದರೆ ಕಿತ್ತೊಗೆಯುತ್ತೇನೆ

28ಕ್ಕೆ ಸಂತ್ರಸ್ತರ ಬೃಹತ್‌ ಸಮಾವೇಶ:

ನಾಡಿಗೆ ಬೆಳಕು ಕೊಟ್ಟು ಕತ್ತಲಲ್ಲಿ ಬದುಕು ಕಾಣುತ್ತಿರುವ ಸಂತ್ರಸ್ತರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ಶರಾವತಿ ಸಂತ್ರಸ್ತರ ಸವåಸ್ಯೆಯನ್ನು ಶೀಘ್ರವೇ ಪರಿಹರಿಸಲು ಒತ್ತಾಯಿಸಿ ನಾವು ನ.28ರಂದು ಶಿವಮೊಗ್ಗದಲ್ಲಿ ಸಂತ್ರಸ್ತರ ಬೃಹತ್‌ ಸಮಾವೇಶವನ್ನು ಆಯೋಜಿಸಿದ್ದೇವೆ. ಸಮಾವೇಶಕ್ಕೆ ರಾಜ್ಯದ ಕಾಂಗ್ರೆಸ್‌ ನಾಯಕರು ಆಗಮಿಸುತ್ತಾರೆ. ಇದರ ಪೂರ್ವಭಾವಿ ಸಭೆ ಇಂದು ನಡೆಯಲಿದ್ದು, ಹೋರಾಟದ ರೂಪುರೇಷೆಗಳನ್ನು ಸಭೆಯಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್‌ ಸಮಿತಿಯ ಮುಖಂಡ ಕಿಮ್ಮನೆ ರತ್ನಾಕರ್‌ ಮಾತನಾಡಿ, ಬಿಜೆಪಿ ಸರ್ಕಾರ ಸಮಸ್ಯೆಯನ್ನು ಜೀವಂತವಾಗಿ ಇಟ್ಟುಕೊಂಡಿದೆ. ಕಾಂಗೆಸ್‌ ಸರ್ಕಾರ ಸಂತ್ರಸ್ತರ ಪರವಾಗಿ ಮಾಡಿದ ಕಾಯಿದೆಗಳನ್ನೆಲ್ಲ ವಜಾ ಮಾಡಲು ಅನುಕೂಲ ಆಗುವಂತೆ ಹೊಸ ಕಾಯಿದೆಯನ್ನೇ ಮಾಡಿದೆ. ಸಂತ್ರಸ್ತರ ಕಣ್ಣೀರು ಒರೆಸುವ ತಂತ್ರಗಾರಿಕೆ ಮಾಡುತ್ತಿದೆ. ಅರಣ್ಯ ಕಾಯಿದೆಗೆ ತಿದ್ದುಪಡಿ ಮಾಡಿದರೆ ಸಾಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಧ್ಯ ತರುವ ಅಗತ್ಯವೇ ಇಲ್ಲ. ಯಾವುದೋ ಕಾರ್ಪೊರೇಷನ್‌ ವ್ಯಾಪ್ತಿಗೆ ಬರುವ ಕಾನೂನನ್ನು ಬಡವರ ಬದುಕಿಗೆ ತರುವುದು ಅರ್ಥವಿಲ್ಲ ಎಂದ ಅವರು, ಈ ಸರ್ಕಾರಕ್ಕೆ ಬಡವರ ಬದುಕು ಬೇಡ. ಬಣ್ಣ ಬೇಕು. ಬಣ್ಣವನ್ನು ಇಟ್ಟುಕೊಂಡು ಬಣ್ಣಿಸುವ ಬಿಜೆಪಿ ಸರ್ಕಾರಕ್ಕೆ ಸಮಸ್ಯೆಗಳೇ ಗೊತ್ತಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ನಾವು ಮುಂದಿಟ್ಟುಕೊಂಡು ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಪರಿಹರಿಸವ ಘೋಷಣೆ ಮಾಡುತ್ತೇವೆ ಎಂದರು.

ಸಮಿತಿಯ ಸಂಚಾಲಕ ಆರ್‌.ಪ್ರಸನ್ನಕುಮಾರ್‌ ಮಾತನಾಡಿ, ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಚ್‌ನಲ್ಲಿ ಎರಡು ನೋಟಿಫಿಕೇಷನ್ನಿಗೆ ಸಂಬಂಧಿಸಿದಂತೆ ರದ್ದಾಗಿರುವುದನ್ನೇ ಇಟ್ಟುಕೊಂಡು ಉಳಿದೆಲ್ಲಾ ಡಿನೋಟಿಫಿಕೇಷನ್‌ ರದ್ದುಮಾಡಿ ನೋಟಿಫಿಕೇಷನ್‌ ಮಾಡಿ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಿದೆ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಮಾತನಾಡಿ, ಈ ಹೋರಾಟಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲಾ, ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌, ಸಂತ್ರಸ್ತರ ಜಾಗೃತಿ ಸಮಿತಿಯ ಮುಖ್ಯ ರೂವಾರಿ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಅಮಾಯಕರ ಕೈಯಿಂದ ಕೊಲೆ-ಸುಲಿಗೆ ಮಾಡಿಸ್ತಿದೆ; ಮಧು ಬಂಗಾರಪ್ಪ

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಮಾತನಾಡಿ, ನ.28ರಂದು ಆಯನೂರಿನಿಂದ ಪಾದಯಾತ್ರೆ ಆರಂಭವಾಗುತ್ತದೆ. ಶಿವಮೊಗ್ಗದ ಸಮೀಪ ರಾಜ್ಯ ನಾಯಕರು ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ. ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ನಡೆಯುತ್ತದೆ. ಜಿಲ್ಲೆಯಲ್ಲಿಯೇ ಬಹುದೊಡ್ಡ ಹೋರಾಟ ಇದಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಎ.ರಮೇಶ್‌ ಹೆಗ್ಡೆ, ಕಲಗೋಡು ರತ್ನಾಕರ್‌, ಅನಿತಾಕುಮಾರಿ, ಎಸ್‌.ಪಿ. ದಿನೇಶ್‌, ಧರ್ಮರಾಜ್‌, ರೇಖಾ ರಂಗನಾಥ್‌. ಎನ್‌. ರಮೇಶ್‌ ಜಿ.ಡಿ. ಮಂಜುನಾಥ್‌, ಇಕ್ಕೇರಿ ರಮೇಶ್‌, ವಿಜಯಕುಮಾರ್‌, ನಗರದ ಮಹಾದೇವಪ್ಪ ಮತ್ತಿತರರು ಇದ್ದರು.

'ಮಾಡು ಇಲ್ಲವೇ ಮಡಿ’ ಹೋರಾಟ: ಬೇಳೂರು

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುದೇ ಇಲ್ಲ. ಈಗಾಗಲೇ ಶರಾವತಿ ಸಂತ್ರಸ್ತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ‘ನೇಣು ಇಲ್ಲವೇ ಹೋರಾಟ’ ಎಂಬ ನಿರ್ಧಾರಕ್ಕೆ ಸಂತ್ರಸ್ತರು ಬಂದಿದ್ದಾರೆ. ಈಗಾಗಲೇ ದಯಾಮರಣಕ್ಕೆ ಸಂತ್ರಸ್ತರು ಅರ್ಜಿ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಬಿಜೆಪಿ ಸರ್ಕಾರದ ವಿರುದ್ಧ ‘ಮಾಡು ಇಲ್ಲವೆ ಮಡಿ’ ಹೋರಾಟವನ್ನು ನಾವು ಆರಂಭಿಸಿದ್ದೇವೆ. ನ.28ರಂದು ಈ ಬೃಹತ್‌ ಹೋರಾಟಕ್ಕೆ ಕರೆಕೊಟ್ಟಿದ್ದೇವೆ. ಎತ್ತು, ಗಾಡಿ, ಮಕ್ಕಳು, ಮರಿ ಹೀಗೆ ಕುಟುಂಬ ಸಮೇತ ನ.28ರಂದು ಮಲೆನಾಡಿನ ಎಲ್ಲ ಹಳ್ಳಿಗಳ ರಸ್ತೆಗಳು ಶಿವಮೊಗ್ಗಕ್ಕೆ ಸೇರಿಕೊಳ್ಳುತ್ತವೆ ಎಂದು ತಿಳಿಸಿದರು.

Follow Us:
Download App:
  • android
  • ios