ಸರಕಾರ ಉಳಿಸಲು ಮಾಜಿ ಸಿಎಂ ಸಿದ್ದುಗೆ ದೇವೇಗೌಡರ ಕಿವಿಮಾತು

ಸೋತವರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿಮಾತೊಂದು ಹೇಳಿದ್ದಾರೆ. ಏನದು?

Siddaramaih must organise cong without disturbing govt says HDD

ಬೆಂಗಳೂರು (ಜೂ.22): ಚುನಾವಣೆಯಲ್ಲಿ ಸೋಲನುಭವಿಸಿದವರು ವಿಚಲಿತರಾಗುವುದು ಬೇಕಾಗಿಲ್ಲ, ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಛಲ ಇರಬೇಕು. ಜನರ ಮಧ್ಯೆ ನಿಂತು ಪಕ್ಷದ ಸಂಘಟನೆ ಮಾಡಿದರೆ ಮಾತ್ರ ಮುಂದಿನ ಚುನಾವಣೆಗೆ ಟಿಕೆಟ್‌ ನೀಡಲಾಗುವುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಧಾನಸಭೆ, ಲೋಕಸಭೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲನುಭವಿಸಿದ ಜೆಡಿಎಸ್‌ ಅಭ್ಯರ್ಥಿಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಗಸ್ಟ್‌ನಲ್ಲಿ ಜೆಡಿಎಸ್‌ನಿಂದ ಪಾದಯಾತ್ರೆ

ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾರ್ಯಕರ್ತರೇ ನಮಗೆ ಸ್ಫೂರ್ತಿ. ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟನೆ ಮಾಡಲಾಗುವುದು. ಕಾರ್ಯಕರ್ತರು ಮನೆಯಲ್ಲಿ ಕುಳಿತುಕೊಳ್ಳದೆ ನನ್ನ ಜತೆ ಇರಿ ಸಾಕು, ಪಕ್ಷವನ್ನು ಬಲಗೊಳಿಸುತ್ತೇನೆ. ಸೋಲು ಮುಂದಿನ ಗೆಲುವಿಗೆ ಸೋಪಾನವಾಗಲಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ, ಪರಿಶಿಷ್ಟರ ಸಮಾವೇಶಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಪಕ್ಷವನ್ನು ಸಂಘಟಿಸುತ್ತೇನೆ. ಕಾಂಗ್ರೆಸ್‌ ನಾಯಕರು ಸಹ ಅವರ ಪಕ್ಷವನ್ನು ಸಂಘಟಿಸುವಲ್ಲಿ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷವನ್ನು ಸಂಘಟಿಸುವುದು ಬೇಡ ಎಂದು ಹೇಳುತ್ತೇವಾ? ಆದರೆ, ಅವರು ಸಹ ಸಮ್ಮಿಶ್ರ ಸರ್ಕಾರಕ್ಕೆ ಚ್ಯುತಿ ಬರದಂತೆ ಪಕ್ಷವನ್ನು ಸಂಘಟಿಸಬೇಕು. ಮುಂದಿನ ನಾಲ್ಕು ವರ್ಷ ಮೈತ್ರಿ ಸರ್ಕಾರ ಆನಂದವಾಗಿ ನಡೆಯಲಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವವರು ಸರ್ಕಾರ ನಡೆಸಲಿ. ಸೋತವರು ನಾವು ಪಕ್ಷವನ್ನು ಸಂಘಟಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಎಲೆಕ್ಷನ್ ಬಾಂಬ್ ಹಾಕಿದ ದೇವೇಗೌಡರು ಉಲ್ಟಾ ಹೊಡೆದಿದ್ದು ಏಕೆ?

ವಿಧಾನಸಭೆಯಲ್ಲಿ ಜೆಡಿಎಸ್‌ ಪಕ್ಷ ಪ್ರತಿನಿಧಿಸುವ ಪರಿಶಿಷ್ಟವರ್ಗದ ಆರು ಶಾಸಕರು ಇದ್ದಾರೆ. ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಸಚಿವ ಸ್ಥಾನ ನೀಡದಿದ್ದರೆ ಯಾವ ಬಾಯಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳ ಎಂದು ಹೇಳಲಿ ಎಂದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಣಯವನ್ನು ಅಧಿಕಾರಿಗಳು ಅನುಷ್ಠಾನಗೊಳಿಸಬೇಕು. ಮೈತ್ರಿ ಸರ್ಕಾರದ ಸಾಧನೆಯನ್ನು ಜನರ ಬಳಿಗೆ ಪಕ್ಷದ ಕಾರ್ಯಕರ್ತರು ಕೊಂಡೊಯ್ಯಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ.ದತ್ತ, ಶಾಸಕರಾದ ಟಿ.ಎ.ಶರವಣ, ಶಾಸಕ ಕೆ.ಗೋಪಾಲಯ್ಯ ಮತ್ತಿತರರು ಭಾಗವಹಿಸಿದ್ದರು.

ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಕರ್ನಾಟಕದಲ್ಲಿ ಮಾತ್ರ ಏಕೆ ಸಾಧ್ಯವಿಲ್ಲ? ಕರುಣಾನಿಧಿ ಗಾಲಿಕುರ್ಚಿಯಲ್ಲಿ ಕುಳಿತು ಮೂರು ಚುನಾವಣೆ ಎದುರಿಸಿದರು. ಅವರ ಮನೆಯಲ್ಲಿ ಏಳು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ರಾಜ್ಯದಲ್ಲಿ ನನ್ನ ಇಬ್ಬರು ಮೊಮ್ಮಕ್ಕಳು ನಿಂತಿದ್ದಕ್ಕೆ ನಾನಾ ರೀತಿಯಾಗಿ ವ್ಯಾಖ್ಯಾನಿಸಲಾಯಿತು.

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

 

ಇದು ಎಚ್‌ಡಿಕೆ ಸರ್ಕಾರವಲ್ಲ, ಮೈತ್ರಿ ಸರ್ಕಾರ

ಸಮ್ಮಿಶ್ರ ಸರ್ಕಾರದ ಮೊದಲ ಒಂದು ವರ್ಷದ ಸಾಧನೆಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟುಸಚಿವರು ಮಾತ್ರ ಹಾಜರು ಇದ್ದುದಕ್ಕೆ ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮೈತ್ರಿ ಸರ್ಕಾರದ ಸಾಧನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು. ಆದರೆ, ಕಾರ್ಯಕ್ರಮದಲ್ಲಿ ಉಭಯ ಪಕ್ಷಗಳ ಬೆರಳೆಣಿಕೆಯಷ್ಟುಸಚಿವರು ಮಾತ್ರ ಭಾಗವಹಿಸಿದ್ದರು. ರಾಜ್ಯದಲ್ಲಿ ಇರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರವಲ್ಲ, ಬದಲಾಗಿ ಮೈತ್ರಿ ಸರ್ಕಾರ ಎಂಬುದನ್ನು ಅರಿತುಕೊಳ್ಳಬೇಕು. ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಡುವಾಗ ಸಚಿವರ ಉಪಸ್ಥಿತಿ ಇರಬೇಕು. ಕೆಲವರು ಅನಿವಾರ್ಯ ಕಾರಣಗಳಿಂದ ಗೈರು ಹಾಜರಾಗಿರಬಹುದು. ಆದರೆ, ಎಲ್ಲರಿಗೂ ಅನಿವಾರ್ಯತೆ ಇರುವುದಿಲ್ಲ ಎಂದು ಖಾರವಾಗಿಯೇ ನುಡಿದರು.

ಸೋಲು ಅನುಭವಿಸಿದ್ದಕ್ಕೆ ಯಾವುದೇ ರೀತಿಯಲ್ಲಿಯೂ ವಿಚಲಿತರಾಗುವುದು ಬೇಡ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಛಲ ಇರಬೇಕು. ಜನರ ಮಧ್ಯೆ ಇರುವ ಅಭ್ಯಾಸ ಇರಬೇಕು. ಜನತೆ ವಿಶ್ವಾಸ-ನಂಬಿಕೆ ಗಳಿಸುವವರಿಗೆ ಮಾತ್ರ ಟಿಕೆಟ್‌ ನೀಡಲಾಗುವುದು. ಜನರ ಮಧ್ಯೆ ಹೋಗದೆ ಚುನಾವಣೆ ಸಮೀಪಿಸಿದಾಗ ಕೊನೆಗಳಿಗೆಯಲ್ಲಿ ಬಂದರೆ ಟಿಕೆಟ್‌ ಸಿಗುವುದಿಲ್ಲ ಎಂದು ಪಕ್ಷದ ನಾಯಕರಿಗೆ ಎಚ್ಚರಿಸಿದರು.

Latest Videos
Follow Us:
Download App:
  • android
  • ios