ಹುಬ್ಬಳ್ಳಿ(ಫೆ.03): ಉಪ ಚುನಾವಣೆಯಲ್ಲಿ ಗೆದ್ದ ಅರ್ಹರನ್ನ ಮಂತ್ರಿ‌ ಮಾಡಬಾರದು. ಯಾಕೆ ಅವರನ್ನು ಮಂತ್ರಿ ಮಾಡಬೇಕು, ನನ್ನ ಪ್ರಕಾರ ಪಕ್ಷ ದ್ರೋಹ ಮಾಡಿದ ಯಾರನ್ನೂ ಸಚಿವರನ್ನಾಗಿ ಮಾಡಲೇಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 15ನೇ ಹಣಕಾಸಿನ ಯೋಜನೆಯಡಿ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ವರ್ಷ ನಮಗೆ ಬರಬೇಕಾದ ಪಾಲು ಸರಿಯಾಗಿ ಬರುತ್ತಿಲ್ಲ. ಮುಂದಿನ ವರ್ಷ ರಾಜ್ಯದ ಪಾಲು 9-10 ಸಾವಿರ‌ ಕೋಟಿ ಖೋತಾ ಆಗುತ್ತಿದೆ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಸರ್ಕಾರ ರಾಜ್ಯಗಳಿಗೆ  ಅನ್ಯಾಯ ಮಾಡುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಬರಬೇಕಾದ ಅನುದಾನ ಕಡಿತ ಮಾಡಲಾಗುತ್ತಿದೆ. ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ನಾವು ಈ ವಿಚಾರವನ್ನ ಪ್ರಸ್ತಾಪಿಸುತ್ತೇವೆ. ಜಿಎಸ್‌ಟಿ ತೆರಿಗೆ ಸಂಗ್ರಹ ಕುಸಿದಿದೆ, ಇನ್ನೂ ರಾಜ್ಯಕ್ಕೆ ಬರಲಿರುವ ನಮ್ಮ ಪಾಲಿನ ಹಣಕ್ಕೂ ಕತ್ತರಿ ಹಾಕಲಿದ್ದಾರೆ ಎಂದಿದ್ದಾರೆ. 

ಅಹಿಂಸೆಯಿಂದ ಸ್ವತಂತ್ರ ಬಂದಿಲ್ಲಾ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ  ಸಿದ್ದರಾಮಯ್ಯ, ಕನಿಷ್ಟ ಸಂವಿಧಾನ ಓದದವರು ಸಂಸದರಾಗಿದ್ದಾರೆ. ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿದ್ದರು ಹಾಗಾಗಿ ಹೇಳುತ್ತಿದ್ದಾರೆ. ಗಾಂಧೀಜಿ, ನೆಹರು, ಪಟೇಲ್ ಜೊತೆ ಸ್ವತಂತ್ರ್ಯ ಹೋರಾಟ ಮಾಡಿದ್ದಾರೆ. ನಾಚಿಕೆಯಾಗಬೇಕು ಅವರಿಗೆ, ಮಾನ ಮರ್ಯಾದೆ ಇಲ್ಲದವರು. ಕೇಂದ್ರ ಸರ್ಕಾರವೇ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರೂ ಕೇಂದ್ರ ಮಂತ್ರಿಯಾಗಿದ್ದರು. ಸ್ವತಂತ್ರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತಾನಾಡೋದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸ್ವತಂತ್ರ ಹೋರಾಟಗಾರರು ಜೈಲಲ್ಲಿದ್ದು, ಪ್ರಾಣ ಕಳೆದುಕೊಂಡು, ಕುಟುಂಬ ತ್ಯಜಿಸಿ ನಮಗೆ ಸ್ವತಂತ್ರ ಕೊಡಿಸಿದ್ದಾರೆ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅವರಿಲ್ಲದಿದ್ದರೆ, ಸಂವಿಧಾನ ಇಲ್ಲದಿದ್ದರೆ ಅನಂತಕುಮಾರ್ ಹೆಗಡೆ ಎಂಪಿ ಆಗುತ್ತಿದ್ದರಾ? ಸಂವಿಧಾನ ಬಂದ ಮೇಲೆಯೇ ಎಲ್ಲರಿಗೂ ಮತ ಹಾಕುವ ಹಕ್ಕು ಸಿಕ್ಕಿದೆ. ಸಂವಿಧಾನ ಓದದೆ ಇವರೆಲ್ಲಾ ಎಂಪಿ ಯಾಕೆ ಆಗ್ತಾರೋ ಗೊತ್ತಾಗುತ್ತಿಲ್ಲ ಎಂದು ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸಿಎಂ ಯಡಿಯೂರಪ್ಪ ಬಹಳ ಮಾತನಾಡುತ್ತಾರೆ. ರೈತರಿಗಾಗಿ ಸಾಲವನ್ನಾದ್ರೂ ತಂದು ಕಾರ್ಯಕ್ರಮ ಮಾಡುತ್ತೇನೆ ಅಂತಾರೆ, ಪ್ರವಾಹ ಪರಿಹಾರ, ಬೆಳೆ ಪರಿಹಾರ, ಮನೆಹಾನಿ ಪರಿಹಾರ ಕೊಟ್ಟಿಲ್ಲ. ಖಜಾನೆಯಲ್ಲಿ ಈಗ ಸ್ವಲ್ಪವೂ ದುಡ್ಡಿಲ್ಲ. ಕಾರ್ಯಕ್ರಮಗಳಿಗೆ ದುಡ್ಡಿಲ್ಲ, ಕೇಂದ್ರದಿಂದಲೂ ಹಣ ಬರುತ್ತಿಲ್ಲ. ಯಡಿಯೂರಪ್ಪ ಮಾತೆತ್ತಿದರೆ ಮಾರ್ಚ್ ಬಜೆಟ್‌ನಲ್ಲಿ ಉತ್ತರ ಕೊಡುತ್ತೇನೆ ಅಂತಾರೆ. ನೋಡೋಣ ಏನು ಉತ್ತರ ಕೊಡ್ತಾರೆ ಅಂತ, ಬಜೆಟ್ ಆಗಲಿ ನೋಡಿ ಮಾತನಾಡುತ್ತೇನೆ.ನನ್ನ ಪ್ರಕಾರ ಒಬ್ಬ ಅರ್ಹ ಶಾಸಕರಿಗೂ ಮಂತ್ರಿ ಸ್ಥಾನ ಕೊಡಬಾರದು ಎಂದು ಹೇಳಿದ್ದಾರೆ.