ಮೈಸೂರು, (ಡಿ. 8): ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್​ 10ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಲಿದ್ದಾರೆ.

ಆ ವೇಳೆ ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರನ್ನ ಇಂದು (ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಗರಂ ಆಗಿಯೇ ಉತ್ತರಿಸಿದರು.

ಬೆಳಗಾವಿ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು?

ವಿದೇಶಕ್ಕೆ ಹೋಗೋದು ಏನ್ ಅಫೆನ್ಸಾ..? ನನಗೂ ವೈಯಕ್ತಿಕ ಬದುಕು ಇದೆ ಅಲ್ವಾ...? ಎಲ್ಲವನ್ನೂ ನಿಮ್ಮ ಮುಂದೆ ಹೇಳಿ ಹೋಗಬೇಕಾ? ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.

ಸ್ನೇಹಿತರ ಮನೆಯಲ್ಲಿ ಮದುವೆ ಇದೆ ಹೀಗಾಗಿ ವಿದೇಶಕ್ಕೆ ಹೋಗ್ತಿದ್ದೀನಿ ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ಬಿಎಸ್ ವೈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ವಯಸ್ಸಾಯ್ತು. ಲೋಕಸಭಾ ಚುನಾವಣೆ ಒಳಗೆ ಸಿಎಂ ಆಗದೆ ಇದ್ದರೆ ಜೀವನದಲ್ಲಿ ಮತ್ತೆ ಯಾವತ್ತೂ ಸಿಎಂ ಆಗಲ್ಲ ಅಂತಾ ಯಡಿಯೂರಪ್ಪಗೆ ಗೊತ್ತಾಗಿದೆ. ಇದರಿಂದ ಶಾಸಕರ ಖರೀದಿಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೊದಲ ವಾರದ ಅಧಿವೇಶನಕ್ಕೆ ಗೈರಾಗುವ ಸಿದ್ದರಾಮಯ್ಯ ಎರಡನೇ ವಾರದದಲ್ಲಿ ನಡೆಯುವ ಕಲಾಪಕ್ಕೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು  ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯನ್ನೂ ಸಹ ಮುಂದೂಡುವ ಸಾಧ್ಯತೆ ಇದೆ.