ಬೆಳಗಾವಿ :  ಬೆಳಗಾವಿ ಅಧಿವೇಶನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗುವ ಸಾಧ್ಯತೆ ಇದೆ.  ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಅಧಿವೇಶನಕ್ಕೆ ಸಿದ್ದರಾಮಯ್ಯ ತೆರಳುವುದು ಅನುಮಾನವಾಗಿದೆ. 

ಸಮ್ಮಿಶ್ರ ಸರ್ಕಾರಕ್ಕೆ ಹಲವು ಶಾಸಕರು ಗೈರಾಗುತ್ತಾರೆ ಎನ್ನುವ ಆತಂಕದ ನಡುವೆಯೇ ಸಿದ್ದರಾಮಯ್ಯ ಸಹ ಗೈರಾಗುವ ಸಾಧ್ಯತೆ ಹೆಚ್ಚಾಗಿದೆ. ಅಧಿವೇಶನಕ್ಕೆ ಗೈರಾಗುವ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಜೊತೆಗೆ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. 
 
ಆದರೆ ಮೊದಲ ವಾರದ ಅಧಿವೇಶನಕ್ಕೆ ಗೈರಾಗುವ ಸಿದ್ದರಾಮಯ್ಯ ಎರಡನೇ ವಾರದದಲ್ಲಿ ನಡೆಯುವ ಕಲಾಪಕ್ಕೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು  ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯನ್ನೂ ಸಹ ಮುಂದೂಡುವ ಸಾಧ್ಯತೆ ಇದೆ. 

ಡಿಸೆಂಬರ್ 12 ಅಥವಾ 13 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಸಭೆಯನ್ನೂ ಕೂಡ ಮುಂದುಡಲಾಗುತ್ತಿದೆ. ಡಿಸೆಂಬರ್ 18 ಅಥವಾ 19 ರಂದು ಶಾಸಕಾಂಗ ಸಭೆ ನಡೆಯಲಿದೆ ಎನ್ನಲಾಗಿದೆ.