ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕ ರೈತನ ತಲೆಗೆ ಕಟ್ಟಬಾರದು| ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆ: ಹೆಚ್‌ಡಿಕೆ| 

ಬೆಂಗಳೂರು(ಜ.28): ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂತಹ ಕೃತ್ಯಕ್ಕೆ ಕೈ ಹಾಕಲಾರರು ಎಂಬುದೂ ಸತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೈ ಅಡ್ಡ ಹಾಕಿ ಎಚ್‌ಡಿಕೆ ಕಾರು ನಿಲ್ಲಿಸಿದ ವೃದ್ಧೆ: ಮಾನವೀಯತೆ ಮೆರೆದ ಕುಮಾರಣ್ಣ

ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು. ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂದಿದ್ದಾರೆ.