ಮಂಡ್ಯ, (ಜ.24): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಇರಲಿ ಇರ್ಬೇಡ ಸಹಾಯಕ್ಕಾಗಿ ಬಂದವರನ್ನ ಯಾವತ್ತೂ ಕೈಬಿಡಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ.

ಹೌದು..ಇಂದು (ಭಾನುವಾರ) ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕಾರಿಗೆ ರಸ್ತೆಯಲ್ಲಿ ಕೈ ತೋರಿಸಿ ನಿಲ್ಲಿಸಿದ್ದಾರೆ. ಬಳಿಕ ತಮ್ಮ ಕಷ್ಟ ಕೇಳಿಕೊಂಡು ಕಣ್ಣೀರಿಟ್ಟಿದ್ದಾಳೆ.

ಪತಿ ಸತ್ತುಹೋಗಿದ್ದಾರೆ. 3 ಹೆಣ್ಣುಮಕ್ಕಳು. ಒಬ್ಬಳಿಗೆ ಮದುವೆಯಾಗಿದೆ. ಮತ್ತಿಬ್ಬರ ಮದುವೆ ಮಾಡಬೇಕು. ಅವರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದಾರೆ.  ನಾನು ಈಗ  ಒಬ್ಬಂಟಿ.  ಇಳಿವಯಸ್ಸಿನಲ್ಲೂ ದುಡಿದು ಬದುಕುತ್ತಿದ್ದೇನೆ. ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸಿ ಎಂದು ತಮ್ಮ ಅಹವಾಲು ಸಲ್ಲಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಿಸಿದ ಕುಮಾರಸ್ವಾಮಿ

ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ,  ನಿಮ್ಮ ಹೆಣ್ಣುಮಕ್ಕಳನ್ನು ಬೆಂಗಳೂರಿನ ಜೆಪಿ ನಗರದ ನನ್ನ ನಿವಾಸಕ್ಕೆ ಕಳುಹಿಸಿ. ಅವರಿಗೆ ಒಂದು ಒಳ್ಳೆಯ ಉದ್ಯೋಗ ಕೊಡಿಸುತ್ತೇನೆ ಎಂದು ಆ ಮಹಿಳೆಗೆ ಸಾಂತ್ವನ ಹೇಳಿದರು.

ನಡೆದಿರುವ ಈ ಪ್ರಸಂಗವನ್ನು ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೃದ್ಧೆಯ ನಿರೀಕ್ಷೆಯಂತೆ ಆಕೆಯ ಮಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ನಾನೂ ನೀಡಿದ್ದೇನೆ. ಜನರ ಇಂಥ ನಿರೀಕ್ಷೆಗಳು, ನಂಬಿಕೆಗಳು, ಅವರಿಗೆ ನೆರವಾಗಬೇಕು ಎಂಬ ನನ್ನ ಅದಮ್ಯ ಹಂಬಲವೇ ನಾನು ಇನ್ನೂ ರಾಜಕೀಯವಾಗಿ ಉಳಿಯುವಂತೆ ಮಾಡಿದೆ. ಜನರ ಈ ಮಟ್ಟದ ಪ್ರೀತಿ, ವಿಶ್ವಾಸ, ನಂಬಿಕೆ, ನಿರೀಕ್ಷೆಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದಿದ್ದಾರೆ.

ನನ್ನ ಬಳಿ ಹೇಳಿಕೊಂಡರೆ ಕಷ್ಟ ನೀಗಬಹುದು ಎಂಬುದು ಆಕೆಯ ವಿಶ್ವಾಸ.ಕುಮಾರಸ್ವಾಮಿ ನಮ್ಮ ಕಷ್ಟ ನಿವಾರಿಸಬಲ್ಲ ಎಂಬುದು ಇಂಥ ಅಸಂಖ್ಯ ಜನರ ಅಭಿಪ್ರಾಯವೂ ಹೌದು ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.