Hassan: ಕಾಡಾನೆ ಉಪಟಳಕ್ಕೆ ಬೇಸತ್ತು ಖೆಡ್ಡಾ ತೋಡಿದ ಜನತೆ, ಸಿಕ್ಕಿ ಬಿದ್ದ ಮರಿಯಾನೆ

ಕಾಡಾನೆ ಉಪಟಳಕ್ಕೆ ಬೇಸತ್ತ ಆಲೂರು, ಸಕಲೇಶಪುರ ಭಾಗದ ಜನತೆ ಸರ್ಕಾರದ ಗಮನಸೆಳೆಯಲು ಕಾಡಾನೆ ಗೆ ಖೆಡ್ಡಾ ತೋಡಿದ್ದರು.  ಇದಕ್ಕೆ ಕಾಡಾನೆ ಮರಿಯೊಂದು ಖೆಡ್ಡಾಗೆ ಬಿದ್ದಿತ್ತು.  ಬಳಿಕ ಖೆಡ್ಡಾಗೆ ಬಿದ್ದ ಕಾಡಾನೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದರು. ಕೊನೆಗೆ ಜನರ ಮನವೊಲಿಸಿ ಖೆಡ್ಡಾದಿಂದ ಆನೆಯನ್ನು ಅಧಿಕಾರಿಗಳು ಕಾಡಿಗೆ ಓಡಿಸಿದರು.

Forest officials rescue juvenile wild elephant stuck in trench in Sakleshpur gow

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾಸನ (ಜ.2): ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ ಕಾಡಾನೆ ನಡುವಿನ ಸಂಘರ್ಷ ಮಿತಿಮೀರಿದ್ದು ಇದರಿಂದ ರೋಸಿ ಹೋದ ಜನರು ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದ ಅಮೃತ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಡಿ.26 ರಂದು 20 ಅಡಿ ಉದ್ದ 20 ಅಡಿ ಅಗಲದ ಕಂದಕ ತೋಡಿದ್ದರು. ಡಿ.27 ರಂದು ಮರದ ಬಂಬು ಹಾಗೂ ಸೊಪ್ಪಿನಿಂದ ಮುಚ್ಚಿದ್ದರು. ನಿನ್ನೆ ತಡರಾತ್ರಿ 2 ಗಂಟೆ ಸಮಯದಲ್ಲಿ ಐದರಿಂದ ಆರು ವರ್ಷದ ಗಂಡು ಮರಿಯಾನೆ ಖೆಡ್ಡಾಕೆ ಬಿದ್ದಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವವರು ಕಾಡಾನೆ ಮರಿಯನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇತ್ತ ಗುಂಡಿಯಲ್ಲಿ ಬಿದ್ದಿದ್ದ ಮರಿಯಾನೆ ಮೇಲೆ ಹತ್ತಲು ಪರದಾಡಿದ ದೃಶ್ಯ ಮನಕಲಕುವಂತಿತ್ತು.

ಕಳೆದ ಇಪ್ಪತ್ತು ವರ್ಷಗಳಿಂದ ಸಕಲೇಶಪುರ, ಆಲೂರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಬೇಲೂರು ಭಾಗದಲ್ಲಿ ಕಾಡಾನೆಗಳ ದಾಂಧಲೆ ವಿಪರೀತವಾಗಿದೆ. ಕಾಡಾನೆ ಹಿಡಿದು ಸ್ಥಳಾಂತರಿಸಿ ಇಲ್ಲಾ, ಆನೆ ಕಾರಿಡಾರ್ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ನೂರಾರು ಹೋರಾಟ ನಡೆಸಿದರು, ಸರ್ಕಾರಗಳು ಪರಿಹಾರ, ಭರವಸೆ ನೀಡಿ ಕಣ್ಣೊರೆಸುವ ತಂತ್ರ ಮಾಡಿದವೆ ಹೊರತು ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ.

ಇದುವರೆಗೂ 77 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, 33  ಕಾಡಾನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಕಾಡಾನೆ ಹಾವಳಿಯಿಂದ ಬೇಸತ್ತ ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲಿನ ಗ್ರಾಮಸ್ಥರು ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಖೆಡ್ಡಾ ತೋಡಿದ್ದರು. ಆ ಖೆಡ್ಡಾಕ್ಕೆ ಕಳೆದ ರಾತ್ರಿ ಆಹಾರ ಅರಸಿ ಬರುತ್ತಿದ್ದ ವೇಳೆ ಗುಂಪಿನಲ್ಲಿದ್ದ ಗಂಡು ಮರಿಯಾನೆ ಬಿದ್ದಿತ್ತು.

ಬೆಳಗ್ಗೆ 7.30 ರ ಸಮಯದಲ್ಲಿ ಅಮೃತ್ ತಮ್ಮ ಜಮೀನಿನ ಬಳಿ ತೆರಳಿದಾಗ ಖೆಡ್ಡಾಕ್ಕೆ ಕಾಡಾನೆ ಬಿದ್ದಿರುವುದು ಕಂಡಿದೆ. ಕೂಡಲೇ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಕಾಡಾನೆ ಕಂದಕಕ್ಕೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಿಮ್ಮ ಭರವಸೆಗಳು, ಪರಿಹಾರ ಸಾಕು. ಕಾಡಾನೆ ಹಿಡಿಯಲು ಇಪ್ಪತ್ತೈದು ಲಕ್ಷ ಖರ್ಚು ಮಾಡ್ತಿರಿ, ನಮಗೆ ಇಪ್ಪತ್ತೈದು ಸಾವಿರ ಕೊಡಿ ಎಲ್ಲಾ ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವುತ್ತೇವೆ ಆಗ ನೀವು ಸ್ಥಳಾಂತರ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಮೇಲೆ ಹತ್ತಲು ಜೆಸಿಬಿ ಬಂದಿದ್ದು ಗ್ರಾಮಸ್ಥರು ಮಧ್ಯದಲ್ಲೇ ತಡೆದು ವಾಪಾಸ್ ಕಳುಹಿಸಿದರು. ಸ್ಥಳೀಯರ ಆಕ್ರೋಶಕ್ಕೆ ಏನು ಉತ್ತರಿಸಲಾಗದೆ ಮೌನಕ್ಕೆ ಶರಣರಾದರು.‌ 

Wild elephant attacks: ತೀರ್ಥಹಳ್ಳಿ: ಕುರು​ವ​ಳ್ಳಿ​ ಬಳಿ ಕಾಡಾನೆ ಹಾವಳಿ- ಆತಂಕ

ಸುಮಾರು ಹದಿನಾಲ್ಕು ಗಂಟೆಗಳಿಂದ ಗುಂಡಿಯಲ್ಲಿ ಬಿದ್ದಿದ್ದ ಕಾಡಾನೆ ಮೇಲೆ ಹತ್ತಲು ಪರದಾಡಿತು. ಸೊಂಡಲು, ಮುಂದಿನ, ಹಿಂದಿನ ಕಾಲುಗಳಲ್ಲಿ ಮಣ್ಣನ್ನು ಕೆರೆದು ಮೇಲೆ ಬರಲು ಹರಸಾಹಸಪಟ್ಟಿತ್ತು. ಗುಂಡಿಯಲ್ಲಿ ಬಿದ್ದಿದ್ದ ಮರದ ಕೊಂಬೆ, ಸೊಪ್ಪುನ್ನು ಎಸೆದಾಡಿ ಘೀಳಿಟ್ಟಿತು. ಕೆಸರನ್ನು ಮೈಮೇಲೆ ಎರಚಿಕೊಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುವ ದೃಶ್ಯ ನಿಜಕ್ಕೂ ಮನಕಲುಕಿತು. ಕೊನೆಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ತೀವ್ರ ದಾಂಧಲೆ ನಡೆಸುತ್ತಿರುವ ಐದು ಕಾಡಾನೆಗಳನ್ನು ಹಿಡಿಯಲು ಅನುಮತಿ ಪಡೆಯುತ್ತೇವೆ. ಜಮೀನಿನ ಮಾಲೀಕ ಸೇರಿ ಯಾರ ಮೇಲೂ ಕೇಸ್ ದಾಖಲು ಮಾಡಲ್ಲ. ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ನೀಡುತ್ತೇವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಅರಣ್ಯ ಅಧಿಕಾರಿಗಳ ಹರಸಾಹಸ: ಕಾಡು ಸೇರಿದ ಕಾಡಾನೆ

ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿ ಜೆಸಿಬಿ ಬರಲು ಅವಕಾಶ ಮಾಡಿಕೊಟ್ಟರು. ನಂತರ ಜೆಸಿಬಿಯಿಂದ ಟ್ರಂಚ್ ತೆಗೆದು ಕಾಡಾನೆ ಮರಿ ಹತ್ತಲು ದಾರಿ ಮಾಡಲಾಯಿತು. ಟ್ರಂಚ್ ಮೂಲಕ ಮೇಲೆ ಬಂದ ಮರಿಯಾನೆ ಬಡ ಜೀವ ಬದುಕಿತು ಎಂದು ಕಾಫಿ ತೋಟದೊಳಗೆ ಓಡಿ ಹೋಯಿತು. ಜೂನ್ ವರೆಗೂ ಸರ್ಕಾರ ಕಾಲಾವಕಾಶ ನೀಡುತ್ತೇವೆ, ಆಗಲೂ ಕಾಡಾನೆಗಳ‌ ಸ್ಥಳಾಂತರ ಆಗದೇ ಇದ್ದ ಎಲ್ಲರ ಜಮೀನಿನಲ್ಲಿಯೂ ಖೆಡ್ಡಾ ರೆಡಿ ಮಾಡ್ತೇವೆ ಅಂತಾ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios