ಚನ್ನಪಟ್ಟಣ: ರೈತರ ಪಾಲಿಗೆ ಕಂಟಕಪ್ರಾಯವಾಗಿದ್ದ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲ!

ಇದೀಗ ಸೆರೆ ಸಿಕ್ಕಿರುವುದು 46 ವರ್ಷದ ಟಸ್ಕರ್‌ ಆನೆ. ಕಳೆದ ವರ್ಷ ಈ ಪುಂಡಾನೆ ಕಾಟ ವಿಪರೀತವಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದ್ದರು. ಆದರೆ, ಅಲ್ಲಿಂದ ಮರಳಿ ತನ್ನ ಸ್ಥಾವರ ಹುಡುಕಿಕೊಂಡು ಬಂದಿದ್ದ ಆನೆ ಮತ್ತೆ ದಾಂಗುಡಿ ಇಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಮತ್ತೆ ಸೆರೆಹಿಡಿಯಲಾಗಿದೆ. 
 

Forest Department Succeeded in Capturing Tusker Elephant at Channapatna in Ramanagara grg

ವಿಜಯ್‌ ಕೇಸರಿ

ಚನ್ನಪಟ್ಟಣ(ಡಿ.21): ರಾಮನಗರ ಜಿಲ್ಲೆಯ ರೈತರ ಪಾಲಿಗೆ ಕಂಟಕಪ್ರಾಯವಾಗಿದ್ದ ಟಸ್ಕರ್‌ ಆನೆಯನ್ನು ಅನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದ್ದು, ಪುಂಡಾನೆ ಸೆರೆ ಕಾರ್ಯಾಚರಣೆಗೆ ಮೊದಲ ದಿನವೇ ಯಶಸ್ಸು ಸಿಕ್ಕಿದೆ. ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿದ ಅರ್ಧ ದಿನದಲ್ಲೇ ಟಸ್ಕರ್‌ ಇರುವಿಕೆ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ನೆಮ್ಮದಿ ಕಸಿದಿದ್ದ ಪುಂಡಾನೆ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. 

ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ತಾಲೂಕಿನ ಚಿಕ್ಕಮಣ್ಣುಗುಡ್ಡೆ ವ್ಯಾಪ್ತಿಯ ತಿಮ್ಮೇ ಗೌಡನದೊಡ್ಡಿ ಬಳಿ ಬೀಡುಬಿಟ್ಟಿದ್ದ ಆನೆಯನ್ನು ಅರವಳಿಕೆ ಮದ್ದು ಶೂಟ್ ಮಾಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿದಿದ್ದಾರೆ. ರೆಡಿಯೋ ಕಾಲರ್‌ ಹಾಗೂ ವಾಚರ್ ಗಳ ಸಹಾಯದಿಂದ ಪುಂಡಾನೆ ಚಲನವಲನದ ಮೇಲೆ ಗುರುವಾರದಿಂದಲೇ ಅರಣ್ಯ ಇಲಾಖೆ ಅಧಿ ಕಾರಿಗಳು ನಿಗಾ ಇರಿಸಿದ್ದರು. ಪುಂಡಾನೆ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಮತ್ತು ವೈದ್ಯರು ಆನೆ ಇರುವ ಸ್ಥಳವನ್ನು ದೂರದಿಂದಲೇ ವೀಕ್ಷಿಸಿದ್ದರು. 

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಶೇ.75ರಷ್ಟು ಇಳಿಮುಖ!

ಅರವಳಿಕೆ ಶೂಟ್: 

ಪುಂಡಾನೆ ಬೀಡುಬಿಟ್ಟಿರುವ ಸ್ಥಳ ತಲುಪಿದ ಅರಣ್ಯ ಇಲಾಖೆ ತಂಡ, ಆನೆ ಸಮೀಪಿಸಿದ ತಕ್ಷಣ ಕಾರ್ಯಾಪ್ರವೃತ್ತರಾಗಿ, ಈ ವೇಳೆ ಧನಂಜಯ ಆನೆ ಮೇಲೆ ಕುಳಿತ ವೈದ್ಯ ರಮೇಶ್ ಒಂದು ರೇಂಜ್‌ಗೆ ಆನೆ ಸಿಕ್ಕ ತಕ್ಷಣ ಸಿದ್ದಪಡಿಸಿದ್ದ ಅರವಳಿಕೆ ಇಂಜೆಕ್ಷನ್ ತುಂಬಿದ ಗನ್ ನಿಂದ ಪುಂಡಾನೆಗೆ ಶೂಟ್ ಮಾಡಿದ್ದಾರೆ. ಅರವಳಿಕೆ ಇಂಜೆಕ್ಷನ್‌ನಿಂದ ಆನೆ ಪ್ರಜ್ಞೆ ತಪ್ಪಿರುವುದನ್ನು ಖಚಿತ ಪಡಿಸಿಕೊಂಡ ತಂಡ ಆನೆಯನ್ನು ಸಮೀಪಿಸಿದೆ. ಪ್ರಜ್ಞೆ ತಪ್ಪಿದ ಆನೆಗೆ ಶುಕ್ರೂಷೆ ಮಾಡಿದ ವೈದ್ಯರ ತಂಡ, ಆನೆಯ ಆರೋಗ್ಯ ತಪಾಸಣೆ ಮಾಡಿ ಆನೆಯನ್ನು ದಪ್ಪನಾದ ಸೆಣಬಿನ ಹಗ್ಗದಿಂದ ಕಟ್ಟಿಹಾಕ ಲಾಗಿದೆ. ಆ ನಂತರ ಆನೆಯ ಮೇಲೆ ನೀರು ಸುರಿದು ಮಂಪರು ಕಡಿಮೆ ಮಾಡಿದ ನಂತರ ಪಳಗಿದ ಸಾಕಾನೆಗಳ ಸಹಾಯದಿಂದ ಸಲಗವನ್ನು ಲಾರಿ ಹತ್ತಿರಕ್ಕೆ ಕರೆತಂದಿದ್ದಾರೆ. 

ಈ ವೇಳೆ ಪಳಗಿದ ಆನೆಗಳು ಪುಂಡಾನೆಯನ್ನು ಸೊಂಡಲಿನಿಂದ ಸವರುತ್ತಾ, ದಂತದಿಂದ ತಿವಿ ಯುತ್ತಾ ಮುನ್ನಡೆಸಿಕೊಂಡು ಬಂದು, ಅಲ್ಲಿ ಕ್ರೇನ್ ಸಹಾಯದಿಂದ ಆನೆಯನ್ನು ಈ ಮೊದಲೇ ಆನೆ ಸ್ಥಳಾಂತರಕ್ಕೆ ಅನುಕೂಲಕರವಾಗುವಂತೆ ನಿರ್ಮಿಸಿದ್ದ ಲಾರಿಗೆ ಹತ್ತಿಸಲಾಗಿದೆ. ಅಲ್ಲಿಂದ ಆನೆ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸರ್ಕಾರ ನಿಗದಿ ಪಡಿಸಿದ ಜಾಗಕ್ಕೆ ಆನೆ ಸ್ಥಳಾಂತರಗೊಳಿಸ ಲಾಗುವುದು. 

46 ವರ್ಷದ ಟಸ್ಕರ್‌: 

ಇದೀಗ ಸೆರೆ ಸಿಕ್ಕಿರುವುದು 46 ವರ್ಷದ ಟಸ್ಕರ್‌ ಆನೆ. ಕಳೆದ ವರ್ಷ ಈ ಪುಂಡಾನೆ ಕಾಟ ವಿಪರೀತವಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದ್ದರು. ಆದರೆ, ಅಲ್ಲಿಂದ ಮರಳಿ ತನ್ನ ಸ್ಥಾವರ ಹುಡುಕಿಕೊಂಡು ಬಂದಿದ್ದ ಆನೆ ಮತ್ತೆ ದಾಂಗುಡಿ ಇಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಮತ್ತೆ ಸೆರೆಹಿಡಿಯಲಾಗಿದೆ. 

ರೆಡಿಯೋ ಕಾಲರ್: 

ಕಳೆದ ವರ್ಷ ಟಸ್ಕರ್‌ ಅನ್ನು ಸೆರೆಹಿಡಿದಿದ್ದ ವೇಳೆ ಅದರ ಕಾಲಿಗೆ ಅರಣ್ಯ ಇಲಾಖೆ ಅಧಿಕಾರಿಗಳು ರೆಡಿಯೋ ಕಾಲರ್‌ ಅಳವಡಿಸಿದ್ದರು. ಇದು ಆನೆಯ ಚಲನವಲನದ ಮೇಲೆ ಕಣ್ಣಿಡಲು ಸಹಕಾರಿಯಾಗಿತ್ತು. ರೆಡಿಯೋ ಕಾಲರ್‌ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಇರುವಿಕೆ ಪತ್ತೆ ಹಚ್ಚಿ ಸೆರೆಹಿಡಿದ್ದಾರೆ.  ಶುಕ್ರವಾರ ಬೆಳಗ್ಗೆಯಷ್ಟೇ ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಶಾಸಕ ಸಿ.ಪಿ. ಯೋಗೇಶ್ವ‌ರ್ ಚಾಲನೆ ನೀಡಿದ್ದರು. ಮಧ್ಯಾಹ್ನದ ವೇಳೆಗೆ ಆನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ. 6

ಪಳಗಿದ ಆನೆ ಬಳಕೆ: 

ಡಿಎಫ್‌ಒ ರಾಮಕೃಷ್ಣಯ್ಯ, ಆರ್‌ಎಫ್‌ಒ ಮಲ್ಲೇಶ್ ನೇತೃತ್ವದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ 6 ಸಾಕಾನೆ, ಇಬ್ಬರು ಪಶುವೈಧ್ಯಾಕಾರಿಗಳು, ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡ, 70 ಸಿಬ್ಬಂದಿ ಹಾಗೂ ಜಿಲ್ಲಾಮಟ್ಟದ ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಇನ್ನು ಆನೆ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದ ಆನೆ ಗಳಾದ ಮಹೇಂದ್ರ, ಧನಂಜಯ, ಭೀಮ, ಪ್ರಶಾಂತ್, ಹರ್ಷ, ಸುಗ್ರೀವ ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಸಿಪಿವೈ ಭೇಟಿ: ಇನ್ನು ಆನೆ ಸೆರೆ ಹಿಡಿದಿದರುವುದು ತಿಳಿದ ಕೂಡಲೇ ಶಾಸಕ ಯೋಗೇಶ್ವರ್‌ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

ಲಾರಿ ತಳ್ಳಲು ಸಹಕರಿಸಿದ ಶಾಸಕ ಯೋಗೇಶ್ವ‌ರ್ 

ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿರುವ ಪುಂಡಾನೆ ಟಸ್ಕರ್‌ಸೆರೆಹಿಡಿದ ಲಾರಿಗೆ ಹತ್ತಿಸಿ ಬೇರೆ ಕಡೆ ಸ್ಥಳಾಂತರಿಸುವ ವೇಳೆ ಆನೆ ತುಂಬಿದ್ದ ಲಾರಿ ಗುಂಡಿಯಲ್ಲಿ ಸಿಲುಕಿ ಕೊಂಡಿತ್ತು. ಈ ವೇಳೆ ಲಾರಿಯನ್ನು ಗುಂಡಿ ಯಿಂದ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಶ್ರಮ ಪಡುತ್ತಿದ್ದ ವೇಳೆ, ಅಲ್ಲೇ ಇದ್ದ ಶಾಸಕ ಸಿ.ಪಿ.ಯೋಗೇಶ್ವರ್ ಲಾರಿ ತಳ್ಳಲು ಕೈಜೋಡಿಸಿದ್ದು ಎಲ್ಲರ ಗಮನ ಸೆಳೆಯಿತು.

ರಾಮನಗರ: ಹಣದ ಆಸೆಗೆ ಹೆತ್ತ ಮಗುವನ್ನೇ ಮಾರಿದ ತಾಯಿ!

ಆನೆ ಸೆರೆ ಕಾರ್ಯಾಚರಣೆಗೆ ಮೊದಲ ದಿನವೇ ಯಶಸ್ಸು ಸಿಕ್ಕಿರುವುದು ಸಂತಸ ಮೂಡಿಸಿದೆ. ಎರಡು ಆನೆ ಹಿಡಿಯಲು ಅನುಮತಿ ದೊರೆತಿದ್ದು, ಇದೀಗ ಒಂದು ಆನೆಯನ್ನು ಸೆರೆಹಿಡಿಯಲಾಗಿದೆ. ಇನ್ನೊಂದು ಆನೆ ಸೆರೆ ಸಿಕ್ಕಲ್ಲಿ ಆನೆಗಳ ಉಪಟಳ ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂದು ಚನ್ನಪಟ್ಟಣ ಶಾಸಕ ಯೋಗೇಶ್ವರ್ ತಿಳಿಸಿದ್ದಾರೆ.

ಚಿಕ್ಕಮಣ್ಣು ಗುಡ್ಡೆ ಅರಣ್ಯ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಟಸ್ಕರ್‌ಆನೆಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಪುಂಡಾನೆಯನ್ನು ಮೇಲಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಯ್ಯ ಹೇಳಿದ್ದಾರೆ.

Latest Videos
Follow Us:
Download App:
  • android
  • ios