Asianet Suvarna News Asianet Suvarna News

ಹಂಪಿಯಲ್ಲಿ ರಂಗಿನಾಟ: ಹಲಗೆ ನಾದಕ್ಕೆ ಹುಚ್ಚೆದ್ದು ಕುಣಿದ ವಿದೇಶಿಗರು!

ಹಂಪಿಯಲ್ಲಿ ವಿದೇಶಿ ಪ್ರವಾಸಿಗರಿಂದ ಹೋಳಿ ಹಬ್ಬ ಆಚರಣೆ| ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ| ಕೊರೋನಾ ಭೀತಿ-ಪ್ರವಾಸಿಗರ ಸಂಖ್ಯೆ ಕಡಿಮೆ| ಪರಸ್ಪರ ಬಣ್ಣ ಎರಚಾಡಿ ಖುಷಿಪಟ್ಟ ಜನತೆ| 

Foreign Tourists Celebrate Holi Festival in Hampi in Ballari District
Author
Bengaluru, First Published Mar 11, 2020, 8:59 AM IST

ಸಿ.ಕೆ. ನಾಗರಾಜ್‌

ಹೊಸಪೇಟೆ(ಮಾ.11): ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ಸ್ಥಳೀಯರ ಜತೆ ಮಂಗಳವಾರ ಹೋಳಿ ಆಚರಿಸಿದರು. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಹೆಜ್ಜೆ ಹಾಕಿದರು.

ಐತಿಹಾಸಿಕ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ರಂಗಿನಾಟದ ಫೋಟೋಸ್

ಪ್ರತಿವರ್ಷ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮುಖ್ಯಗೋಪುರದ ಮುಂಭಾಗದಲ್ಲಿ ವಿದೇಶಿಗರ ರಂಗಿನಾಟ ನಡೆಯುತ್ತಿತ್ತು. ಆದರೆ ಈ ವರ್ಷ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಹೋಳಿ ಆಚರಿಸದಂತೆ ಪೊಲೀಸರು ಶಾಂತಿಸಭೆಯಲ್ಲಿ ಮನವಿ ಮಾಡಿದ್ದರು. ಹೀಗಾಗಿ ವಿದೇಶಿಗರ ಬಣ್ಣದಾಟ ಹಂಪಿ ಜನತಾ ಪ್ಲಾಟ್‌ಗೆ ಸ್ಥಳಾಂತರಗೊಂಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಾರಿ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಆದರೆ ಇಲ್ಲಿ ಇದ್ದವರು ಯಾವುದೇ ಹಿಂಜರಿಕೆ ಇಲ್ಲದೆ ಬಣ್ಣದಾಟದಲ್ಲಿ ಪಾಲ್ಗೊಂಡರು. ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ವರೆಗೆ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಬಹುತೇಕ ಪ್ರವಾಸಿಗರು ಹಂಪಿಯಲ್ಲಿ ಹೋಳಿಯಾಟಕ್ಕೆಂದೇ ಉಳಿದಿರುತ್ತಾರೆ. ಹೋಳಿ ಮುಗಿದ ಬಳಿಕ ಗೋವಾ, ಗೋಕರ್ಣ ಮತ್ತಿತರ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಕೆಲವರು ಹೊಸದಾಗಿ ಹೋಳಿಯಲ್ಲಿ ಪಾಲ್ಗೊಂಡವರು ಅಚ್ಚರಿ, ಸಂಭ್ರಮ ವ್ಯಕ್ತಪಡಿಸುತ್ತಾರೆ. ಈ ವರ್ಷ ಹೋಳಿಗೂ ಮೊದಲೇ ಕೆಲವು ಪ್ರವಾಸಿಗರು ಬೇರೆ ಬೇರೆ ಪ್ರದೇಶಗಳಿಗೆ ತೆರಳಿದ್ದಾರೆ.

ಸೋಮವಾರ ರಾತ್ರಿ ರತಿ-ಕಾಮಣ್ಣರನ್ನು ಕೂರಿಸಿದ ಸ್ಥಳದಲ್ಲಿ ನಡೆಯುವ ಕಾಮದಹನ ಕಾರ್ಯಕ್ರಮದಲ್ಲಿ ಸ್ಥಳೀಯರ ಜತೆ ವಿದೇಶಿಗರೂ ಪಾಲ್ಗೊಂಡಿದ್ದರು. ಮಂಗಳವಾರ ಬೆಳಗ್ಗೆ ರಂಗಿನಾಟದಲ್ಲಿ ಪುರುಷರು-ಸ್ತ್ರೀಯರು ಎಂಬ ಭೇದವಿಲ್ಲದೆ ಪಾಲ್ಗೊಂಡು, ಸ್ಥಳೀಯರ ಜತೆ ಬಣ್ಣದಲ್ಲಿ ಮಿಂದು ಸಂಭ್ರಮಿಸಿದರು. ಪರಸ್ಪರ ಬಣ್ಣ ಎರಚಾಡಿಕೊಂಡು ಖುಷಿಪಟ್ಟರು. ವಾದ್ಯಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಹಾಕಿದರು.

ಹಂಪಿಯಲ್ಲಿ ನಡೆಯುವ ಹೋಳಿಯಲ್ಲಿ ಭಾಗವಹಿಸಿರುವುದು ಅತ್ಯಂತ ಖುಷಿ ತಂದಿದೆ. ಹಂಪಿಯಲ್ಲಿರುವ ಸ್ಮಾರಕಗಳನ್ನು ವೀಕ್ಷಿಸಿದಷ್ಟೇ ಹೋಳಿಯಲ್ಲಿ ಭಾಗವಹಿಸಿದ ಖುಷಿಯಾಗಿದೆ. ಹಂಪಿಯಲ್ಲಿ ಹೋಳಿ ಹಬ್ಬವನ್ನು ಸ್ಥಳೀಯರು ವಿದೇಶಿ ಪ್ರವಾಸಿಗರೊಂದಿಗೆ ಸೇರಿಕೊಂಡು ಆಚರಿಸುತ್ತಿರುವುದು ನಮಗೆ ಭಾರೀ ಸಂತೋಷವನ್ನು ನೀಡಿದೆ ಎಂದು ಆಫೀಲ್‌, ಆಜ್‌ಯ್‌, ಲಿಯಾಲ್‌, ಇಸ್ರೇಲ್‌ ಪ್ರವಾಸಿಗರು ಹೇಳಿದ್ದಾರೆ. 

ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಸೇರಿಕೊಂಡು ಹೋಳಿ ಆಚರಿಸುವುದು ವಿಶೇಷವಾಗಿದೆ. ಆದರೆ ಈ ವರ್ಷ ಕೊರೋನಾ ಭೀತಿ ಇರುವುದರಿಂದ ಹಂಪಿಯಲ್ಲಿ ಸಾಕಷ್ಟುಸಂಖ್ಯೆಯ ವಿದೇಶಿ ಪ್ರವಾಸಿಗರು ಭಾಗವಹಿಸಿಲ್ಲ. ಆದರೂ ಹಂಪಿಯಲ್ಲಿ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಲಾಗಿದೆ ಎಂದು ಹಂಪಿ ನಿವಾಸಿಗಳಾದ ಗುರು, ಚಂದ್ರು, ಮಂಜು ತಿಳಿಸಿದ್ದಾರೆ. 
 

Follow Us:
Download App:
  • android
  • ios