ಮೈಸೂರು(ಅ.07): ನಾಡದೇವತೆ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಯುಳ್ಳ ಚಿನ್ನದ ಅಂಬಾರಿಯನ್ನು ಸತತ 8ನೇ ಬಾರಿಗೆ ಹೊತ್ತು ಸಾಗಲು ಅರ್ಜುನ ಆನೆಯು ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ.

ಸಾಂಸ್ಕೃತಿಕ ನಗರಿಯ ಮೈಸೂರಿನ ರಾಜಮಾರ್ಗದಲ್ಲಿ ಅ.8 (ಮಂಗಳವಾರ) ರಂದು ದಸರಾ ಮೆರವಣಿಗೆ ಸಾಗಲಿದ್ದು, ಜಂಬೂಸವಾರಿಯ ಕೇಂದ್ರ ಬಿಂದುವಾದ ಚಿನ್ನದ ಅಂಬಾರಿಯನ್ನು ಹೊರಲು ಅರ್ಜುನ ಆನೆಯು ಸಿದ್ಧವಾಗಿದೆ.

59 ವರ್ಷದ ಅರ್ಜುನ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಬಳ್ಳೆ ಆನೆ ಶಿಬಿರದಲ್ಲಿ ವಾಸವಾಗಿದೆ. ಕಳೆದ 20 ವರ್ಷದಿಂದ ಅರ್ಜುನ ಆನೆಯು ದಸರೆಯಲ್ಲಿ ಭಾಗವಹಿಸುತ್ತಿದೆ. ಅರ್ಜುನ ಆನೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು 2012ನೇ ಸಾಲಿನಿಂದ ನಿರ್ವಹಿಸುತ್ತಿದೆ.

'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

2012, 2013, 2014, 2015, 2016, 2017, 2018ನೇ ಸಾಲಿನಲ್ಲಿ ಯಶಸ್ವಿಯಾಗಿ ನಿರ್ವಹಿಸಿದೆ. 2019ನೇ ದಸರಾ ಮೆರವಣಿಗೆಯಲ್ಲೂ ಅಂಬಾರಿ ಹೊರುವ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಲು ಸಿದ್ಧವಾಗಿದೆ. ಮುಂದಿನ ವರ್ಷ 60 ವರ್ಷಕ್ಕೆ ಕಾಲಿಡಲಿರುವ ಅರ್ಜುನ 2020ನೇ ಸಾಲಿನ ದಸರೆಗೆ ನಾಡಿಗೆ ಬಂದರೂ ಅಂಬಾರಿ ಹೊರುವುದು ಅನುಮಾನ. ಇದಕ್ಕೆ 60 ವರ್ಷದ ಆನೆಗಳ ಮೇಲೆ ಭಾರ ಹೊರಿಸಬಾರದು ಎಂದು ಹೈಕೋರ್ಟ್‌ ನೀಡಿರುವ ಆದೇಶವೇ ಕಾರಣವಾಗಿದೆ.

ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು

ಅರ್ಜುನ ಆನೆಯು ವಾಪಸ್‌ ಮೆರವಣಿಗೆಯಲ್ಲಿ ಒಮ್ಮೆ ಅಂಬಾರಿ ಹೊತ್ತಿತ್ತು. ನಂತರ ವರ್ಷಗಳಲ್ಲಿ ಅರ್ಜುನ ಆನೆಗೆ ಅಂಬಾರಿ ಹೊರಿಸಿರಲಿಲ್ಲ. ಆದರೆ, 2012ನೇ ಸಾಲಿನಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನಯಶಸ್ವಿಯಾಗಿ ನಿರ್ವಹಿಸುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.

ಮಾವುತರ ಕಥೆ

ಅರ್ಜುನ ಆನೆಯು ಮೊದಲ ನಾಲ್ಕು ವರ್ಷ ಮಾವುತ ದೊಡ್ಡ ಮಾಸ್ತಿ ಅಪ್ಪಣೆಯಂತೆ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿತ್ತು. 2016 ನೇ ಸಾಲಿನಲ್ಲಿ ದೊಡ್ಡ ಮಾಸ್ತಿ ನಿಧನರಾದರು. ಹೀಗಾಗಿ, ಅರ್ಜುನ ಆನೆಯ ಕಾವಾಡಿಯಾಗಿದ್ದ ದೊಡ್ಡ ಮಾಸ್ತಿ ಪುತ್ರ ಸಣ್ಣಪ್ಪ (ಮಹೇಶ) ಅವರು 2016ನೇ ಸಾಲಿನಲ್ಲಿ ಅಂಬಾರಿ ಆನೆಯ ಅರ್ಜುನನನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಸಣ್ಣಪ್ಪ ಕಾವಾಡಿಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಮಾವುತ ವಿನು ಅರ್ಜುನನನ್ನು ಮುನ್ನಡೆಸುವುದಾಗಿ ಪಟ್ಟು ಹಿಡಿದಿದ್ದರಿಂದ 2017ನೇ ಸಾಲಿನಲ್ಲಿ ಅರ್ಜನನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಾವುತ ವಿನುಗೆ ವಹಿಸಿದ್ದರು. ಅದನ್ನು ವಿನು ಯಶಸ್ವಿಯಾಗಿ ಎರಡು ವರ್ಷ ನಿರ್ವಹಿಸಿದ್ದು, ಈ ಬಾರಿ ಹ್ಯಾಟ್ರಿಕ್‌ ಬಾರಿಸುವ ತವಕದಲ್ಲಿದ್ದಾರೆ. ಇನ್ನೂ ಸಣ್ಣಪ್ಪ ಬೇರೆ ಆನೆಗೆ ನಿಯೋಜಿಸಲಾಗಿದ್ದು, ಮಧು ಎಂಬವರನ್ನು ಅರ್ಜುನನ ಕಾವಾಡಿಯಾಗಿ ನೇಮಿಸಲಾಗಿದೆ.

ಅಂಬಾರಿ ಹೊತ್ತ ಆನೆಗಳು

ಮೊದಲು ದ್ರೋಣ ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. 1997ರ ದಸರೆ ಮುಗಿಸಿ ಆನೆ ಶಿಬಿರಕ್ಕೆ ಹೋಗಿದ್ದ ವೇಳೆ ಬಳ್ಳೆ ಅರಣ್ಯದಲ್ಲಿ ಸೊಪ್ಪು ತಿನ್ನುವಾಗ ಸೊಂಡಿಲಿಗೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ದ್ರೋಣ ಮೃತಪಟ್ಟಿತ್ತು. ದ್ರೋಣ ಆನೆಯ ನಂತರ ಬಲರಾಮ ಆನೆ ಸತತ 14 ಬಾರಿ ಅಂಬಾರಿ ಹೊತ್ತು ತನ್ನ ಸಾಮರ್ಥ್ಯ ಸಾಬೀತುಪಡಿಸಿತ್ತು. ಆದರೆ, 2012ನೇ ಸಾಲಿನಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ವಹಿಸಲಾಗಿದೆ. ಅಂಬಾರಿ ಹೊರುವುದು ತಪ್ಪಿದರೂ ಬಲರಾಮ ಪ್ರತಿ ವರ್ಷ ದಸರೆಯಲ್ಲಿ ಭಾಗವಹಿಸುತ್ತಿದೆ.

ಆನೆ ಸುತ್ತ ಸರ್ಪಗಾವಲು

ಅಂಬಾರಿ ಆನೆ ಸುತ್ತಮುತ್ತ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸುತ್ತಾರೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಸುತ್ತಮುತ್ತ ಕಮಾಂಡೋ ಪಡೆ ನಿಯೋಜಿಸಿ, ಆನೆಯ ಹತ್ತಿರ ಅನಗತ್ಯವಾಗಿ ಯಾರು ಸುಳಿಯದಂತೆ ನೋಡಿಕೊಳ್ಳಲಾಗುತ್ತದೆ.

ಆನೆ ಮೇಲೆ ಚಿನ್ನದ ಅಂಬಾರಿ ಕಟ್ಟಲು ಹಾಗೂ ಆನೆ ಜೊತೆಗೆ ಸಾಗಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಸೇರಿದಂತೆ ವಿಶೇಷ ರಕ್ಷಣಾ ತಂಡವನ್ನು ರಚಿಸಲಾಗಿದೆ. ಈ ತಂಡವು ಜೀಪ್‌ನಲ್ಲಿ ಆನೆ ಕಟ್ಟುವಂತಹ ಹಗ್ಗ, ಕಬ್ಬಿಣದ ಸರಪಳಿ, ಬೇಡಿ, ಕ್ರೇನ್‌, ಅರವಳಿಕೆ ಮದ್ದು ಇನ್ನಿತರ ಉಪಕರಣಗಳು ಜೀಪ್‌ನಲ್ಲಿ ಇರಿಸಿಕೊಂಡಿರುತ್ತದೆ. ಒಂದು ವೇಳೆ ಆನೆಗಳು ರೊಚ್ಚಿಗೆದ್ದರೇ ರಕ್ಷಣಾ ತಂಡವು ಆನೆಗೆ ಸರಪಳಿ, ಬೇಡಿ ಹಾಕಿ ನಿಯಂತ್ರಿಸುತ್ತಾರೆ. ಆನೆ ನಿಯಂತ್ರಣಕ್ಕೆ ಬಾರದಿದ್ದರೇ ಅರವಳಿಕೆ ಮದ್ದು ನೀಡುವ ಮೂಲಕ ನಿಯಂತ್ರಣಕ್ಕೆ ತರುತ್ತಾರೆ ಎನ್ನುತ್ತಾರೆ ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು.

ಮೈಸೂರು: ಕೇಕ್‌ ಮೆಲ್ಲಲು ಬಾಲಕಿಯರ ಪೈಪೋಟಿ

ಅಂಬಾರಿ ಆನೆ ಅರ್ಜುನ ಸೇರಿದಂತೆ ಎಲ್ಲಾ 13 ಆನೆಗಳು ಜಂಬೂಸವಾರಿಗೆ ಸಜ್ಜಾಗಿವೆ. ಎಲ್ಲಾ ಆನೆಗಳ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಉತ್ತಮವಾಗಿದೆ. ಅರ್ಜುನ ಅಂಬಾರಿ ಹೊರಲಿದೆ. ಉಳಿದಂತೆ ಅಂತಿಮವಾಗಿ ಎಷ್ಟುಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ ಎಂಬುದನ್ನು ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧರಿಸಲಾಗುವುದು ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ಹೇಳಿದ್ದಾರೆ.

-ಬಿ. ಶೇಖರ್‌ ಗೋಪಿನಾಥಂ