Asianet Suvarna News Asianet Suvarna News

ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು

 400 ವರ್ಷಗಳಷ್ಟುಇತಿಹಾಸ ಹೊಂದಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. 

Mysore Ready to Dasara Jambusavari
Author
Bengaluru, First Published Oct 7, 2019, 7:39 AM IST

ಅಂಶಿ ಪ್ರಸನ್ನಕುಮಾರ್‌ 

ಮೈಸೂರು [ಅ.07]:  ಸುಮಾರು 400 ವರ್ಷಗಳಷ್ಟುಇತಿಹಾಸ ಹೊಂದಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವೈಭವದ ‘ಜಂಬೂಸವಾರಿ’ಯು ವಿಜಯದಶಮಿಯ ದಿನವಾದ ಮಂಗಳವಾರ (ಅ.8) ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಡಹಬ್ಬ ದಸರಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಯಡಿಯೂರಪ್ಪ ಅವರಿಗಿದು ನಾಲ್ಕನೇ ದಸರಾ. ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿ, ಸತತ ಮೂರು ಬಾರಿ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಈ ಬಾರಿ ಸೆ.29ರಂದು ಚಾಮುಂಡಿಬೆಟ್ಟದಲ್ಲಿ ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ದಸರೆಗೆ ಚಾಲನೆ ನೀಡಿದ್ದರು. ಅಂದಿನಿಂದಲೇ ಅರಮನೆ ನಗರಿಯತ್ತ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದು, ನಾಡಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ, ದಸರಾ ಜಂಬೂಸವಾರಿ ವೈಭವ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಮಧ್ಯಾಹ್ನ ಚಾಲನೆ: ಮಂಗಳವಾರ ಮಧ್ಯಾಹ್ನ 2.15 ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿ ಜಂಬೂಸವಾರಿಗೆ ಚಾಲನೆ ನೀಡುವರು. ನಂತರ ಸಂಜೆ 4.31 ರಿಂದ 4.57 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು, ಗಜರಾಜ ‘ಅರ್ಜುನ’ ಹೊರಲಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿರಿಸುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಶಾಸಕ ಎಸ್‌.ಎ.ರಾಮದಾಸ್‌ ಇತರರು ಉಪಸ್ಥಿತರಿರುವರು.

ನಂದಿಧ್ವಜ, ವೀರಗಾಸೆ, ನಾದಸ್ವರ, ನೌಪತ್‌, ನಿಶಾನೆ ಆನೆಗಳು, ಎನ್‌ಸಿಸಿ, ಸ್ಕೌಟ್ಸ್‌, ಗೈಡ್ಸ್‌, ವಿವಿಧ ಪೊಲೀಸ್‌ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 38 ಸ್ತಬ್ಧ ಚಿತ್ರಗಳು, 50 ಜನಪದ ಕಲಾತಂಡಗಳು, ಒಟ್ಟು 13 ಆನೆಗಳು ಜಂಬೂಸವಾರಿಗೆ ಸಾಥ್‌ ನೀಡಲಿವೆ. ಕೊನೆಯಲ್ಲಿ ಚಿನ್ನದ ಅಂಬಾರಿ ಹೊತ್ತ ಅರ್ಜುನ ಸಂಗಾತಿಗಳಾದ ಕಾವೇರಿ ಹಾಗೂ ವಿಜಯ ಜೊತೆ ಹೆಜ್ಜೆ ಹಾಕಲಿದ್ದಾನೆ. ಅರ್ಜುನ ಸತತ 8ನೇ ಬಾರಿಗೆ ಚಿನ್ನದ ಅಂಬಾರಿ ಹೊರಲಿದ್ದು, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಹೈವೇ ವೃತ್ತದ ಮೂಲಕ ಮೆರವಣಿಗೆ ಸಾಗಿ 5 ಕಿ.ಮೀ. ದೂರದ ಬನ್ನಿಮಂಟಪ ತಲುಪಲಿದೆ.

ಬಿಗಿ ಬಂದೋಬಸ್ತ್: ಮೆರವಣಿಗೆಗೆ 8,407 ಪೊಲೀಸರನ್ನು ಬಳಸಿಕೊಂಡು ಬಿಗಿ ಬಂದೋಬಸ್‌್ತ ಮಾಡಲಾಗಿದೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲೆಡೆ ಲೋಹಶೋಧಕ ಯಂತ್ರಗಳ ಮೂಲಕ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಅರಮನೆ ಸುತ್ತಮುತ್ತ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪಂಜಿನ ಕವಾಯತು: ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸುವರು. ಇದರೊಂದಿಗೆ 10 ದಿನಗಳಿಂದ ನಡೆಯುತ್ತಿರುವ ದಸರೆಗೆ ತೆರೆ ಬೀಳಲಿದೆ.

ಅಂತಿಮ ಹಂತದ ಸಿದ್ಧತೆ: ಜಂಬೂ ಸವಾರಿ ಸಾಗುವ ಮಾರ್ಗವನ್ನು ಸುಂದರಗೊಳಿಸುವ ಅಂತಿಮ ಸುತ್ತಿನ ಕೆಲಸಗಳು ಭರದಿಂದ ಸಾಗಿವೆ. ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳನ್ನು ಸಜ್ಜುಗೊಳಿಸುವ ಕಾರ್ಯ ಕೊನೇ ಹಂತಕ್ಕೆ ಬಂದಿದೆ. ಕಲಾತಂಡಗಳು ಕೂಡಾ ಸಜ್ಜಾಗುತ್ತಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ವಿಶೇಷ ಬಸ್‌ ಹಾಗೂ ರೇಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಜಂಬೂ ಸವಾರಿ ವೇಳೆ ಅರಮನೆ ಆವರಣದಲ್ಲಿ ಅತಿ ಗಣ್ಯರು, ಗಣ್ಯರು, ಆಹ್ವಾನಿತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಪುರಭವನದ ಎದುರು, ನಗರ ಸಾರಿಗೆ ಬಸ್‌ ನಿಲ್ದಾಣದ ಎದುರಿನ ಪಾದಚಾರಿ ರಸ್ತೆಯಲ್ಲಿ ನಗರಪಾಲಿಕೆ ವತಿಯಿಂದ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ವೈವಿಧ್ಯಮಯ ಕಾರ್ಯಕ್ರಮಗಳು: ದಸರೆ ಅಂಗವಾಗಿ ಚಲನಚಿತ್ರೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಕ್ರೀಡಾಕೂಟ, ಪುಸ್ತಕ ಮೇಳ, ಫಲಪುಷ್ಪ ಪ್ರದರ್ಶನ, ಮಹಿಳಾ ದಸರಾ, ಮಕ್ಕಳ ದಸರಾ, ಪಾರಂಪರಿಕ ನಡಿಗೆ, ಸೈಕ್ಲೋಥಾನ್‌, ಯೋಗ ದಸರಾ, ರೈತ ದಸರಾ, ಕವಿಗೋಷ್ಠಿ, ಮತ್ಸ್ಯಮೇಳ, ಯುವ ದಸರಾ, ಹಸಿರು ಸಂತೆ ಮತ್ತು ಚಿತ್ರ ಸಂತೆ, ವಿಶೇಷ ಮಕ್ಕಳ ಪ್ರತಿಭಾ ಪ್ರದರ್ಶನ, ಹಾಫ್‌ ಮ್ಯಾರಥಾನ್‌, ಶ್ವಾನಗಳ ಪ್ರದರ್ಶನ, ಹಾಸ್ಯೋತ್ಸವ, ಪೊಲೀಸ್‌ ವಾದ್ಯವೃಂದ, ಕರಕುಶಲ ಕಲೆ ಪ್ರದರ್ಶನ, ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ, ದಸರಾ ದರ್ಶನ, ಜಾನಪದ ಸಿರಿ. ವೈಮಾನಿಕ ಪ್ರದರ್ಶನ, ಸಾಹಸ ಕ್ರೀಡೋತ್ಸವ, ಪಾರಂಪರಿಕ ಕಾರುಗಳ ರಾರ‍ಯಲಿಯನ್ನು ಆಯೋಜಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈಸೂರು ದಸರೆಗೆ 409 ವರ್ಷಗಳ ಸುದೀರ್ಘ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಪತನಾನಂತರ ಮೈಸೂರು ಅರಸರಾದ ರಾಜ ಒಡೆಯರ್‌ ಅವರು 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲು ದಸರೆ ಆಚರಿಸಿದರು. ನಂತರ ಈ ಆಚರಣೆಯನ್ನು ಮೈಸೂರಿಗೆ ಸ್ಥಳಾಂತರಿಸಿದರು.

Follow Us:
Download App:
  • android
  • ios