ವಿಶ್ವನಾಥ ಬಾವಿಕಟ್ಟಿ

ಹಗರಿಬೊಮ್ಮನಹಳ್ಳಿ(ಮೇ.28): ಕೊರೋನಾ ರೋಗ ಹರಡದಂತೆ ಸರ್ಕಾರ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿ ಯಶಸ್ವಿಯಾಗಿದೆ. ಅದರೆ, ದೇಶದ ಅದೆಷ್ಟೋ ಬಡ ಕುಟುಂಬಗಳು ಅನ್ನ, ನೀರು ಇಲ್ಲದೆ ಹೈರಾಣರಾಗಿರುವ ಚಿತ್ರಣಗಳು ಕಣ್ಮುಂದೆ ಇರುವಾಗಲೇ, ಫುಟ್‌ಪಾತ್‌ ವ್ಯಾಪಾರಿಗಳ ತುತ್ತು ಅನ್ನಕ್ಕೂ ಕೊಕ್ಕೆ ಬಿದ್ದಿ​ದೆ.

ಹಗರಿಬೊಮ್ಮನಹಳ್ಳಿ ಬಸವೇಶ್ವರ ಬಜಾರ್‌ನ ಫುಟ್‌ಪಾತ್‌ ವ್ಯಾಪಾರ ಇದಕ್ಕಿಂತ ಭಿನ್ನವೇನಿಲ್ಲ. ಇಲ್ಲಿ ಕೋವಿಡ್‌-19ನ ಲಾಕ್‌ಡೌನ್‌ನಿಂದ ಬರೋಬ್ಬರಿ 67 ದಿನಗಳ ಕಾಲ ಮುಕ್ತ ವ್ಯಾಪಾರದಿಂದ ದೂರವಿದ್ದ ಕಾರಣ, 350ಕ್ಕೂ ಹೆಚ್ಚು ಕುಟುಂಬಗಳು ಭುಜಬಲ ಸಂಪೂರ್ಣ ಕುಸಿದು ಹೋಗಿ​ದೆ. ಅಲ್ಲದೆ 2019ರ ಆಗಸ್ಟ್‌ ತಿಂಗಳಿನಿಂದಲೇ ಪಟ್ಟಣದ ಫುಟ್‌ಪಾತ್‌ ವ್ಯಾಪಾರಿಗಳ ಮೇಲೆ ರಾಜಕೀಯದ ಕರಿನೆರಳು ಬಿದ್ದಿದೆ ಎಂದರೆ ತಪ್ಪಾಗಲಾರದು. ಇದರಿಂದ ಫುಟ್‌ಪಾತ್‌ ವ್ಯಾಪಾರಿಗಳಾದ, ಹೂ-ಹಣ್ಣು, ಕಾಯಿ, ಎಲೆ, ಬಟ್ಟೆ, ಟೀ-ಕಾಫಿ ಸೇರಿ ಇನ್ನೂ ಅನೇಕ ವ್ಯಾಪಾ​ರಿ​ಗ​ಳ​ನ್ನು ಪದೇ ಪದೇ ಸ್ಥಳಾಂತರಿಸುತ್ತಿರುವುದು ಸಂಕ​ಷ್ಟಕ್ಕೆ ದೂಡಿ​ದೆ.

ಬಳ್ಳಾರಿ: ಕೋಲ್ಡ್‌ ಸ್ಟೋರೇಜ್‌ ದುರಸ್ತಿ, ವಿಮ್ಸ್‌ನಲ್ಲಿ ಕೊಳೆಯುತ್ತಿವೆ ಶವಗಳು!

ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಪಟ್ಟಣ ಸೇರಿ ತಾಲೂಕಿನಿಂದಲೂ ಬೆಂಬಲ ಸಿಕ್ಕಿದೆ. ಆದರೆ, ಈ ಸಮಯದಲ್ಲಿ ಫುಟ್‌ಪಾತ್‌ ವ್ಯಾಪಾರಿಗಳ ಜೀವನದ ಬಗ್ಗೆ ಯಾರೊಬ್ಬರು ಚಿಂತಿಸಿಲ್ಲ. ಅವರ ಪರದಾಟ, ಆಗಾಗ ಆಗುತ್ತಿರುವ ಅಲೆದಾಟಗಳ ಬಗ್ಗೆ ಈ ವ್ಯಾಪಾರಿಗಳು ಮನನೊಂದು ಅಧಿಕಾರಿಗಳಿಗೂ ಮತ್ತು ಪರಿಸ್ಥಿತಿಗೂ ಹಿಡಿಶಾಪ ಹಾಕುತ್ತಿದ್ದಾರೆ.

ಫುಟ್‌ಪಾತ್‌ ವ್ಯಾಪಾರದ ಹಿನ್ನೆಲೆ:

ಮೊದಲಿನಿಂದಲೂ ಪಟ್ಟಣದ ಬಸವೇಶ್ವರ ಬಜಾರದಲ್ಲಿ ಸಾಂಪ್ರದಾಯಿಕವಾಗಿ ಬೀದಿಬದಿಯ ವ್ಯಾಪಾರ ನಡೆದಿತ್ತು. ಹೊಸದಾಗಿ ಬಂದವರು ಹಾಗೂ ವಲಸಿಗರು ಫುಟ್‌ಪಾತ್‌ ವ್ಯಾಪಾರದ ಸಂಪ್ರದಾಯವನ್ನು ಮುರಿದರು. ಬಸವೇಶ್ವರ ಬಜಾರ್‌ನಲ್ಲಿ ಜನದಟ್ಟಣೆ ಇರು​ತ್ತದೆ. ಇಲ್ಲಿ ಕಟ್ಟಡ ಮಾಲೀಕರು ನಾಮುಂ​ದೆ, ತಾಮುಂ​ದೆ ಎನ್ನುವಂತೆ ಪೈಪೋಟಿಗೆ ಬಿದ್ದು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟುತ್ತ ಫುಟ್‌ಪಾತ್‌ ಆಕ್ರಮಿಸಿದರು. ಫುಟ್‌ಪಾತ್‌ ತೆರವುಗೊಳಿಸಲು 9 ತಿಂಗಳ ಹಿಂದೆ ಕೈಗೊಂಡ ಪುರಸಭೆಯವರ ಕ್ರಮ ಖಂಡಿಸಿ, ಸ್ಥಳೀಯ ತಾಲೂಕು ಆಡಳಿತಕ್ಕೂ, ಶಾಸಕರ ಬಳಿ ಹೋಗಿ ಮನವಿ ಸಲ್ಲಿಸಿದರು.

ಸ್ಥಳೀಯ ಶಾಸಕ ಎಸ್‌. ಭೀಮಾನಾಯ್ಕ ಕೂಡ ಪರ್ಯಾಯ ಸ್ಥಳವನ್ನು ಗುರುತಿಸಲಾಗುವುದು ಎಂದು ಹಳೇಬಸ್‌ ತಂಗುದಾಣದಲ್ಲಿ 8 ಲಕ್ಷ ವೆಚ್ಚದಲ್ಲಿ ಪ್ಲಾಟ್‌ಫಾರಂ ದುರಸ್ತಿ ಮಾಡಿಸಿದರು. ನಂತರ ಅದರ ಮಾಲೀಕ ನಮ್ಮ ನಿವೇಶನದಲ್ಲಿ ಅಧಿಕೃತ ವ್ಯಾಪಾರ ಕೈಗೊಂಡರೆ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೊಸಪೇಟೆಯಿಂದಲೇ ಗುಟುರು ಹಾಕಿದ್ದರು. ಮತ್ತೇ ಶಾಸಕರ ಅಂಗಳಕ್ಕೆ ಫುಟ್‌ಪಾತ್‌ ವ್ಯಾಪಾರಿಗಳು ಬಂದರು. ಶಾಸಕರು ಅವರಿಗೆ ವಿಶೇಷ ಅನುದಾನದಲ್ಲಿ 5 ಕೋಟಿ ವೆಚ್ಚದಲ್ಲಿ ಹಳೇ ಪ್ರವಾಸಿ ಮಂದಿರದ ಖಾಲಿ ನಿವೇಶನದಲ್ಲಿ ಹೈಟೆಕ್‌ ಸೂಪರ್‌ ಮಾರ್ಕೇಟ್‌ ಕಲ್ಪಿಸಿಕೊಡಲಾಗುವುದೆಂದು ಮತ್ತೊಮ್ಮೆ ಭರವಸೆ ನೀಡಿದರು. ಅದರ ಕಥೆ ಏನಾಗಿದೆಯೋ ತಿಳಿಯಬೇಕಿದೆ.
ಇವರ ಪರವಾಗಿ ಸಿಐಟಿಯು ಹೋರಾಟಕ್ಕೆ ರಸ್ತೆಗಿಳಿಯಿತು. ಅಲ್ಲದೆ ಬಿಜೆಪಿ ಸಂಸದರು ದೇವೇಂದ್ರಪ್ಪ ಹಾಗೂ ಮಾಜಿ ಶಾಸಕ ನೇಮಿರಾಜ್‌ನಾಯ್ಕ ಬೀದಿ ಬದಿಯ ವ್ಯಾಪಾರಿಗಳ ಪರವಾಗಿ ನಿಂತರಾದರೂ, ಇನ್ನೂ ಗಟ್ಟಿಯಾದ ನಿಲುವು ತೆಗೆದುಕೊಳ್ಳುವಲ್ಲಿ ಮುಂದಾಗಬೇಕಿದೆ. ಸಂಘಟನೆಗಳು ಇನ್ನಷ್ಟೂರಸ್ತೆಗಿಳಿಯಬೇಕಿದೆ.

ಲಾಕ್‌ಡೌನ್‌ ನೆಪವೊಡ್ಡಿ ಫುಟ್‌ಪಾತ್‌ ವ್ಯಾಪಾರ ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ಮತ್ತು ಪುರಸಭೆಯ ಕ್ರಮದ ಹಿಂದೆ ಕಾಣದ ಕೈಗಳು ಕೆಲಸ ಮಾಡು​ತ್ತಿ​ವೆ. ನಮ್ಮ ಹೀನಾಯ ಬದುಕಿನ ಬಗ್ಗೆ ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ಬೀದಿಬದಿಯ ಹೂ-ಹಣ್ಣು ಹಾಗೂ ಇತರೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಯು. ಮಂಜುನಾಥ ಚಡಪಡಿಸುತ್ತಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಫುಟ್‌ಪಾತ್‌ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಮ್ಮಲ್ಲಿ ಇನ್ನೂ ಅಲ್ಲಿ ಇಲ್ಲಿ ಸುತ್ತಾಡಿಸುತ್ತಿದ್ದಾರೆ. ಬೀದಿಯಲ್ಲಿರುವ ನಮ್ಮನ್ನು ಅಪರಾಧಿಗಳಂತೆ ನೋಡುತ್ತಿದ್ದಾರೆ. ಪೊಲೀಸ್‌ ಇಲಾಖೆಯವರ ಬೈಗಳ ಕಣ್ಣಿರು ತರಿಸುತ್ತಿವೆ. ಅಂಗಡಿಗಳ ಮಾಲೀಕರು ಗುರುಗುಟ್ಟಿನೋಡುತ್ತಿದ್ದಾರೆ ಎಂದು ರೋಷನ್‌, ನಾಗರಾಜ್‌ ವಿಜಯಮ್ಮ, ಹುಸೇನ್‌ ಹಾಗೂ ಕೊಟ್ರೇಶ್‌ ದೂರುತ್ತಾರೆ.
ಒಟ್ಟಾರೆ ಫುಟ್‌ಪಾತ್‌ ವ್ಯಾಪಾರಿಗಳ ಸ್ಥಿತಿ ಹೇಳ​ತೀ​ರ​ದಾ​ಗಿ​ದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಶಾಶ್ವತ ಪರಿಹಾರ ಕಲ್ಪಿ​ಸಬೇಕಿದೆ.