ಬಳ್ಳಾರಿ(ಮೇ.28): ನಗರದ ವಿಜಯನಗರ ವೈದ್ಯಕೀಯ ಕಾಲೇಜು (ವಿಮ್ಸ್‌) ಶವಾಗಾರದಲ್ಲಿನ ಕೋಲ್ಡ್‌ ಸ್ಟೋರೇಜ್‌ ದುರಸ್ತಿಗೆ ಬಂದಿದ್ದು ಶವಗಳನ್ನು ಶವಾಗಾರದ ಬಯಲಲ್ಲಿಯೇ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಮ್ಸ್‌ ಶವಾಗಾರದಲ್ಲಿ ಎಂಟು ಶವಗಳನ್ನಿಡಲು ವ್ಯವಸ್ಥೆ ಇರುವ ಎರಡು ಕೋಲ್ಡ್‌ ಸ್ಟೋರೇಜ್‌ಗಳಿವೆ. ಒಂದು ಕೋಲ್ಡ್‌ ಸ್ಟೋರೇಜ್‌ ವಿದ್ಯುತ್‌ ಶಾರ್ಟ್‌ ಸಕ್ಯೂರ್ಟ್‌ನಿಂದ ಕಳೆದ ಒಂದು ತಿಂಗಳ ಹಿಂದೆಯೇ ಸ್ಥಗಿತವಾಗಿತ್ತು. ಮಂಗಳವಾರ ಮತ್ತೊಂದು ಕೋಲ್ಡ್‌ ಸ್ಟೋರೇಜ್‌ ಸ್ಥಗಿತವಾಗಿದ್ದರಿಂದ ಶವಗಳನ್ನು ಇಡಲು ಕೋಲ್ಡ್‌ ಸ್ಟೋರೇಜ್‌ ಇಲ್ಲವಾಗಿದೆ. ಇದರಿಂದ ಶವಾಗಾರದ ಬಯಲಲ್ಲಿಯೇ ಶವಗಳನ್ನು ಸ್ಟ್ರೆಚರ್‌ನಲ್ಲಿಯೇ ಇಡಲಾಗುತ್ತಿದ್ದು, ಕೋಲ್ಡ್‌ ಸ್ಟೋರೇಜ್‌ ಇಲ್ಲದೆ ಶವಗಳು ದುರ್ವಾಸನೆ ಬೀರುತ್ತಿವೆ. ಕೆಲವರು ಶವ ಕೆಡಬಾರದು ಎಂದು ಖಾಸಗಿಯಾಗಿ ಕೋಲ್ಡ್‌ ಬಾಕ್ಸ್‌ ತಂದಿಟ್ಟುಕೊಂಡಿದ್ದಾರೆ.

ಕುರುಗೋಡು: ಟಿಪ್ಪರ್‌-ಟಾಟಾ ಏಸ್‌ ಡಿಕ್ಕಿ, 15 ಜನ​ರಿಗೆ ಗಾಯ

ಕೊರೋನಾ ವೈರಸ್‌ ಶಂಕೆಯಿರುವ ಅನೇಕ ಶವಗಳನ್ನು ಗಂಟಲುದ್ರವ ಪರೀಕ್ಷೆ ವರದಿ ಬರುವವರೆಗೆ ಇಟ್ಟುಕೊಳ್ಳಲಾಗುತ್ತದೆ. ಇದಲ್ಲದೆ, ಅಪಘಾತ ಮತ್ತಿತರ ಕಾರಣಗಳಿಂದ ಸಾವಿಗೀಡಾಗುವ ಶವಗಳನ್ನು ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡಲಾಗುತ್ತದೆ. ಆದರೆ, ಇದೀಗ ಇರುವ ಎರಡು ಕೋಲ್ಡ್‌ ಸ್ಟೋರೇಜ್‌ಗಳು ದುರಸ್ತಿಗೆ ಬಂದಿರುವುದರಿಂದ ಶವಗಳನ್ನು ಬಯಲಲ್ಲಿಯೇ ಇಡುವಂತಾಗಿದೆ. ಇದರಿಂದ ಮೃತರ ಸಂಬಂಧಿಕರು ಆತಂಕಗೊಂಡಿದ್ದು, ವಿಮ್ಸ್‌ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸುತ್ತಿದ್ದಾರೆ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಕೋಲ್ಡ್‌ ಸ್ಟೋರೇಜ್‌ ದುರಸ್ತಿಗೆ ಬಂದಿವೆ. ಕೊರೋನಾ ವೈರಸ್‌ ಭೀತಿ ಇರುವುದರಿಂದ ದುರಸ್ತಿ ಮಾಡುವವರ ಸಮಸ್ಯೆ ಎದುರಾಗಿದೆ. ಹೀಗಾಗಿ ಖಾಸಗಿಯಲ್ಲಿನ ಕೋಲ್ಡ್‌ ಬಾಕ್ಸ್‌ನ್ನು ಇಡಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗಿದ್ದು, ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಿಂದ ತರಿಸಿಕೊಳ್ಳಲು ಪ್ರಯತ್ನ ನಡೆದಿದೆ ಎಂದು ವಿಮ್ಸ್‌ ನಿರ್ದೇಶಕ  ಡಾ. ದೇವಾನಂದ್‌ ತಿಳಿಸಿದ್ದಾರೆ.