Mysuru : ಸಾವಯವ, ವೈವಿಧ್ಯದ ಬೆಳೆ ಪದ್ಧತಿ ಅನುಸರಿಸಿ

ಸೂಕ್ತ ಮಾರುಕಟ್ಟೆವ್ಯವಸ್ಥೆಯ ಕೊರತೆ, ಉತ್ತಮ ಬೆಲೆ ಇಲ್ಲದಿರುವುದು, ಹವಮಾನ ವೈಫರಿತ್ಯದಿಂದ ರೈತರು ನಲುಗಿದ್ದಾರೆ. ರೈತರು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಸಾವಯವ ಮತ್ತು ವೈವಿಧ್ಯದ ಬೆಳೆ ಪದ್ಧತಿ ಅನುಸರಿಸಬೇಕಿದೆ ಎಂದು ಕೃಷಿ ವಿಜ್ಞಾನಿ ಡಾ.ಎ.ಆರ್‌. ವಾಸವಿ ತಿಳಿಸಿದರು.

Follow organic, diversified cropping practices snr

  ಮೈಸೂರು (ನ. 12): ಸೂಕ್ತ ಮಾರುಕಟ್ಟೆವ್ಯವಸ್ಥೆಯ ಕೊರತೆ, ಉತ್ತಮ ಬೆಲೆ ಇಲ್ಲದಿರುವುದು, ಹವಮಾನ ವೈಫರಿತ್ಯದಿಂದ ರೈತರು ನಲುಗಿದ್ದಾರೆ. ರೈತರು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಸಾವಯವ ಮತ್ತು ವೈವಿಧ್ಯದ ಬೆಳೆ ಪದ್ಧತಿ ಅನುಸರಿಸಬೇಕಿದೆ ಎಂದು ಕೃಷಿ ವಿಜ್ಞಾನಿ ಡಾ.ಎ.ಆರ್‌. ವಾಸವಿ ತಿಳಿಸಿದರು.

ನಗರದ ಕರ್ನಾಟಕ (Karnataka )  ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದದಲ್ಲಿ ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟವು (ಆಶಾ) ಆಯೋಜಿಸಿರುವ ಮೂರು ದಿನಗಳ 5ನೇ ಕಿಸಾನ್‌ ಸ್ವರಾಜ್‌ (Kisan Swaraj)  ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಘಟಿಸುತ್ತಿರುವ ಜಾಗತಿಕ ವಾತಾವರಣ ಬದಲಾವಣೆ ಎಲ್ಲಾ ದೇಶಗಳ ಆಹಾರ ಭದ್ರತೆಗೆ ಸವಾಲನ್ನು ಒಡ್ಡಿದೆ. ಈ ಪರಿಸ್ಥಿತಿಯಲ್ಲಿ ಕೃಷಿ ವೈವಿಧ್ಯ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಆಯ್ಕೆ ಎಂದರು.

ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ:

ಕೋಲಾರದ ಬೀಜ ಸಂರಕ್ಷಕಿ ಪಾಪಮ್ಮ ಮಾತನಾಡಿ, ಕಳೆದ 35 ವರ್ಷದಿಂದ ನಾನು ಸಾವಯವ ಕೃಷಿ ಮಾಡುತ್ತಾ ಬಂದಿದ್ದು, 50 ಜಾತಿಯ ತರಕಾರಿ ಮತ್ತು ಧವಸ ಧಾನ್ಯಗಳ ದೇಸಿ ಬಿತ್ತನೆ ಬೀಜಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೇನೆ. ಇದೇ ಉದ್ದೇಶಕ್ಕೆ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಸಮಾಜ ನಿಮ್ಮನ್ನೂ ಗುರುತಿಸಬೇಕಾದರೆ ಭೂಮಿಗೆ ರಾಸಾಯನಿಕ ಹಾಕುವುದನ್ನು ಬಿಟ್ಟು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಆಶಾ ರಾಷ್ಟ್ರೀಯ ಸಂಚಾಲಕ ಕಪಿಲ್‌ ಶಾ ಮಾತನಾಡಿ, 1980 ಮುಂಚೆಯೇ ಕರ್ನಾಟಕದಲ್ಲಿ ಸಾವಯವ ಕೃಷಿ ಪ್ರವರ್ಧಮಾನಕ್ಕೆ ಬಂದಿರುವುದಷ್ಟೇ ಅಲ್ಲದೇ ಇಡೀ ದೇಶಕ್ಕೆ ಸಾವಯವ ಪಾಠಗಳನ್ನು ಹೇಳಿಕೊಟ್ಟಿದೆ. ಜತೆಗೆ ಸಾವಯವ ಕೃಷಿ ನೀತಿಯನ್ನು ಮೊದಲು ಜಾರಿಗೊಳಿಸಿದ್ದು ಕರ್ನಾಟಕ. ದಶಕದ ಪ್ರಯತ್ನದಿಂದ ಇದೀಗ ಸಾವಯವ ನೀತಿಯನ್ನು ಒಂದೊಂದೇ ರಾಜ್ಯ ಅಳವಡಿಸಿಕೊಳ್ಳುತ್ತಿವೆ. ಅದಕ್ಕೆ ಈ ಕೃಷಿ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವಲ್ಲಿ ನಿರಂತರ ಶ್ರಮಿಸಿದ ಕೃಷಿಕರು, ತಜ್ಞರನ್ನು ಸ್ಮರಿಸಬೇಕು ಎಂದರು.

ಈ ಸಮ್ಮೇಳನದಲ್ಲಿ ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರ, ಗುಜರಾತ್‌, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು ಸೇರಿದಂತೆ 23 ರಾಜ್ಯಗಳ ಎರಡು ಸಾವಿರಕ್ಕೂ ಹೆಚ್ಚು ಸಾವಯವ ಕೃಷಿಕರು, ಕೃಷಿ ವಿಜ್ಞಾನಿಗಳು, ತಂತ್ರಜ್ಞರು ಭಾಗವಹಿಸಿದ್ದರು.

ಈ ಸಮ್ಮೇಳನನ್ನು ಕೇರಳದ ಕೃಷಿ ಸಚಿವ ಪಿ. ಪ್ರಸಾದ್‌ ಉದ್ಘಾಟಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಪರಿಸರ ತಜ್ಞ ಯು.ಎನ್‌. ರವಿಕುಮಾರ್‌, ರಾಜ್ಯ ಮುಕ್ತ ವಿವಿ ಪ್ರಭಾರ ಕುಲಪತಿ ಡಾ. ಖಾದರ್‌ ಪಾಷಾ, ನಿವೃತ್ತ ಮೇಜರ್‌ ಜನರಲ್‌ ಒಂಬತ್ಕೆರೆ, ಸಾವಯವ ಕೃಷಿಕ ನಚಿಕೇತ್‌, ಸ್ವಾಗತ ಸಮಿತಿ ಸದಸ್ಯ ಕೃಷ್ಣಪ್ರಸಾದ್‌ ಮೊದಲಾದವರು ಇದ್ದರು.

ಜಾಗತಿಕ ತಾಪಮಾನ ಏರಿಕೆಯಲ್ಲಿ ಕೃಷಿ ವಲಯದ ಕೊಡುಗೆಯೂ ಇದೆ. ನಮ್ಮ ರೈತರು ಪರಿಸರ ಕೇಂದ್ರಿತ ನೈಸರ್ಗಿಕ ಕೃಷಿಯನ್ನು ಮರೆತಿದ್ದಾರೆ. ಕೃಷಿ ವಲಯವು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಾವಯವ ಕೃಷಿಯತ್ತ ಹೊರಳುವುದು ತುರ್ತಾಗಿದೆ.

- ಪಿ. ಪ್ರಸಾದ್‌, ಕೇರಳದ ಕೃಷಿ ಸಚಿವ

----

ನಮ್ಮ ಕೃಷಿ ಪದ್ಧತಿ, ಮಣ್ಣಿನ ಮತ್ತು ನಮ್ಮ ಆರೋಗ್ಯ, ಪರಿಸರ ಉಳಿಯಬೇಕಾದರೆ ಸಾವಯವ ಕೃಷಿಯತ್ತ ರೈತರು ವಾಲಬೇಕಿದೆ. ಇದರ ನಡುವೆ ಸ್ಥಳೀಯ ಆಹಾರ ಬೆಳೆಗಳನ್ನು ಸಾಂಪ್ರದಾಯಿಕವಾಗಿ ಬೇಸಾಯವನ್ನು ಪ್ರೋತ್ಸಾಹಿಸಲು ಹಲವು ರೈತ ಸೇವಾ ಸಂಘಟನೆಗಳು ತೊಡಗಿಸಿಕೊಂಡಿರುವುದು ಈ ಪೀಳಿಗೆಯ ಭರವಸೆಯಾಗಿದೆ.

- ಡಾ.ಎ.ಆರ್‌. ವಾಸವಿ, ಕೃಷಿ ವಿಜ್ಞಾನಿ

Latest Videos
Follow Us:
Download App:
  • android
  • ios