ಕಾರವಾರ(ಜು.10): ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಕರಾವಳಿಯುದ್ದಕ್ಕೂ ಜನಜೀವನವನ್ನುಅಸ್ತವ್ಯಸ್ಥವಾಗಿಸಿದೆ. ಕಾರವಾರದ ಮುದಗಾ ಕಾಲನಿಗೆ ಸಂಪರ್ಕವೇ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲೂ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಕರಾವಳಿಯುದ್ದಕ್ಕೂ ಗುರುವಾರ ನಸುಕಿನಲ್ಲೇ ಆರಂಭವಾದ ಭಾರಿ ಮಳೆಯಿಂದ ಹಠಾತ್‌ ಪ್ರವಾಹ ಪರಿಸ್ಥಿತಿ ತಲೆದೋರಿತು. ನೀರು ನುಗ್ಗಿದ ಮನೆಗಳಲ್ಲಿನ ವಸ್ತುಗಳು ಹಾನಿಗೊಳಗಾದವು.

ಕಾರವಾರದಲ್ಲಿ ಭಾರಿ ಪ್ರವಾಹ:

ಕಾರವಾರ ತಾಲೂಕಿನ ಮುದಗಾ, ಅಮದಳ್ಳಿ, ಚೆಂಡಿಯಾ ಬಳಿ ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂತು. ಮುದಗಾ ಬಳಿ ನೌಕಾನೆಲೆ ಆವರಣದೊಳಗೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದರಿಂದ ನೀರಿನ ಹರಿವಿಗೆ ತಡೆಯೊಡ್ಡಿದಂತಾಗಿ ಹೆದ್ದಾರಿ ಜಲಾವೃತವಾಯಿತು. ಮುದಗಾ ಕಾಲನಿಗೆ ಸಂಪರ್ಕವೇ ಕಡಿತಗೊಂಡಿತು. ಬೆಳಗ್ಗೆ 7ಗಂಟೆಯಿಂದ 10 ಗಂಟೆ ತನಕ ಮುದಗಾ, ಅಮದಳ್ಳಿ ಬಹುತೇಕ ಜಲಾವೃತವಾಯಿತು. 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ತುರ್ತು ಇದ್ದವರನ್ನು ಮುದಗಾ ಕಾಲನಿಗೆ ದೋಣಿ ಮೂಲಕ ಕರೆದೊಯ್ಯಲಾಯಿತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮುದಗಾ, ಅಮದಳ್ಳಿಯಲ್ಲಿ 3-4 ಅಡಿಗಳಷ್ಟುನೀರು ತುಂಬಿತು. ವಾಹನಗಳ ಸಂಚಾರ ಸ್ಥಗಿತಗೊಂಡಿತು. ಮುದಗಾದಿಂದ ವೀರಗಣಪತಿ ದೇವಾಲಯ ಹಾಗೂ ಅಮದಳ್ಳಿ ತನಕ ಹೆದ್ದಾರಿಯಲ್ಲಿ ನೀರು ತುಂಬಿತ್ತು. 11 ಗಂಟೆ ನಂತರ ಮಳೆ ಇಳಿಮುಖವಾಗಿದ್ದರಿಂದ ನೀರು ನಿಧಾನಕ್ಕೆ ಇಳಿಯಿತು. ಹೆದ್ದಾರಿಯಲ್ಲಿ ಸಂಚಾರವೂ ಸುಗಮವಾಯಿತು.

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ

ಈ ನಡುವೆ ಕಾರವಾರದಲ್ಲಿ ಕೋವಿಡ್‌-19ನ 10 ಪ್ರಕರಣಗಳು ದೃಢಪಟ್ಟು ಇನ್ನಷ್ಟುಆತಂಕಕ್ಕೆ ಕಾರಣವಾಯಿತು. ಸುರಿಯುವ ಮಳೆಯಲ್ಲಿ ಕೋವಿಡ್‌-19 ಸೋಂಕಿತರನ್ನು ಕರೆದೊಯ್ಯುವ ಅಂಬ್ಯುಲೆನ್ಸ್‌ಗಳ ಭರಾಟೆ ಕಾಣಿಸಿತು. ಅಂಕೋಲಾದ ಅವರ್ಸಾ, ಸಕಲಬೇಣ, ಹಾರವಾಡ, ಕೇಣಿ, ಬೊಗ್ರಿಗದ್ದೆ ಮತ್ತಿತರ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಕಲಬೇಣದಲ್ಲಿ 20ರಷ್ಟುಮನೆಗಳು ಜಲಾವೃತವಾಗಿತ್ತು.

ಕುಮಟಾದಲ್ಲೂ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಕೆಲವು ಮನೆಗಳಿಗೆ ನೀರು ನುಗ್ಗಿತು. ಮರ, ರೆಂಬೆಕೊಂಬೆಗಳು ಉರುಳಿ ಬಿದ್ದು ಕೆಲವೆಡೆ ವಿದ್ಯುತ್‌ ಸಂಚಾರ ಸ್ಥಗಿತಗೊಂಡಿದೆ. ಹೊನ್ನಾವರ ಹಾಗೂ ಭಟ್ಕಳ ತಾಲೂಕಿನಲ್ಲೂ ಭಾರಿ ಮಳೆಯಾಗಿದೆ. ಹಳ್ಳಕೊಳ್ಳಗಳಲ್ಲಿ ನೀರು ಉಕ್ಕೇರಿದ್ದರಿಂದ ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿತ್ತು.

ಉತ್ತರಾಖಂಡ್‌ನಲ್ಲಿನ್ನು ಚೈನೀಸ್ ವಸ್ತು ಬಳಕೆ ಇಲ್ಲ..!

ಮುಂಡಗೋಡದಲ್ಲಿ ನಿರಂತರ ಮಳೆಯಿಂದ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ ಮೇಲೆ ನೀರು ಪ್ರವಹಿಸುತ್ತಿದ್ದು ಮುಂಡಗೋಡ ಹಾಗೂ ಯಲ್ಲಾಪುರ ನಡುವೆ ಸಂಚಾರ ಸ್ಥಗಿತಗೊಂಡಿದೆ. ಯಲ್ಲಾಪುರ ಹಾಗೂ ಶಿರಸಿಯಲ್ಲೂ ಉತ್ತಮ ಮಳೆಯಾಗಿದೆ.

ಜೋಯಿಡಾ ತಾಲೂಕಿನಾದ್ಯಂತ ಗುರುವಾರ ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದೆ. ಸಿದ್ದಾಪುರ ತಾಲೂಕಿನಲ್ಲಿ ಮಧ್ಯಾಹ್ನದ ತನಕ ಮಳೆಯಾಗಿದೆ. ನಂತರ ಇಳಿಮುಖವಾಗಿದೆ.