ಬೆಳಗಾವಿ: ಖಾನಾಪುರದಲ್ಲಿ ಮಳೆ ಆರ್ಭಟ, ಮಲಪ್ರಭಾ ತೀರದಲ್ಲಿ ಪ್ರವಾಹ
* ಕಳೆದೊಂದು ವಾರದಿಂದ ನಿರಂತರ ಮಳೆ
* 7ಕ್ಕೂ ಹೆಚ್ಚು ಕೆಳ ಹಂತದ ಸೇತುವೆಗಳು ಜಲಾವೃತ
* ಮೈದುಂಬಿ ಹರಿಯುತ್ತಿರುವ ವೇದಗಂಗಾ ಮತ್ತು ದೂಧಗಂಗಾ ಉಪನದಿಗಳು
ಬೆಳಗಾವಿ(ಜು.11): ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಸೇರಿದಂತೆ ಹಲವು ನದಿಗಳ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಜಿಲ್ಲೆಯ 7ಕ್ಕೂ ಹೆಚ್ಚು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಖಾನಾಪುರ ತಾಲೂಕಿನಲ್ಲಿ ಬಿರುಸಿನ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ಹಬ್ಬನಹಟ್ಟಿ ಗ್ರಾಮದ ಆಂಜನೇಯ ದೇವಸ್ಥಾನ ಭಾಗಶಃ ಜಲಾವೃತಗೊಂಡಿದೆ.
ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಗೋಕಾಕ ಬಳಿಯ ಶಿಂಗಳಾಪೂರ ಸೇತುವೆ ಮುಳುಗಡೆಯಾಗಿದೆ. ಗೋಕಾಕ್ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿದೆ. 180 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ರಮಣೀಯ ದೃಶ್ಯವೈಭವ ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ.
ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ, ಟೈಮ್ ಖರಾಬ್ ಇದ್ರೆ ಚಟ್ಟ
ಖಾನಾಪುರ ತಾಲೂಕಿನಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಖಾನಾಪುರ ತಾಲ್ಲೂಕಿನ ಹಬ್ಬನಹಟ್ಟಿಗ್ರಾಮದ ಬಳಿ ನದಿತೀರದ ಆಂಜನೇಯ ದೇವಸ್ಥಾನ ಭಾನುವಾರ ಮಲಪ್ರಭಾ ನದಿಯಲ್ಲಿ ಭಾಗಶಃ ಜಲಾವೃತಗೊಂಡಿದೆ. ಸತತ ವರ್ಷಧಾರೆಯ ಕಾರಣ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವರ್ಗ ಕೊಠಡಿಯೊಂದು ಕುಸಿದಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಯಾವುದೇ ಅವಘಡ ಜರುಗಿಲ್ಲ.
ಜಿಲ್ಲೆಯಲ್ಲಿ ವೇದಗಂಗಾ ಮತ್ತು ದೂಧಗಂಗಾ ಉಪನದಿಗಳು ಮಾತ್ರ ಮೈದುಂಬಿ ಹರಿಯುತ್ತಿದೆ. ಕೃಷ್ಣಾ ನದಿಗೆ 80 ಸಾವಿರ ಕ್ಯು.ಗೂ ಅಧಿಕ ನೀರು ಹರಿದು ಬರುತ್ತಿದೆ. ಸದ್ಯ ಎಲ್ಲೂ ಪ್ರವಾಹ ಪರಿಸ್ಥಿತಿ ಇಲ್ಲದ್ದರಿಂದ ನದಿ ತೀರದ ಜನ ಸದ್ಯ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.