ಗದಗ: ಪ್ರವಾಹದಿಂದ ನಲುಗಿದವರಿಗೆ ಬೇಕಿದೆ ಪರಿಹಾರ

* ಗದಗ ಜಿಲ್ಲೆಯ ಎಲ್ಲ ತಾಲೂಕು ಆಡಳಿತಗಳು ಪ್ರಾಥಮಿಕ ಹಂತವಾಗಿ ಕೇವಲ 5200 ಮಾತ್ರ ಪರಿಹಾರ
* ಪೂರ್ಣ ಮನೆ ಕಳೆದುಕೊಂಡವರ ಪರದಾಟ ಕೇಳುವವರೇ ಇಲ್ಲ
*  ಬಹುತೇಕ ಮಣ್ಣಿನ ಮನೆಗಳೇ ಕುಸಿತ
 

Flood Victims Need Relief in Gadag District grg

ಶಿವಕುಮಾರ ಕುಷ್ಟಗಿ

ಗದಗ(ಆ.04): ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜನರು ಮನೆ ಕಳೆದುಕೊಂಡಿದ್ದು ಅವರಿಗೆಲ್ಲ ತಕ್ಷಣವೇ ಪರಿಹಾರ ನೀಡಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ನೀಡಬೇಕಿದೆ. ಆದರೆ, ಇಂದಿಗೂ ಪ್ರಾಥಮಿಕ ಹಂತದ ಪರಿಹಾರ ಮಾತ್ರ ನೀಡಲಾಗಿದೆ.

ಜಿಲ್ಲೆಯ ಮಲಪ್ರಭಾ, ಬೆಣ್ಣಿಹಳ್ಳ ಹಾಗೂ ತುಂಗಭದ್ರಾ ನದಿಗೆ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಗ್ರಾಮಗಳಲ್ಲಿನ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ. ಆದರೆ, ಇದಕ್ಕಿಂತಲೂ ಹೆಚ್ಚಾಗಿ ಇನ್ನುಳಿದ ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಮಣ್ಣಿನ ಮನೆಗಳಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದ್ದು ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಶೇಷ ಗಮನ ನೀಡಬೇಕಿದೆ.

5200 ಮಾತ್ರ ಪರಿಹಾರ:

ಕುಸಿದ ಮನೆಗಳಿಗೆ ತಾಲೂಕು ಆಡಳಿತದ ಮೂಲಕ ಪ್ರಾಥಮಿಕ ಹಂತದ ಪರಿಹಾರವಾಗಿ .5200ಗಳನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಬಿದ್ದಿರುವ ಮನೆಯನ್ನು ಕೇವಲ ಇಷ್ಟೊಂದು ಕಡಿಮೆ ಹಣದಲ್ಲಿ ಹೇಗೆ ಮರಳಿ ನಿರ್ಮಿಸಲು ಸಾಧ್ಯ ಎನ್ನುವ ಅಭಿಪ್ರಾಯ ಮನೆ ಕಳೆದುಕೊಂಡವರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಮನೆ ಸಮೀಕ್ಷೆಗೆ ಬಂದಿದ್ದ ಅಧಿಕಾರಿಗಳು ಮಾತ್ರ, ಅದು ಪ್ರಾಥಮಿಕ ಹಂತದ ಪರಿಹಾರ. ಬಿದ್ದಿರುವ ಮನೆಯ ಪ್ರಮಾಣದಲ್ಲಿ ಹೆಚ್ಚುವರಿ ಪರಿಹಾರ ಬರಬಹುದು ಎಂದು ಹೇಳುತ್ತಲೇ ಸಮಯ ದೂಡುತ್ತಿದ್ದಾರೆ.

ಪ್ರವಾಹ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

392 ಮನೆಗಳಿಗೆ ಹಾನಿ:

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 392 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಇವುಗಳಲ್ಲಿ ಅತೀ ಹೆಚ್ಚು ಗದಗ ತಾಲೂಕಿನಲ್ಲಿ 90, ಲಕ್ಷ್ಮೇಶ್ವರ 86, ಮುಂಡರಗಿ 28, ನರಗುಂದ 84, ರೋಣ 48, ಶಿರಹಟ್ಟಿ36, ಗಜೇಂದ್ರಗಡ 20 ಮನೆಗಳು ಸತತ ಮಳೆಯಿಂದಾಗಿ ಕುಸಿದಿದ್ದು ಈ ಬಗ್ಗೆ ಮನೆ ಕಳೆದುಕೊಂಡವರು ಸ್ಥಳೀಯ ಗ್ರಾಪಂಗೆ ನೀಡಿದ ಮಾಹಿತಿ ಆಧಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಮನೆಗಳ ಹಾನಿಯ ವಿವಿರ ಪತ್ತೆಯಾಗಿದೆ.

ಬಹುತೇಕ ಮಣ್ಣಿನ ಮನೆಗಳು:

ಮಳೆ ಹಾಗೂ ಪ್ರವಾಹಕ್ಕೆ ಕುಸಿದಿರುವುದು ಮಣ್ಣಿನಿಂದ ನಿರ್ಮಿಸಿದ ಹಳೆಯ ಮನೆಗಳಾಗಿವೆ, ಅವುಗಳು ಹಿರಿಯರ ಕಾಲದಲ್ಲಿಯೇ ಮಣ್ಣಿನಿಂದಲೇ ನಿರ್ಮಿಸಿದ ಮನೆಗಳಾಗಿದ್ದು, ವರ್ಷಗಳು ಉರುಳಿದಂತೆ ಮನೆ ನಿರ್ಮಾಣಕ್ಕೆ ಬಳಸಲಾಗಿರುವ ಕಟ್ಟಿಗೆ ಸತ್ವ ಕಡಿಮೆಯಾಗಿರುವುದು, ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ನೂರಾರು ಮನೆಗಳಿಗೆ ಹಾನಿ ಸಂಭವಿಸಿದೆ, ತಾಲೂಕು ಆಡಳಿತಗಳು ಪ್ರಸಕ್ತ ಸಾಲಿನಲ್ಲಿ ಯಾವುದೇ ಮನೆಗಳು ಸಂಪೂರ್ಣವಾಗಿ ಕುಸಿದಿಲ್ಲ, ಕೇವಲ ಭಾಗಶಃ ಕುಸಿದಿವೆ ಎನ್ನುತ್ತಾರೆ. ಆದರೆ, ಮಣ್ಣಿನ ಮನೆಗಳು ಭಾಗಶಃ ಕುಸಿತ ಎಂದರೆ ಆ ಮನೆಗಳನ್ನು ಬಿಚ್ಚಿ ಮರಳಿ ನಿರ್ಮಿಸದೇ ಬೇರೆ ದಾರಿಯೇ ಇಲ್ಲ ಅಷ್ಟುಪ್ರಮಾಣದಲ್ಲಿ ಹಾನಿಯಾಗಿವೆ.

ಗದಗ: ಇಳಿದ ಪ್ರವಾಹ, ನಿರಾಳರಾದ ಜನತೆ

ಕೂಡಲೇ ಪರಿಹಾರ ನೀಡಲಿ:

ಸಧ್ಯ ಜಿಲ್ಲಾಡಳಿತ ಕೇಂದ್ರ ಸರ್ಕಾರದ ಪ್ರವಾಹ ನಿರ್ವಹಣಾ ಕಾಯ್ದೆಯ ನಿಯಮದಡಿಯಲ್ಲಿ ಬಿದ್ದಿರುವ ಮನೆಗಳಿಗೆ ಪರಿಹಾರ ನೀಡುತ್ತಿದೆ. ಆದರೆ, ಈ ಪರಿಹಾರದ ಹಣದಲ್ಲಿ ಮನೆ ಕಳೆದುಕೊಂಡವರು ಏನನ್ನು ಖರೀದಿಸಲು ಆಗುವುದಿಲ್ಲ, ಇನ್ನು ನದಿ ಪಾತ್ರದ ಗ್ರಾಮಗಳಲ್ಲಿ ಬಿದ್ದಿರುವ ಮನೆಗಳಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡುತ್ತಾರೆ. ಆದರೆ, ನದಿಗಳಿಂದ ದೂರವಿದ್ದರೂ ಅತಿಯಾದ ಮಳೆಯಿಂದಾಗಿ ಕುಸಿದಿರುವ ಮನೆಗಳಿಗೆ ಅಲ್ಪ ಪ್ರಮಾಣದ ಪರಿಹಾರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಿ ಮನೆ ಕಳೆದುಕೊಂಡ ಎಲ್ಲರಿಗೂ ಸೂಕ್ತ, ನ್ಯಾಯಯುತ ಪರಿಹಾರ ನೀಡಬೇಕು ಎನ್ನುವುದು ಮನೆ ಕಳೆದುಕೊಂಡವರ ಅಳಲಾಗಿದೆ.

ಈಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 3 ಜನ, 3 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಜಾನುವಾರ ಅವಲಂಬಿತರಿಗೆ 80 ಸಾವಿರ ಹಾಗೂ ಜಿಲ್ಲೆಯಲ್ಲಿ ಭಾಗಶಃ ಹಾನಿಯಾಗಿರುವ 392 ಮನೆಯಿಂದಾಗಿ 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. 80 ಮನೆಗಳಿಗೆ ಈಗಾಗಲೇ 2.56 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಗದಗ ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ ಎಂ.ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios