Asianet Suvarna News Asianet Suvarna News

ಗದಗ: ಇಳಿದ ಪ್ರವಾಹ, ನಿರಾಳರಾದ ಜನತೆ

* ಮಲಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಇಳಿಮುಖ
* ಮಲಪ್ರಭಾ ಜಲಾಶಯ ಈಗಾಗಲೇ ಸಂಪೂರ್ಣವಾಗಿ ಭರ್ತಿ
*  ಸದ್ಯ ರೈತರು ಹೊಲಕ್ಕೆ ತೆರಳದಂತ ಸ್ಥಿತಿ ನಿರ್ಮಾಣ 

Reduced Flood in Gadag District grg
Author
Bengaluru, First Published Jul 29, 2021, 10:36 AM IST

ಗದಗ(ಜು.29):  ಮಲಪ್ರಭಾ ಅಣೆಕಟ್ಟೆಯಿಂದ ಹೊರ ಹರಿವಿನ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನ ಪ್ರವಾಹ ಪರಿಸ್ಥಿತಿ ತೀವ್ರ ಸುಧಾರಿಸಿದ್ದು, ನಾಲ್ಕು ದಿನಗಳ ಬಳಿಕ ಸೊಲ್ಲಾಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಮಲಪ್ರಭಾ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಕೊಣ್ಣೂರು ಬಳಿ ಹೆದ್ದಾರಿಯ ಮೇಲೆ ನೀರು ಹರಿಯುತ್ತಿತ್ತು. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ಹುಬ್ಬಳ್ಳಿಯಿಂದ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಭಾಗಕ್ಕೆ ಹೋಗುವ ಸರಕು ಸಾಗಣೆ ವಾಹನಗಳಿಗೆ ತೊಂದರೆ ಆಗಿತ್ತು. ಕೆಲ ವಾಹನ ಸುತ್ತಿ ಬಳಸಿ ಸಂಚರಿಸುತ್ತಿದ್ದರೆ ಮತ್ತಿತರ ವಾಹನ ರಸ್ತೆ ಬದಿಯಲ್ಲೇ ನಿಂತಿದ್ದವು.

ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆ ಉಂಟು ಮಾಡುತ್ತಿದ್ದ ಮಲಪ್ರಭಾ ನದಿಗೆ ಮಂಗಳವಾರ ರಾತ್ರಿಯಿಂದಲೇ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬುಧವಾರ ಮತ್ತಷ್ಟು ಕುಸಿತವಾಗಿದ್ದು ರೈತರು ಬಿತ್ತನೆ ಮಾಡಿದ್ದ ಹೊಲಗಳಿಗೆ ನುಗ್ಗಿದ್ದ ನೀರಿನಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದು, ಸಧ್ಯ ಹೊಲದಲ್ಲಿ ಕೆಸರು ಮಾತ್ರ ಉಳಿದಿದ್ದು, ಆದರೂ ರೈತರು ಹೊಲಕ್ಕೆ ತೆರಳದಂತಾ ಸ್ಥಿತಿ ನಿರ್ಮಾಣವಾಗಿದೆ.

ಗದಗ: ಅಂತೂ ತಗ್ಗಿದ ಪ್ರವಾಹ, ಶಾಂತಳಾದ ಮಲಪ್ರಭೆ

ಮಲೆನಾಡು ಭಾಗದಲ್ಲಿ ನಿರಂತವಾಗಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಇನ್ನೊಂದು ಗಡಿಭಾಗದಲ್ಲಿ ಹರಿಯುವ ತುಂಗಭದ್ರೆ ತುಂಬಿ ಹರಿಯುತ್ತಿದ್ದು, ಮುಂಡರಗಿ ತಾಲೂಕಿನ ವಿಠಲಾಪುರ, ಗುಮ್ಮಗೋಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಅಲ್ಪ ಪ್ರಮಾಣದ ನೀರು ನುಗ್ಗಿ ಆತಂಕವನ್ನು ಸೃಷ್ಟಿಸಿತ್ತು. ಆದರೆ, ಬುಧವಾರ ಅಲ್ಲಿಯೂ ನದಿ ನೀರು ಸಂಪೂರ್ಣವಾಗಿ ಕುಸಿತವಾಗಿದ್ದು ಗ್ರಾಮಸ್ಥರು ನಿರಾಳ ಹೊಂದುವಂತಾಗಿದೆ.

ಮರಳುತ್ತಿರುವ ಲಖಮಾಪುರ ಗ್ರಾಮಸ್ಥರು:

ಮಲಪ್ರಭಾ ನದಿ ಪ್ರವಾಹದಿಂದ ಸತತ 5 ದಿನಗಳ ಕಾಲ ನಡುಗಡ್ಡೆಯಾಗಿದ್ದ ಲಖಮಾಪುರ ಗ್ರಾಮ ಬುಧವಾರ ನದಿ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳ್ಳೇರಿ ಗ್ರಾಮದ ಡಿಪ್ಲೋಮಾ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದ್ದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಲಖಮಾಪುರ ಗ್ರಾಮದ ಹಲವಾರು ಜನರು ಬುಧವಾರ ತಮ್ಮ ಸಾಮಗ್ರಿಗಳೊಂದಿಗೆ ಮರಳಿ ಗ್ರಾಮದತ್ತ ಹೆಜ್ಜೆ ಹಾಕಿದರು. ತಾಲೂಕು ಆಡಳಿತ ಅಧಿಕಾರಿಗಳು ಇನ್ನು 4-5 ದಿನ ಕಾಯಿರಿ ಎಂದರೂ ಅದಕ್ಕೆ ಒಪ್ಪದ ಹಲವಾರು ಜನರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೂ ಅದನ್ನು ದಾಟಿಕೊಂಡು ಗ್ರಾಮಕ್ಕೆ ತೆರಳಿದ್ದು ತಾಲೂಕು ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭರ್ತಿಯಾದ ಡ್ಯಾಂ:

ಮಲಪ್ರಭಾ ಜಲಾಶಯ ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿದ್ದು, ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಕ್ಷಣದಲ್ಲಿ ಮಳೆಯಾದಲ್ಲಿಯೂ ಅಷ್ಟೇ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ 30 ಗ್ರಾಮಗಳು ಪ್ರವಾಹವನ್ನು ಎದುರಿಸದೇ ಬೇರೆ ದಾರಿಯೇ ಇಲ್ಲ, ಅದಕ್ಕಾಗಿ ಜಿಲ್ಲಾಡಳಿತ ಮಳೆ ಕಡಿಮೆಯಾಗಿರುವ ಇದೇ ಸಂದರ್ಭದಲ್ಲಿ ಎಲ್ಲ ರೀತಿಯ ಸಿಬ್ಬಂದಿ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಇನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನಾಗಿ ಪರಿವರ್ತಿಸುವ ಕಟ್ಟಡಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನ ನೀಡಬೇಕಿದೆ.
 

Follow Us:
Download App:
  • android
  • ios