ವರುಣಾರ್ಭಟ: ಕಾಳಿ ನದಿಯಲ್ಲಿ ಪ್ರವಾಹ ಭೀತಿ
* ಪ್ರವಾಹ ಭೀತಿಯಿಂದ 45 ಕುಟುಂಬ ಸ್ಥಳಾಂತರ
* ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, 12 ಮನೆಗಳಿಗೆ ಹಾನಿ
* ಹಲವೆಡೆ ಸಂಪರ್ಕ ಖಂಡಿತ
ಕಾರವಾರ(ಜು.23): ವ್ಯಾಪಕ ಮಳೆಯಿಂದ ಕದ್ರಾ, ಕೊಡಸಳ್ಳಿ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮವಾಗಿ ಕದ್ರಾ ಬಳಿ ಮನೆಗಳಿಗೆ ನೀರು ನುಗ್ಗಿದೆ. ಸುರಕ್ಷತಾ ದೃಷ್ಟಿಯಿಂದ 45 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಕದ್ರಾದ ಲೇಬರ್ ಕಾಲನಿ, ಮಹಮ್ಮಾಯಿ ದೇವಾಲಯ ಬಳಿ, ಹಿಂದುವಾಡ ಮತ್ತಿತರ ಕಡೆಗಳಲ್ಲಿ ಗುರುವಾರ ಸಂಜೆ ಜಲಾವೃತವಾಯಿತು. ಕದ್ರಾ ಲೇಬರ್ ಕಾಲನಿಯ 45 ಮನೆಗಳಲ್ಲಿರುವ ಜನರನ್ನು ಕೆಪಿಸಿ ಸ್ಕೂಲ್‌ನ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ತಹಸೀಲ್ದಾರ್ ನೊರೋನ್ನಾ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ.
ಕಾರವಾರ: ಶಿರ್ಲೆ ಜಲಪಾತಕ್ಕೆ ಆಗಮಿಸಿದ 6 ಜನರು ನಾಪತ್ತೆ
ಅಂಕೋಲಾ ಹುಬ್ಬಳ್ಳಿ ಹೆದ್ದಾರಿಯ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ವೇಳೆಗೆ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗಂಗಾವಳಿ ನದಿಗೆ ಪ್ರವಾಹ ಉಂಟಾಗಿದ್ದರಿಂದ ಹೆಗ್ಗಾರ, ಶೇವ್ಕಾರ, ಕೈಗಡಿ ಮತ್ತಿತರ ಕಡೆಗಳಲ್ಲಿ ಅಡಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಹೈಲ್ಯಾಂಡ್ ಹೋಟೆಲ್ ಬಳಿ ಹೆದ್ದಾರಿಯ ಮೇಲೆ ನೀರು ಪ್ರವಹಿಸುತ್ತಿದ್ದು, ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಮುಂಡಗೋಡದಲ್ಲಿ 5 ಮನೆಗಳಿಗೆ ಹಾನಿ ಉಂಟಾಗಿದೆ. ಎರಡು ಮನೆಗಳು ಭಾಗಶಃ ಕುಸಿದಿವೆ. ಮುಂಡಗೋಡ ಪಟ್ಟಣದಲ್ಲಿ ಎರಡು ಮನೆಗಳು, ಓಣಿಕೇರಿ ಗ್ರಾಮದಲ್ಲಿ ಎರಡು ಮನೆಗಳು ಹಾಗೂ ಕಾತೂರು ಗ್ರಾಮದ ಒಂದು ಮನೆ ಹಾನಿಗೊಳಗಾಗಿದೆ. ಹಳಿಯಾಳ ತಾಲೂಕಿನಲ್ಲಿ ಎರಡು ಮನೆಗಳು ಹಾನಿಗೊಳಗಾಗಿದೆ.