Asianet Suvarna News Asianet Suvarna News

Bengaluru Rains: 3 ತಾಸಿನ ಮಳೆಗೆ ತತ್ತರಿಸಿದ ಉದ್ಯಾನ ನಗರಿ : BBMPಗೆ ಜನರ ಹಿಡಿಶಾಪ!

*ಯಲಹಂಕ, ವಿದ್ಯಾರಣ್ಯಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ
*ನೂರಾರು ಮನೆ, ಅಪಾರ್ಟ್‌ಮೆಂಟ್‌ ಜಲಾವೃತ : ಬಿಬಿಎಂಪಿಗೆ ಜನರ ಹಿಡಿಶಾಪ 
*600+ ಕಾರು, 500+ ಬೈಕ್‌ ಮುಳುಗಡೆ : ಮಳೆಗೆ ತತ್ತರಿಸಿದ ರಾಜಧಾನಿ
*ಕರ್ನಾಟಕ ಸೇರಿ 4 ರಾಜ್ಯಕ್ಕೆ ಮತ್ತೆ ಮಹಾಮಳೆಯ ಭೀತಿ : 10 ವರ್ಷದ ದಾಖಲೆ

Floating cars flooded roads after heavy rain batters parts of Bengaluru BBMP in action mnj
Author
Bengaluru, First Published Nov 23, 2021, 9:30 AM IST
  • Facebook
  • Twitter
  • Whatsapp

ಬೆಂಗಳೂರು(ನ.23): ಭಾನುವಾರ ಸಂಜೆಯ ನಂತರ ನಗರದ ಉತ್ತರ (Bengaluru Noth) ವಲಯದ ಕೆಲವು ಪ್ರದೇಶಗಳಲ್ಲಿ ಮೂರು ತಾಸು ಸುರಿದ ಅಬ್ಬರದ ಮಳೆ ಹಾಗೂ ನಾಲ್ಕು ಕೆರೆಗಳು ತುಂಬಿ ಹರಿದ ಪರಿಣಾಮ ನೂರಾರು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ. ಮನೆಗೆ ನುಗ್ಗಿ ಬಂದ ನೀರನ್ನು ಹೊರಹಾಕಲು ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ವೊಂದರ ತಳಮಹಡಿಯಲ್ಲಿ (Apartment Basement) ನಾಲ್ಕೈದು ಅಡಿ ನೀರು ನಿಂತ ಪರಿಣಾಮ ನೂರಾರು ವಾಹನಗಳು (vehicles) ನೀರಿನಲ್ಲಿ ಮುಳುಗಿದ್ದು, ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಬೋಟ್‌ ಮೂಲಕ ಬೇರೆಡೆ ಸ್ಥಳಾಂತರಿಸಲಾಗಿದೆ.

ಭಾರೀ ಮಳೆಯಿಂದಾಗಿ ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ ಮತ್ತು ಸಿಂಗಾಪುರ ಕೆರೆಗಳು ಕೋಡಿ ಬಿದ್ದು ಕೆರೆಯ ಸುತ್ತಮುತ್ತಲ ತಗ್ಗು ಪ್ರದೇಶಗಳಿಗೆ ಏಕಾಏಕಿ ನೀರು ನುಗ್ಗಿತು. ರಸ್ತೆ, ಮನೆ, ಅಂಗಡಿ ಮುಂತಾದ ಕಡೆ ನೀರು ನುಗ್ಗಿ ಮನೆಯಲ್ಲಿನ ವಸ್ತುಗಳು, ಪೀಠೋಪಕರಣ, ಹಾಸಿಗೆ ಮತ್ತಿತರ ವಸ್ತುಗಳು ಹಾಳಾದವು. ಹಲವು ದಿನಗಳಿಂದ ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದಲ್ಲಿ ಸದ್ಯ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದರೂ, ಬಂಗಾಳ ಕೊಲ್ಲಿಯಲ್ಲಿ (Bay of Bengal) ಮುಂದಿನ ನಾಲ್ಕೈದು ದಿನಗಳಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತದ ಪರಿಣಾಮ ಪುನಃ ರಾಜ್ಯಾದ್ಯಂತ ಮಳೆ ಆರ್ಭಟಿಸುವ (Karnataka Rains) ಸಂಭವವಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಯಲ್ಲೂ ಭಾರೀ ಮಳೆ ಆಗುವ ಸಾಧ್ಯತೆ ಇದೆ

ನೀರಿನೊಂದಿಗೆ ತೇಲಿಬಂದ ಮೀನು, ಹಾವುಗಳು !

ಯಲಹಂಕ ಕೋಗಿಲು ವೃತ್ತದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌, ಕೋಗಿಲು ವೃತ್ತದ ಸಪ್ತಗಿರಿ ಬಡಾವಣೆ, ಸಿಂಗಾಪುರ, ವಿದ್ಯಾರಣ್ಯಪುರ ಮತ್ತು ಟಿ.ದಾಸರಹಳ್ಳಿಯ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ 600ಕ್ಕೂ ಹೆಚ್ಚು ಕಾರುಗಳು, 500 ದ್ವಿ ಚಕ್ರ ವಾಹನ ನೀರಿನಲ್ಲಿ ಮುಳುಗಿದವು. ಅಲ್ಲಾಳಸಂದ್ರ ಕೆರೆಯ ಸುತ್ತಮುತ್ತಲ ಭಾಗಗಳ ಮನೆಗಳಿಗೆ ನೀರಿನೊಂದಿಗೆ ಮೀನುಗಳು ಮತ್ತು ಹಾವುಗಳು (Fish and Snakes) ತೇಲಿಬಂದವು. ಸಿಂಗಾಪುರ ಕೆರೆ ನೀರು ವಿದ್ಯಾರಣ್ಯಪುರದ ಜನ ವಸತಿ ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಕೆಲವು ಮನೆಗಳ ವಿದ್ಯುತ್‌ ಉಪಕರಣಗಳು ಸುಟ್ಟುಹೋಗಿವೆ.

ಬಿಬಿಎಂಪಿ, ಎಸ್‌ಡಿಆರ್‌ಎಫ್‌ ಕಾರ್ಯಾಚರಣೆ:

ಮಳೆ ಅನಾಹುತದ ಮಾಹಿತಿ ತಿಳಿದು ಬರುತ್ತಿದ್ದಂತೆ ಬಿಬಿಎಂಪಿ (BBMP) ಹಾಗೂ ಎಸ್‌ಡಿಆರ್‌ಎಫ್‌ (SDRF) ಸಿಬ್ಬಂದಿ ರಾತ್ರಿಯಿಂದಲೇ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದರು. ನೀರು ತೆರವುಗೊಳಿಸುವುದು ಸೇರಿದಂತೆ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳನ್ನು ಬೋಟ್‌ಗಳ ಮೂಲಕ ಸುರಕ್ಷಿತವಾಗಿ ಕರೆ ತಂದರು. ಅಪಾರ್ಟ್‌ಮೆಂಟ್‌ನಲ್ಲಿದ್ದ ವಯೋವೃದ್ಧರು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿಯನ್ನು ಕರೆತರಲಾಯಿತು. ಜೊತೆಗೆ ನಿವಾಸಿಗಳಿಗೆ ಹಣ್ಣು, ಬ್ರೆಡ್‌ ಇತ್ಯಾದಿ ಆಹಾರ ಪದಾರ್ಥಗಳನ್ನು ಪೂರೈಸಲಾಯಿತು.

10 ವರ್ಷದ ದಾಖಲೆ ಮಳೆಯೂ ಹೌದು!

ಕಳೆದ 116 ವರ್ಷಗಳ ನಂತರ ಅತ್ಯಧಿಕ ಮಳೆ ಈ ನವೆಂಬರ್‌ನಲ್ಲಿ ದಾಖಲಾಗಿದ್ದರೆ, ಇದರ ನಂತರದ ಸ್ಥಾನ ಎಂಟು ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್‌ 24ರಂದು ಆಗಿತ್ತು. ಅಂದು ಸಹ ಕೇವಲ 24 ಗಂಟೆಯಲ್ಲಿ ನಗರದಲ್ಲಿ 108.4 ಮಿ.ಮೀ. ಮಳೆ ಸುರಿದಿತ್ತು. ನವೆಂಬರ್‌ನ ವಾಡಿಕೆ 55 ಮಿ.ಮೀ. ಆಗುತ್ತದೆ. ಆದರೆ ಅದಕ್ಕಿಂತಲೂ ತಿಂಗಳ ವಾಡಿಕೆ ಮಳೆಗಿಂತ ಅಧಿಕ ಮಳೆ 24 ತಾಸಿನಲ್ಲೇ ಸುರಿದಿತ್ತು. ಐಎಂಡಿ ಮಾಪನ ಕೇಂದ್ರ ಹಾಗೂ ಇತ್ತೀಚೆಗೆ ಆರಂಭವಾದ ಕೆಎಸ್‌ಎನ್‌ಡಿಎಂಸಿ ಮಾಪನ ಕೇಂದ್ರಗಳ ಮಾಹಿತಿ ಆಧರಿಸಿ ಶತಮಾನದಲ್ಲಿ ಹಾಗೂ ಕಳೆದ 10 ವರ್ಷದಲ್ಲೇ ಅತ್ಯಧಿಕ ಮಳೆ ಇದೇ ನವೆಂಬರ್‌ನಲ್ಲಿ ಸುರಿದಿದೆ ಎಂದು ಪರಿಗಣಿಸಬಹುದು ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದರು.

ಉಗ್ರ ಮಳೆಗೆ ಮಲೆನಾಡು ತತ್ತರ : ರೈತ ಸಮುದಾಯ ಕಂಗಾಲು

ಈ ವರ್ಷ ಹಿಂಗಾರು ಆರಂಭವಾದ ನಂತರ ಮೊದಲ ಅತ್ಯಧಿಕ ಮಳೆ (153 ಮಿ.ಮೀ.) ಇದಾಗಿದೆ. ಕೇವಲ ನವೆಂಬರ್‌ನ 22 ದಿನದಲ್ಲಿ ವಾಡಿಕೆಗಿಂತ ಅಧಿಕ 216 ಮಿ.ಮೀ. ಮಳೆ ಆಗಿದೆ. ಮಾಸಾಂತ್ಯಕ್ಕೆ ಇನ್ನಷ್ಟುಉತ್ತಮ ಮಳೆ ಸಂಭವವಿದೆ ಎಂದು ಹವಾಮಾನ ತಜ್ಞರಾದ ಶ್ರೀನಿವಾಸ್‌ ರೆಡ್ಡಿ ಹೇಳಿದ್ದಾರೆ. 

Follow Us:
Download App:
  • android
  • ios