Asianet Suvarna News Asianet Suvarna News

ಮೀನುಗಾರರಿಗೆ ಗುಡ್‌ನ್ಯೂಸ್ ನೀಡಿದ ಅಶ್ವತ್ಥನಾರಾಯಣ

* ಮೀನುಗಾರಿಕೆ ರೋಬೋಟಿಕ್ಸ್ ತಂತ್ರಜ್ಞಾನ,
* ಮಂಗಳೂರಿನಲ್ಲಿ ಸಾಫ್ಟ್ ವೇರ್ ಪಾರ್ಕ್ 
* ಮಂಗಳೂರು ಟೆಕ್ನೋವಾಂಜಾ’ದಲ್ಲಿ ಸಚಿವ ಅಶ್ವತ್ಥನಾರಾಯಣ ಘೋಷಣೆ 

Fishing Robotics Technology In mangaluru Says Ashwath narayan rbj
Author
Bengaluru, First Published Oct 29, 2021, 4:42 PM IST

ಮಂಗಳೂರು, (ಅ.29): ರಾಜ್ಯದ ಕರಾವಳಿಯಲ್ಲಿ  (karavali) ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಮೂಲಕ ಮೀನುಗಾರಿಕೆಯನ್ನು (Fishing) ದೊಡ್ಡ ಆದಾಯದ ಮೂಲವನ್ನಾಗಿ ಬೆಳೆಸಲಾಗುವುದು ಮತ್ತು ಮಂಗಳೂರಿನಲ್ಲಿ ಸಾಫ್ಟ್ ವೇರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath narayan) ಹೇಳಿದ್ದಾರೆ. 

`ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಇಂದು (ಶುಕ್ರವಾರ) ಹಮ್ಮಿಕೊಂಡಿದ್ದ ಒಂದು ದಿನದ `ಮಂಗಳೂರು ಟೆಕ್ನೋವಾಂಜಾ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಅಪಾರವಾದ ಮತ್ಸ್ಯ ಸಂಪತ್ತಿದೆ. ಸರಕಾರವು ಜೈವಿಕ ಸಂಪನ್ಮೂಲಗಳನ್ನು ಆಧರಿಸಿದ ಆರ್ಥಿಕ ಮೂಲಗಳಲ್ಲಿ (ಬಯೊನಾಮಿಕ್ಸ್) ಗುರುತಿಸಿರುವ ಆದಾಯದ ಐದು ಶಕ್ತಿಗಳಲ್ಲಿ ಮೀನುಗಾರಿಕೆಯೂ ಒಂದಾಗಿದೆ. ಇದನ್ನು ಆದಾಯದ ದೊಡ್ಡ ವಲಯವಾಗಿ ಬೆಳೆಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

ಇದಲ್ಲದೆ, ಕಿಯೋನಿಕ್ಸ್ ವತಿಯಿಂದ ಮಂಗಳೂರಿನಲ್ಲಿ ಸಾಫ್ಟ್ ವೇರ್ ಪಾರ್ಕನ್ನು ಸ್ಥಾಪಿಸಲಾಗುವುದು. ಇದಕ್ಕೆ ಬೇಕಾದ ತಾಂತ್ರಿಕ  ಅನುಮತಿ ಈಗಾಗಲೇ ಸಿಕ್ಕಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಡಿಯಲ್ಲಿ `ಎಲಿವೇಟ್’ ಕಾರ್ಯಕ್ರಮದ ಅನ್ವಯ ಮಂಗಳೂರು ಕ್ಲಸ್ಟರ್ ಗೆ ವಿಶೇಷ ನಿಧಿಯನ್ನು ಕೊಡಲಾಗುವುದು. ಜತೆಗೆ, ಮಂಗಳೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ಸೇವೆಗಳನ್ನು (ಫಿನ್-ಟೆಕ್) ಒದಗಿಸುವ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಘೋಷಿಸಿದರು.

ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳು ಅಡೆತಡೆ ಇಲ್ಲದೆ ನಡೆಯಬೇಕು. ಇದನ್ನು ಪರಿಗಣಿಸಿ, ಸದ್ಯದಲ್ಲೇ ಟೆಲಿಕಾಂ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಏಕಗವಾಕ್ಷಿ ವ್ಯವಸ್ಥೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುವುದು. ಅಲ್ಲದೆ ದೂರದ ಪ್ರದೇಶಗಳಲ್ಲಿ ಉಪಗ್ರಹ ಆಧಾರಿತ ಸೇವೆಗಳನ್ನು ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ಅವರು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಯೋಜನೆಯ ನೂತನ ಕಚೇರಿಯನ್ನು ಮತ್ತು `ಫ್ಯೂಚರ್ ಡಿಜಿಟಲ್ ಜಾಬ್ಸ್@ಮಂಗಳೂರು’ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಕೆಡಿಇಎಂ ಮುಖ್ಯಸ್ಥ ಬಿ.ಬಿ.ನಾಯ್ಡು, ರಾಜ್ಯ ಐಟಿ-ಬಿಟಿ ವಿಷನ್ ಗ್ರೂಪಿನ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ ಪ್ರಕಾಶ್, ಐಟಿಬಿಟಿ‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಲಹರಿ ಉಪಕ್ರಮದ ಮುಖ್ಯಸ್ಥ ಸಂಜೀವ್ ಗುಪ್ತ, ಬೀರೇನ್ ಘೋಷ್ ಮುಂತಾದವರು ಉಪಸ್ಥಿತರಿದ್ದರು. 

ಒಡಂಬಡಿಕೆಗಳ ವಿನಿಮಯ
ಕಾರ್ಯಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಇಲ್ಲಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು, ಸಿಇಒಎಲ್, ಐಎಫ್ಎಸ್ಸಿಎ, ಎಂಆರ್ಜಿ ಸಮೂಹ ಮತ್ತು ಬಿಗ್ವಿಸ್ಟಾ ಕಂಪನಿಗಳೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಈ ಕಂಪನಿಗಳು ಫಿನ್ ಟೆಕ್, ಮಂಗಳೂರು ವಿಷನ್-2025, ಎನ್ಇಪಿ ಜಾರಿ, ಐಟಿ ಪಾರ್ಕ್ ಸ್ಥಾಪನೆ ಮುಂತಾದ ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿವೆ. 

ಟಿ.ವಿ.ಮೋಹನದಾಸ್ ಪೈ ಮಾತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಮೆಡಿಕಲ್ ಕಾಲೇಜುಗಳಿವೆ. ದೇಶದ ಬೇರೆಲ್ಲೂ ಇಂತಹ ಅನುಕೂಲವಿಲ್ಲ. ಮಂಗಳೂರು ಬಿ.ಟಿ. ವಲಯದಲ್ಲಿ ಅಗಾಧವಾಗಿ ಬೆಳೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ನಾವು ಮಾರುಕಟ್ಟೆ ಶೋಧನೆಗೆ ಮೊದಲು ಹೆಜ್ಜೆ ಇಡಬೇಕು ಎಂದು ಹೇಳಿದರು.
-
ಕ್ರಿಸ್ ಗೋಪಾಲಕೃಷ್ಣ ಪ್ರತಿಕ್ರಯೆ
ಮಂಗಳೂರನ್ನು ಆರ್ಥಿಕ ಸೇವೆಗಳ ಹಬ್ ಆಗಿ ಬೆಳೆಸಲು ಇಲ್ಲಿನ ಬ್ಯಾಂಕಿಂಗ್ ವಾತಾವರಣ ಹೇಳಿಮಾಡಿಸಿದಂತಿದೆ. ಎಲ್ಲಿಂದಾದರೂ ಕೆಲಸ ಮಾಡಬಹುದು ಎನ್ನುವ ಈಗಿನ ಪರಿಸ್ಥಿತಿಯನ್ನು ನಮ್ಮ ಬೆಳವಣಿಗೆಗೆ ಸಮರ್ಥವಾಗಿ ಬೆಳೆಸಿಕೊಳ್ಳಬೇಕು ಎಂದರು.

Follow Us:
Download App:
  • android
  • ios