Asianet Suvarna News Asianet Suvarna News

Uttara Kannada: ಹೋವರ್‌ಕ್ರಾಫ್ಟ್ ನಿಲುಗಡೆಗೆ ಮುಂದುವರಿದ ವಿರೋಧ

ಕಾರವಾರದಲ್ಲಿ ಹೋವರ್ ಕ್ರಾಫ್ಟ್ ನಿಲುಗಡೆಗೆ ಕಾಯಂ ಸ್ಥಳಕ್ಕಾಗಿ ಕೋಸ್ಟ್‌ಗಾರ್ಡ್ ಇಲಾಖೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಸ್ಥಳೀಯರು, ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆ ಹಲವು ವರ್ಷಗಳಿಂದ ಹಾಗೆ ಉಳಿದಿದೆ

Fishermen Continued opposition to hovercraft ban in karwar at uttara kannada rav
Author
First Published Nov 2, 2022, 10:46 PM IST

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

ಉತ್ತರ ಕನ್ನಡ (ನ.2) : ಕಾರವಾರದಲ್ಲಿ ಹೋವರ್ ಕ್ರಾಫ್ಟ್ ನಿಲುಗಡೆಗೆ ಕಾಯಂ ಸ್ಥಳಕ್ಕಾಗಿ ಕೋಸ್ಟ್‌ಗಾರ್ಡ್ ಇಲಾಖೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಸ್ಥಳೀಯರು, ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆ ಹಲವು ವರ್ಷಗಳಿಂದ ಬಾಕಿಯಾಗಿತ್ತು. ಈ ಬಾರಿಯೂ ಅಧಿಕಾರಿಗಳು ಮೀನುಗಾರ ಮುಖಂಡರ ಸಹಮತಿಗೆ ಪ್ರಯತ್ನ ಮುಂದುವರಿಸಿದ್ದು, ಮೀನುಗಾರರು ಮಾತ್ರ ಯಾವುದೇ ಕಾರಣಕ್ಕೂ ಕಾರವಾರದ ಬೀಚ್ ಬಿಟ್ಟು ಕೊಡಲ್ಲ ಎಂದು ಖಡಕ್ ನಿರ್ಧಾರ ಮಾಡಿದ್ದಾರೆ. 

ಕರಾವಳಿ ತೀರ ರಕ್ಷಣೆಗೆ ಕೋಸ್ಟ್‌ಗಾರ್ಡ್ಸ್ ನೂತನ ತಂತ್ರಜ್ಞಾನ

ಹೌದು, ಕಾರವಾರದ ಬೀಚ್ ಬಳಿ ಹೋವರ್ ಕ್ರಾಫ್ಟ್( hovercraft) ನಿಲ್ದಾಣದ ಯೋಜನೆಯನ್ನು ಕೋಸ್ಟ್‌ಗಾರ್ಡ್ ಇಲಾಖೆ(Coast Guard Department) ಸುಮಾರು 4-5 ವರ್ಷಗಳ ಹಿಂದೆ ಉತ್ತರಕನ್ನಡ(Uttara Kannada) ಜಿಲ್ಲಾಡಳಿತದ ಮುಂದಿರಿಸಿತ್ತು. ಖಾಸಗಿಯವರಿಗೆ ರೆಸಾರ್ಟ್‌ ನಿರ್ಮಾಣವೊಂದಕ್ಕೆ ಸರಕಾರ ನೀಡಿದ್ದ ಜಾಗವನ್ನು ಹಿಂಪಡೆದು ಕೋಸ್ಟ್‌ಗಾರ್ಡ್‌ಗೆ ನೀಡಲಾಗಿತ್ತು. ಆದರೆ, ಸ್ಥಳೀಯರು ಹಾಗೂ ಮೀನುಗಾರರ ವಿರೋಧದ ಕಾರಣ ಕೋಸ್ಟ್‌ಗಾರ್ಡ್ ಅವರ ಯೋಜನೆಗೆ ಅಡ್ಡಿಯಾಗಿತ್ತು. 

ಇದೀಗ ಮತ್ತೆ ಕೋಸ್ಟ್ ಗಾರ್ಡ್ ಇಲಾಖೆಯ ಅಧಿಕಾರಿಗಳು ಮೀನುಗಾರ ಮುಖಂಡರ ಮನವೊಲಿಸಲು ಪ್ರಯತ್ನಿಸಿದ್ದು, ಮೀನುಗಾರ ಮುಖಂಡರು ಮಾತ್ರ ಯಾವುದೇ ಕಾರಣಕ್ಕೂ ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತೀಯ ರಕ್ಷಕ ಪಡೆಯ ಪಶ್ಚಿಮ ವಲಯದ ಕಮಾಂಡರ್ ಮನೋಜ್ ಬಾಡ್ಕರ್(Manoj Badkar), ಕಾರವಾರ ಬೀಚ್‌ ಬಳಿ ಕೋಸ್ಟ್ ಗಾರ್ಡ್ಸ್ ಹೋವರ್ ಕ್ರಾಫ್ಟ್ ನಿಲ್ಲಿಸಲು ಖಾಯಂ ಜಾಗಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಸ್ಥಳೀಯ ಮೀನುಗಾರರು ನಮ್ಮ ಮೀನುಗಾರಿಕೆಗೆ ತೊಂದರೆ ಆಗುತ್ತದೆ ಎಂದು ವಿರೋಧ ಮಾಡುತ್ತಿದ್ದಾರೆ. ನೈಜವಾಗಿಯೂ ಇದರಿಂದ ಜೀವ ರಕ್ಷಣೆಯಾಗುತ್ತದೆ ಹೊರತು ಮೀನುಗಾರಿಕೆಗೆ ಹಾಗೂ ಬೀಚ್‌ಗಳಿಗೆ ಯಾವುದೇ ತೊಂದರೆಗಳಾಗಲ್ಲ. ಈ ವಿಷಯವಾಗಿ ಮೀನುಗಾರರ ಮನವೊಲಿಸಲು ಸಭೆ ಕರೆದು ಚರ್ಚೆ ಮಾಡಲಾಗಿದೆ ಎಂದು ಕಮಾಂಡರ್ ಹೇಳಿದ್ದಾರೆ. 

ಕೋಸ್ಟ್‌ಗಾರ್ಡ್ ಕಮಾಂಡರ್ ಮೀನುಗಾರರ(Fishermen) ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರೂ ಮೀನುಗಾರ ಮುಖಂಡರು ಮಾತ್ರ ಸಂಧಾನಕ್ಕೆ ಬಗ್ಗಿಲ್ಲ. ಈ ಹಿಂದೆ ಬೀಚ್ ಬಳಿ ಜಾಗವನ್ನು ಜಿಲ್ಲಾಡಳಿತದ ಮೂಲಕ ಮಂಜೂರು ಮಾಡಿಕೊಂಡಿದ್ದರೂ ಕಾರವಾರದ ಜನರು ವಿರೋಧ ಮಾಡಿದ್ದರಿಂದ ಆ ಯತ್ನ ನಿಲ್ಲಿಸಲಾಗಿತ್ತು. ಕಾರವಾರ ಜನರಿಗಿರುವ ಏಕೈಕ ಬೀಚ್‌ ಅನ್ನು ಕೋಸ್ಟ್ ಗಾರ್ಡ್‌ಗೆ ಬಿಟ್ಟುಕೊಟ್ಟಲ್ಲಿ ಮೀನುಗಾರರಿಗೆ, ದಿನಾಲೂ ಬೀಚ್‌ನಲ್ಲಿ ಓಡಾಡುವ ಜನರಿಗೆ ಹಾಗೂ ಪ್ರವಾಸಿಗರಿಗೆ ಸಮಸ್ಯೆಯಾಗುತ್ತದೆ. ರಾಷ್ಟ್ರೀ ಹೆದ್ದಾರಿ, ಕೈಗಾ, ಸೀಬರ್ಡ್ ಯೋಜನೆಯಿಂದ ಜನರಿಗೆ ಭಾರೀ ಸಮಸ್ಯೆಯಾಗಿದೆ. ಯೋಜನೆ ತರುವಾಗ ಜನರಿಗೆ ರಕ್ಷಣೆಗೆಂದು ಹೇಳುತ್ತಾರೆ. ಬಳಿಕ ಜನರ ಸಂಕಷ್ಟ ಕೇಳುವವರಿಲ್ಲ. ಈಗಾಗಲೇ ಕಾರವಾರ ಬ್ರೇಕ್ ವಾಟರ್ ಬಳಿ  7-8 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣದ ಪ್ರಸ್ತಾವನೆಯಿದೆ. 

ಮಂಗಳೂರಿನಲ್ಲಿ 159 ಎಕರೆಯಲ್ಲಿ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ಸ್ಥಾಪನೆ: ಡಿಪಿಆರ್‌ ಬಾಕಿ

ಈ ಪ್ರದೇಶದಲ್ಲೇ ಜೆಟ್ಟಿ ನಿರ್ಮಾಣದೊಂದಿಗೆ ಹೋವರ್ ಕ್ರಾಫ್ಟ್ ಇರಿಸಿದಲ್ಲಿ ಕೋಸ್ಟ್‌ಗಾರ್ಡ್ ಅವರ ಆಪರೇಷನ್‌ಗೂ ಉತ್ತಮ. ಒಂದು ವೇಳೆ ಅವರು ಮತ್ತೆ ಹಠಕ್ಕೆ ಬಿದ್ದರೆ ಜನರ ಹೋರಾಟ ಮುಂದುವರಿಯಲಿದೆ ಎಂದು ಮೀನುಗಾರ ಮುಖಂಡರು ಎಚ್ಚರಿಸಿದ್ದಾರೆ.

 ಒಟ್ಟಿನಲ್ಲಿ ಕಾರವಾರ ಬೀಚ್‌ ಬಳಿ ಹೋವರ್ ಕ್ರಾಫ್ಟ್ ನಿಲುಗಡೆಗೆ ಖಾಯಂ ಜಾಗಕ್ಕಾಗಿ ಕೋಸ್ಟ್ ಗಾರ್ಡ್ ಪ್ರಯತ್ನ ನಡೆಸುತ್ತಿದ್ದರೆ, ಮೀನುಗಾರರಿಂದ ಮಾತ್ರ ವಿರೋಧ ಮುಂದುವರಿದಿದೆ. ಕಾರವಾರ ಬೀಚ್ ಬಿಟ್ಟು ಜೆಟ್ಟಿ ನಿರ್ಮಾಣದಲ್ಲೇ ಹೋವರ್ ಕ್ರಾಫ್ಟ್ ನಿಲುಗಡೆಗೆ ವ್ಯವಸ್ಥೆ ಮಾಡಲಿದ್ದಾರೆಯೇ ಅಥವಾ ಮತ್ತೆ ಹಠಕ್ಕೆ ಬಿದ್ದು ಕಾರವಾರಿಗರಿಂದ ವಿರೋಧ ಎದುರಿಸಲಿದ್ದಾರೆಯೇ ಎಂದು ಕಾದು ನೋಡಬೇಕಷ್ಟೆ.

Follow Us:
Download App:
  • android
  • ios