ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಔಷಧಿ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ, ಏರ್ ಗನ್‌ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಡ್ಯ ಪೊಲೀಸರು ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಂಡ್ಯ/ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮಂಡ್ಯ ಸಮೀಪ ಚಲಿಸುತ್ತಿದ್ದ ಮೆಡಿಸಿನ್ ಟ್ರಕ್ ಒಂದನ್ನು ಅಡ್ಡಗಟ್ಟಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಗಂಭೀರ ಪ್ರಕರಣ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಮಂಡ್ಯ ಪೊಲೀಸರು ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದೇನು?

ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರಾದ ಶಂಕರ್ ಎಂಬುವವರು ಪ್ರಸ್ತುತ ಮೈಸೂರಿನ ಗೋಕುಲಂನಲ್ಲಿ ಪಿ.ಜಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಟಾಟಾ ಸಂಸ್ಥೆಗೆ ಸೇರಿದ (ನಂಬರ್: KA-01-AB-1300, ಹಿಂಭಾಗ 'ಎಸ್.ಗೌಡ' ಎಂದು ಬರೆಯಲಾಗಿದೆ) ಟ್ರಕ್‌ನಲ್ಲಿ ಪ್ರತಿನಿತ್ಯ ಬೆಂಗಳೂರಿನಿಂದ ಮೈಸೂರಿಗೆ ಅಗತ್ಯ ಔಷಧಿಗಳನ್ನು (Medicines) ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು.

ಯಥಾಪ್ರಕಾರ ಮೊನ್ನೆ ಮುಂಜಾನೆ 4:30ರ ಸುಮಾರಿಗೆ ಶಂಕರ್ ಅವರು ಬೆಂಗಳೂರಿನಿಂದ ಔಷಧಿಗಳನ್ನು ಲೋಡ್ ಮಾಡಿಕೊಂಡು ಮೈಸೂರಿನ ಕಡೆಗೆ ಬರುತ್ತಿದ್ದರು. ಈ ವೇಳೆ ಮಂಡ್ಯದ ಅಮರಾವತಿ ಹೋಟೆಲ್ ಬಳಿ ಕಪ್ಪು ಬಣ್ಣದ ಫಾರ್ಚೂನರ್ (Fortuner) ಕಾರಿನಲ್ಲಿ ಬಂದ ಯುವಕರ ಗುಂಪೊಂದು ಟ್ರಕ್ ಅನ್ನು ತಡೆಯಲು ಯತ್ನಿಸಿದೆ.

ಏರ್ ಗನ್ ತೋರಿಸಿ ಹೆದರಿಸಿದ ದುಷ್ಕರ್ಮಿಗಳು

ಟ್ರಕ್ ಚಾಲಕ ಶಂಕರ್ ಗಾಬರಿಗೊಂಡು ವಾಹನವನ್ನು ಮುಂದೆ ಚಲಾಯಿಸಲು ಯತ್ನಿಸಿದಾಗ, ಕಾರಿನಲ್ಲಿದ್ದ ಯುವಕರ ತಂಡ ತಕ್ಷಣವೇ ಗನ್ ತೋರಿಸಿ ಹೆದರಿಸಿದೆ. ಅಷ್ಟಕ್ಕೇ ನಿಲ್ಲದೆ, ಟ್ರಕ್ ಮೇಲೆ ಗುಂಡು (Air Fire) ಹಾರಿಸಿದ್ದಾರೆ. ಈ ವೇಳೆ ಶಂಕರ್ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಗುಂಡೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಹೆದ್ದಾರಿಯಲ್ಲಿ ವಾಹನಗಳನ್ನು ತಡೆಯುವುದು ಸಾಮಾನ್ಯ ಆದರೆ ಕೈಯಲ್ಲಿ ಗನ್ ಹಿಡಿದು ಶೂಟ್ ಮಾಡಲು ಬಂದಿದ್ದರಿಂದ ಚಾಲಕ ಶಂಕರ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆಯಿಂದ ಸಂಪೂರ್ಣವಾಗಿ ಭಯಭೀತರಾದ ಅವರು ಹೇಗೋ ಮೈಸೂರಿನ ಗೋಕುಲಂನಲ್ಲಿರುವ ತಮ್ಮ ನಿವಾಸಕ್ಕೆ ಬಂದು ತಲುಪಿ, ಮನೆ ಮುಂದೆ ಟ್ರಕ್ ನಿಲ್ಲಿಸಿ ಮಲಗಿದ್ದರು. ವಿಷಯ ತಿಳಿದ ಮಂಡ್ಯ ಗ್ರಾಮಾಂತರ ಪೊಲೀಸರು ಸಂಜೆ ವೇಳೆ ಶಂಕರ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಎಂದು ಚಾಲಕನ ಸ್ನೇಹಿತ ಪ್ರದೀಪ್ ಈ ಆತಂಕದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಪ್ರಭಾವಿ ವ್ಯಕ್ತಿಯ ಪುತ್ರ ಸೇರಿ 7 ಮಂದಿ ಕಂಬಿ ಹಿಂದೆ!

ಈ ಜಂಟಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಬಂಧಿತರನ್ನು ರೋಹನ್ ಗೌಡ, ಶಶಾಂಕ್, ಉಮರ್, ನಿತಿನ್, ಮೊಹಮದ್ ಅಬೂಕರ್, ಸಚಿನ್ ಮತ್ತು ಮತ್ತೊಬ್ಬರು ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪ್ರಭಾವಿ ವ್ಯಕ್ತಿಯ ಮಗನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಫಾರ್ಚೂನರ್ ಕಾರು ಮತ್ತು ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ಫನ್'ಗಾಗಿ ಫೈರಿಂಗ್ ಮಾಡಿದ್ರಾ?

ಘಟನೆ ಕುರಿತು ಮಾಹಿತಿ ನೀಡಿರುವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಆರೋಪಿಗಳು ಕೇವಲ ಮೋಜು-ಮಸ್ತಿಗಾಗಿ (Fun) ಏರ್ ಗನ್ ಬಳಸಿ ಫೈರ್ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಘಟನೆಯಲ್ಲಿ ಬಳಕೆಯಾಗಿರುವುದು ಕೇವಲ ಏರ್ ಗನ್ ಹೌದೇ ಅಥವಾ ಬೇರೆ ಮಾರಕಾಸ್ತ್ರವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ ಗನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸಿದ ಯುವಕರ ಗ್ಯಾಂಗ್ ಈಗ ಕಂಬಿ ಎಣಿಸುತ್ತಿದೆ.