ಮಂಗಳೂರಿನ ಬೈಕಂಪಾಡಿ ಬಳಿ, ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕುಟುಂಬವನ್ನು ಅಡ್ಡಗಟ್ಟಿದ ದರೋಡೆಕೋರರು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ, ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, 180 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯ ಹಿಂದೆ ಆಪ್ತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು: ಮಂಗಳೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿ ಸೋಮವಾರ ಮುಂಜಾನೆ ಭೀಕರ ಹಾಗೂ ಸಿನಿಮೀಯ ಮಾದರಿಯ ದರೋಡೆ ಕೃತ್ಯವೊಂದು ಸಂಭವಿಸಿದೆ. ಮಹಾರಾಷ್ಟ್ರದಿಂದ ಕೇರಳಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕುಟುಂಬವನ್ನು ಅಡ್ಡಗಟ್ಟಿದ 7 ಮಂದಿ ಸಶಸ್ತ್ರ ಮುಸುಕುಧಾರಿ ದರೋಡೆಕೋರರ ತಂಡವೊಂದು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ, ಅವರ ಪತ್ನಿ ಮತ್ತು ಮಗನನ್ನು ಕಾರು ಸಹಿತ ಅಪಹರಿಸಿ, ಬರೋಬ್ಬರಿ 180 ಗ್ರಾಂ ಚಿನ್ನಾಭರಣ ಹಾಗೂ ಕಾರನ್ನು ದೋಚಿ ಪರಾರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಮುಗಿಸಿ ಹಿಂತಿರುಗುತ್ತಿದ್ದಾಗ ನಡೆದ ಘೋರ ಕೃತ್ಯ

ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಯಾಗಿದ್ದು, ಕಳೆದ 12 ವರ್ಷಗಳಿಂದ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ವಾಸವಾಗಿರುವ ವಿಕಾಸ್ ಸುಬ್ಬರಾವ್ ಧನವಾಡೆ (44) ದರೋಡೆಗೊಳಗಾದ ಉದ್ಯಮಿ. ಇವರು ಪಯ್ಯನ್ನೂರಿನಲ್ಲಿ ಚಿನ್ನಾಭರಣ ತಯಾರಿಕೆ ಹಾಗೂ ಸ್ವಂತ ಮಳಿಗೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದ್ದ ಆಪ್ತರೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ವಿಕಾಸ್, ತಮ್ಮ ಪತ್ನಿ ರೂಪಾಲಿ (38) ಮತ್ತು ಪುತ್ರ ವಿಫುಲ್ (14) ಅವರೊಂದಿಗೆ ಸ್ವಂತ ಸ್ವಿಫ್ಟ್ ಕಾರಿನಲ್ಲಿ ಕೇರಳಕ್ಕೆ ಹಿಂತಿರುಗುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 2:15ರ ವೇಳೆಗೆ ಇವರ ಕಾರು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯ ದ್ವಾರಾ ಹೋಟೆಲ್ ಮುಂಭಾಗದ ಜಂಕ್ಷನ್‌ಗೆ ತಲುಪಿದಾಗ ಈ ದುರಂತ ಸಂಭವಿಸಿದೆ.

ಹೆದ್ದಾರಿಯಲ್ಲೇ ತಡೆದು ಪತ್ನಿ, ಮಗನ ಅಪಹರಣ!

ಕೇರಳ ನೋಂದಣಿಯ ಎರಡು ಮತ್ತು ಬೆಂಗಳೂರು ನೋಂದಣಿಯ ಒಂದು ಇನ್ನೋವಾ ಸೇರಿದಂತೆ ಒಟ್ಟು ಮೂರು ಕಾರುಗಳಲ್ಲಿ ವಿಕಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ದರೋಡೆಕೋರರು, ಜಂಕ್ಷನ್ ಬಳಿ ಸಿನಿಮೀಯ ಶೈಲಿಯಲ್ಲಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದ ಸುಮಾರು 7 ಮಂದಿ ಮುಸುಕುಧಾರಿಗಳು ಮಾರಕಾಯುಧಗಳೊಂದಿಗೆ ವಿಕಾಸ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿ, ಅವರನ್ನು ಕಾರಿನಿಂದ ಹೊರಗೆ ತಳ್ಳಿದ್ದಾರೆ.

ಅಷ್ಟಕ್ಕೇ ನಿಲ್ಲದ ದರೋಡೆಕೋರರು, ಕಾರಿನಲ್ಲಿದ್ದ ವಿಕಾಸ್ ಅವರ ಪತ್ನಿ ರೂಪಾಲಿ ಮತ್ತು 14 ವರ್ಷದ ಮಗನನ್ನು ಅದೇ ಕಾರಿನಲ್ಲೇ ಅಪಹರಿಸಿಕೊಂಡು ಪಣಂಬೂರು ಬೀಚ್ ರಸ್ತೆಯ ಕಡೆಗೆ ಮುನ್ನುಗ್ಗಿದ್ದಾರೆ. ಚಲಿಸುವ ಕಾರಿನಲ್ಲೇ ರೂಪಾಲಿ ಅವರ ಬಳಿಯಿದ್ದ ಬ್ಯಾಗ್ ಕಿತ್ತುಕೊಂಡ ದುಷ್ಕರ್ಮಿಗಳು, ಅದರಲ್ಲಿದ್ದ 180 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ದರೋಡೆಕೋರರು ಬ್ಯಾಗ್‌ನಲ್ಲಿದ್ದ ಚಿನ್ನವನ್ನು ಮಾತ್ರ ಪಡೆದಿದ್ದು, ರೂಪಾಲಿ ಅವರ ಕತ್ತಿನಲ್ಲಿದ್ದ ಆಭರಣಗಳಿಗಾಗಲಿ ಅಥವಾ ಕಾರಿನಲ್ಲಿದ್ದ ಬಟ್ಟೆ-ಬರೆಗಳಿಗಾಗಲಿ ಕೈಹಾಕಿಲ್ಲ. ಬಳಿಕ ತಾಯಿ-ಮಗನನ್ನು ಪಣಂಬೂರು ಬೀಚ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಇಳಿಸಿ, ಅವರ ಸ್ವಿಫ್ಟ್ ಕಾರಿನಲ್ಲೇ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಪೊಲೀಸರಿಂದ ತನಿಖೆ ಚುರುಕು

ಮುಂಜಾನೆ ಹೆದ್ದಾರಿಯಲ್ಲಿ ಇತರ ವಾಹನಗಳ ಸಂಚಾರವಿದ್ದರೂ, ದರೋಡೆಕೋರರು ಯಾವುದೇ ಭಯವಿಲ್ಲದೆ ಜಂಕ್ಷನ್‌ನಲ್ಲೇ ಈ ಕೃತ್ಯ ಎಸಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಪಣಂಬೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಹೆದ್ದಾರಿಯಲ್ಲಿ ಸಿಲುಕಿದ್ದ ಉದ್ಯಮಿ ವಿಕಾಸ್ ಹಾಗೂ ಬೀಚ್ ರಸ್ತೆಯಲ್ಲಿದ್ದ ಅವರ ಪತ್ನಿ-ಮಗನನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಪಣಂಬೂರು ಪೊಲೀಸ್ ನಿinspector ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಥಳ ಮಹಜರು (ಸ್ಪಾಟ್ ಮಹಜರು) ನಡೆಸಲಾಗಿದ್ದು, ಸಂತ್ರಸ್ತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗಿದೆ.

ಆಪ್ತ ವಲಯದ ಮೇಲೆಯೇ ಪೊಲೀಸರ ತೀವ್ರ ಶಂಕೆ

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಘಟನೆ ಕುರಿತು ಮಾಹಿತಿ ನೀಡಿ, "ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳದ ಪಯ್ಯನ್ನೂರಿಗೆ ತೆರಳುತ್ತಿದ್ದ ಕಾರನ್ನು ತಡೆದು 180 ಗ್ರಾಂ ಚಿನ್ನ ಹಾಗೂ ಕಾರನ್ನು ದೋಚಲಾಗಿದೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಹಲವು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು" ಎಂದು ತಿಳಿಸಿದ್ದಾರೆ.

ಉದ್ಯಮಿ ವಿಕಾಸ್ ಧನವಾಡೆ ಅವರು ಸಾಂಗ್ಲಿಯ ಮದುವೆಗೆ ಹೋಗಿ ಚಿನ್ನದೊಂದಿಗೆ ವಾಪಸಾಗುತ್ತಿರುವ ನಿಖರ ಮಾಹಿತಿ ಕೇವಲ ಅವರ ಆಪ್ತ ವಲಯಕ್ಕೆ ಮಾತ್ರ ತಿಳಿದಿತ್ತು. ಹೀಗಾಗಿ, ಈ ದರೋಡೆಯ ಹಿಂದೆ ಅವರ ವ್ಯಾಪಾರ ಸಂಬಂಧಿ ಸ್ನೇಹಿತರು ಅಥವಾ ಆಪ್ತರ ಕೈವಾಡವಿರುವ ದಟ್ಟ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆ ಆಯಾಮದಲ್ಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.