ಯಶವಂತಪುರ ಕಡೆಯಿಂದ ರಿಂಗ್ ರಸ್ತೆಯಲ್ಲಿ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ ಬೆಳಗ್ಗೆ 9ಗಂಟೆ ಸುಮಾರಿಗೆ ನಾಗರಬಾವಿ ಜಂಕ್ಷನ್‌ ಸಮೀಪದ ಸುವರ್ಣ ಲೇಔಟ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದೆ. ಈ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಏಕಾಏಕಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಇಂಜಿನ್‌ ಭಾಗದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. 

ಬೆಂಗಳೂರು(ಡಿ.05): ನಗರದ ನಾಗರಬಾವಿ ಜಂಕ್ಷನ್‌ ಸಮೀಪದ ಸುವರ್ಣ ಲೇಔಟ್‌ನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಹತ್ತಿಸಿಕೊಳ್ಳಲು ನಿಂತಿದ್ದ ಬಿಎಂಟಿಸಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ದಿಢೀರ್‌ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಕಾರು ಚಾಲಕ ಬೊಮ್ಮಸಂದ್ರದ ಲೋಕೇಶ್‌, ಆತನ ಪತ್ನಿ ಹಾಗೂ ಮಗಳಿಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬಿಎಂಟಿಸಿ ಬಸ್‌ನ ಹಿಂಭಾಗ ಬೆಂಕಿಯಿಂದ ಸುಟ್ಟಿದೆ. ಬಿಎಂಟಿಸಿ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬಸ್‌ನ ಚಾಲಕ ಗಿರೀಶ್‌ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಲೋಕೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಡರಾತ್ರಿ ಗಂಗಾವತಿ ನಗರದ ಜ್ಯುವೆಲ್ಲರಿ ಶಾಪ್‌ ಗೆ ಬೆಂಕಿ; ಚಿನ್ನಾಭರಣ ಸುಟ್ಟು ಕರಕಲು?

ಏನಿದು ಘಟನೆ?:

ಯಶವಂತಪುರ ಕಡೆಯಿಂದ ರಿಂಗ್ ರಸ್ತೆಯಲ್ಲಿ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ ಬೆಳಗ್ಗೆ 9ಗಂಟೆ ಸುಮಾರಿಗೆ ನಾಗರಬಾವಿ ಜಂಕ್ಷನ್‌ ಸಮೀಪದ ಸುವರ್ಣ ಲೇಔಟ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದೆ. ಈ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಏಕಾಏಕಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಇಂಜಿನ್‌ ಭಾಗದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಕಾರು ಚಾಲಕ ಲೋಕೇಶ್‌, ಆತನ ಪತ್ನಿ ಮತ್ತು ಮಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದು, ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಸ್‌ ಚಾಲಕನ ಸಮಯ ಪ್ರಜ್ಞೆ: 

ಡಿಕ್ಕಿಯ ರಭಸಕ್ಕೆ ಬಸ್‌ ಹಿಂಭಾಗಕ್ಕೆ ಕಾರಿನ ಇಂಜಿನ್‌ ಭಾಗ ಅಂಟಿಕೊಂಡು ಬಸ್‌ಗೂ ಬೆಂಕಿ ಆವರಿಸಿದೆ. ಅಷ್ಟರಲ್ಲಿ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಮುಂದಿನ ದ್ವಾರದಲ್ಲಿ ಕೆಳಗೆ ಇಳಿಸಿದ್ದಾರೆ. ಬಳಿಕ ಬಸ್ಸನ್ನು ಮುಂದಕ್ಕೆ ಚಲಾಯಿಸಲು ಮುಂದಾದಾಗ ಬಸ್‌ಗೆ ಅಂಟಿಕೊಂಡಿದ್ದ ಕಾರು ಸಹ ಮುಂದೆ ಬಂದಿದೆ. ಬಳಿಕ ಚಾಲಕ ಸಮಯ ಪ್ರಜ್ಞೆ ಮರೆದು ಬಸ್‌ ಅನ್ನು ರಸ್ತೆ ವಿಭಜಕದ ಮೇಲೆ ಕೊಂಚ ಚಲಾಯಿಸಿದ ಪರಿಣಾಮ ಕಾರು, ಬಸ್‌ನಿಂದ ಬೇರ್ಪಟ್ಟಿದೆ. ಇಲ್ಲವಾದರೆ, ಇಡೀ ಬಸ್‌ ಬೆಂಕಿಗಾಹುತಿಯಾಗುತ್ತಿತ್ತು. ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಗೆ ಕಾರು ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರ ಮೆಚ್ಚುಗೆ

ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಗೌರೀಶ್‌ ಮತ್ತು ನಿರ್ವಾಹಕ ಗಿರಿಧರ್‌ ಸಮಯ ಪ್ರಜ್ಞೆ ಮರೆದು ಎಲ್ಲಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಉಪಾಯ ಮಾಡಿ ಬಸ್ಸನ್ನು ರಸ್ತೆ ವಿಭಜಕದ ಮೇಲೆ ಹತ್ತಿಸಿದಾಗ ಕಾರು, ಬಸ್‌ನಿಂದ ಬೇರ್ಪಟ್ಟಿದೆ. ಚಾಲಕನ ಸಮಯ ಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ಸೂಚಿಸಿದರು.

ಅಗ್ನಿ ನಂದಕವೇ ಇಲ್ಲ!

ನಿಂತಿದ್ದ ಬಸ್‌ಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಸ್ಥಳೀಯರು ಬಿಂದಿಗೆ, ಬಕೇಟ್‌ಗಳಲ್ಲಿ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಅಗ್ನಿ ನಂದಕ ಉಪಕರಣ ಇರಲಿಲ್ಲ ಎನ್ನಲಾಗಿದೆ. ಚಾಲನಾ ಸಿಬ್ಬಂದಿ ಸ್ಥಳೀಯ ಕಾರು ಚಾಲಕರ ಬಳಿ ಅಗ್ನಿ ನಂದಕ ಉಪಕರಣ ಪಡೆದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಇಡೀ ಕಾರಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ವಾಹನದ ಜತೆಗೆ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಬೆಂಗಳೂರು ನೈಸ್ ರಸ್ತೆಯಲ್ಲಿ ಬೈಕ್‌ಗೆ ಗುದ್ದಿದ ಗೂಡ್ಸ್ ವಾಹನ: ದಂಪತಿ ಸ್ಥಳದಲ್ಲಿಯೇ ಸಾವು

ಚಾಲಕನ ಸಮಯ ಪ್ರಜ್ಞೆಗೆ ಶ್ಲಾಘನೆ

ನಮ್ಮ ಚಾಲನಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಇಲ್ಲದಿದ್ದಲ್ಲಿ ಇಡೀ ಬಸ್‌ ಬೆಂಕಿಗಾಹುತಿಯಾಗುತ್ತಿತ್ತು. ನಮ್ಮ ಚಾಲನಾ ಸಿಬ್ಬಂದಿ 45 ಲಕ್ಷ ರು. ಮೌಲ್ಯದ ಬಸ್‌ ಉಳಿಸಿದ್ದಾರೆ. ನಿಂತಿದ್ದ ಬಸ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ನಮ್ಮ ಚಾಲನಾ ಸಿಬ್ಬಂದಿ ಎಲ್ಲಾ ಪ್ರಯತ್ನ ಮಾಡಿದ ಬಳಿಕ ಬಸ್‌ನಿಂದ ಕಾರನ್ನು ಬೇರ್ಪಡಿಸಲು ಯಶಸ್ವಿಯಾಗಿದ್ದಾರೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿಸಿದ ನಮ್ಮ ಚಾಲನಾ ಸಿಬ್ಬಂದಿಗೆ ಪ್ರಶಸ್ತಿ ನೀಡುತ್ತೇವೆ ಎಂದು ಬಿಎಂಟಿಸಿ ಸಂಚಾರ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ಹೇಳಿದ್ದಾರೆ.

ಇಂದು ಬಹುಮಾನ ವಿತರಣೆ

ದೊಡ್ಡ ಅನಾಹುತ ತಪ್ಪಿಸಿದ ಚಾಲಕ ಗೌರೀಶ್‌ ಮತ್ತು ನಿರ್ವಾಹಕ ಗಿರಿಧರ್‌ಗೆ ಬಿಎಂಟಿಸಿ ತಲಾ 10 ಮತ್ತು 5 ಸಾವಿರ ರು. ಬಹುಮಾನ ಘೋಷಿಸಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು ಮಂಗಳವಾರ ಈ ಚಾಲನಾ ಸಿಬ್ಬಂದಿಗೆ ಬಹುಮಾನ ವಿತರಿಸಲಿದ್ದಾರೆ.