ಮಂಗಳೂರು(ಡಿ.23): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಬಂದರು ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ಗೆ ಬಲಿಯಾದ ಅಬ್ದುಲ್‌ ಜಲೀಲ್‌ ಮತ್ತು ನೌಶಿನ್‌ ವಿರುದ್ಧ ಬಂದರು ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಂದಕ್‌ ನಿವಾಸಿ ಅಬ್ದುಲ್‌ ಜಲೀಲ್‌, ಕುದ್ರೋಳಿ ನಿವಾಸಿ ನೌಶಿನ್‌ ಸೇರಿದಂತೆ ಒಟ್ಟು 29 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣದಲ್ಲಿ ಜಲೀಲ್‌ ಅವರನ್ನು 3ನೇ ಆರೋಪಿಯನ್ನಾಗಿಯೂ, ನೌಶೀನ್‌ ಅವರನ್ನು 8ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಡಿಸಿಪಿ ಅರುಣಾಂಶುಗಿರಿ ಅವರನ್ನು ಫಿರ್ಯಾದುದಾರರನ್ನಾಗಿ ನಮೂದಿಸಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?:

ಡಿ.19ರಂದು ಸಂಜೆ 4.15ರಿಂದ 5.30ರ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 1,500ರಿಂದ 2,000 ಮುಸ್ಲಿಂ ಯುವಕರ ಗುಂಪು ನಿಷೇಧಾಜ್ಞೆ ಉಲ್ಲಂಘಿಸಿ ಮಾರಕಾಯುಧಗಳಾದ ಜಲ್ಲಿ, ಕಲ್ಲು, ದೊಣ್ಣೆ, ಸೋಡಾ ಬಾಟಲಿ, ತುಂಡಾದ ಗ್ಲಾಸ್‌ ಪೀಸ್‌ಗಳನ್ನು ಹೊಂದಿ ಮಂಗಳೂರು ಉತ್ತರ ಠಾಣೆಗೆ ಬೆಂಕಿ ಹಚ್ಚಲು ಮತ್ತು ಪೊಲೀಸರನ್ನು ಕೊಲ್ಲುವ ಸಂಚು ನಡೆಸುವ ಉದ್ದೇಶದಿಂದ ಅಕ್ರಮ ಕೂಟ ಸೇರಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ: ಮಾಹಿತಿಗಾಗಿ ಮಂಗಳೂರಲ್ಲಿ ಹೆಲ್ಪ್‌ ಡೆಸ್ಕ್‌..!

ಬಳಿಕ ಮಂಗಳೂರು ಉತ್ತರ ಪೊಲೀಸ್‌ ಠಾಣೆಗೆ ಕಲ್ಲು ತೂರಾಟ ಮಾಡಿ ಠಾಣೆಗೆ ಎಸೆಯುತ್ತಿರುವ ಸಮಯದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಮೆಗಾ ಫೋನ್‌ನಲ್ಲಿ ಗಲಭೆ ನಿರತ ಗುಂಪಿಗೆ ಚದುರುವಂತೆ ಸೂಚನೆ ನೀಡಿದರೂ ಚದುರಿ ಹೋಗದೆ ಕಲ್ಲು ತೂರಾಟ ಮುಂದುವರಿಸಿದ್ದರು. ಲಘು ಲಾಠಿ ಪ್ರಹಾರ ನಡೆಸಿದಾಗ ಚದುರಿಹೋದ ಗುಂಪು ಪುನಃ ಒಟ್ಟುಸೇರಿ ನಿರಂತರ ಕಲ್ಲು ತೂರಾಟ ನಡೆಸಿದ್ದರಿಂದ ಫಿರ್ಯಾದಿದಾರರು, ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಗಾಯಗೊಂಡಿದ್ದು, ಗಲಭೆಯನ್ನು ಹತ್ತಿಕ್ಕಲು ಮತ್ತು ಸಾವು ನೋವು ಆಸ್ತಿ ಪಾಸ್ತಿ ಹಾನಿ ತಡೆಯಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಗಲಭೆ ನಿರತರ ಪೈಕಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿದಲ್ಲಿ ಮೃತಪಟ್ಟಿದ್ದಾರೆ.

'ಗೋಲಿಬಾರ್‌ ನಡೆಸಲು RSS ಮುಖಂಡ ಕಲ್ಲಡ್ಕ ಪ್ರಭಾಕರ ಸೂಚನೆ ನೀಡಿದರೇ..'?

ಇತರ ಐದು ಮಂದಿ ಗಾಯಗೊಂಡಿದ್ದು, ಆರೋಪಿಗಳು ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾರಕ ಆಯುಧಗಳಿಂದ ಪೊಲೀಸರನ್ನು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಇದೀಗ ಸಾವಿಗೀಡಾದ ಸಂತ್ರಸ್ತರ ವಿರುದ್ಧವೇ ಎಫ್‌ಐಆರ್‌ ದಾಖಲಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.