ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಕೊರತೆ ಇರುವುದನ್ನು ಮನಗಂಡ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೆಲ್ಪ್‌ ಡೆಸ್ಕ್ ತೆರೆಯಲು ನಿರ್ಧರಿಸಿದ್ದಾರೆ. ಕಾಯ್ದೆ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ಕಾಯ್ದೆಯ ಬಗ್ಗೆ ಮಾಹಿತಿ ಒದಗಿಸಲು ಉತ್ತಮ ನಿರ್ಧಾರ ಮಾಡಿರುವ ಶಾಸಕರು ಇತತರರಿಗೆ ಮಾದರಿಯಾಗಿದ್ದಾರೆ.

ಮಂಗಳೂರು(ಡಿ.23): ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಎಲ್ಲ ಕಡೆಗಳಲ್ಲಿ ವಿರೋಧ, ಗೊಂದಲಗಳ ಮಾಹಿತಿ ರವಾನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಸಕರೊಬ್ಬರು ಹೆಲ್ಪ್‌ಡೆಸ್ಕ್‌ ತೆರೆಯುವ ಮೂಲಕ ಉಪಯುಕ್ತ ಕಾರ್ಯ ಮಾಡಲು ಹೊರಟಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅವರೇ ತಮ್ಮ ಕಚೇರಿಯಲ್ಲಿ ಹೆಲ್ಪ್‌ ಡೆಸ್ಕ್‌ ತೆರೆಯುವುದಾಗಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಸಾರ್ವಜನಿಕರು ಸಹಕರಿಸಬೇಕು. ಮತ್ತು ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿದ್ದರೂ ಅದನ್ನು ತಿಳಿದುಕೊಳ್ಳಲು ಶೀಘ್ರವೇ ಶಾಸಕರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ ತೆರೆಯಲಾಗುವುದು ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

ಕರ್ಫ್ಯೂ ಸಡಿಲಿಕೆಯಿಂದ ಸಹಜ ಸ್ಥಿತಿಗೆ ಜನಜೀವನ, ಸೆಕ್ಷನ್‌ 144 ಮುಂದುವರಿಕೆ

ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಸಂಪೂರ್ಣ ಭಿನ್ನವಾಗಿದ್ದು ಎನ್‌ಆರ್‌ಸಿ ಪ್ರತ್ಯೇಕವಾದುದು. ಇದರ ನಿಯಮ ಮತ್ತು ಪ್ರಕ್ರಿಯೆಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಸಿಎಎ ಸಂಸತ್ತಿನಲ್ಲಿ ಅಂಗೀಕಾರ ಪಡೆದು ಇದೀಗ ದೇಶಾದ್ಯಂತ ಜಾರಿಯಾಗುವ ಹಂತದಲ್ಲಿದೆ. ಸಿಎಎ ಪ್ರಕ್ರಿಯೆಯಿಂದ ಭಾರತೀಯ ಮುಸಲ್ಮಾನರು ಸೇರಿದಂತೆ ಯಾವುದೇ ಸಮುದಾಯದವರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ದೇಶದ ಜನರ ಹಿತ ದೃಷ್ಟಿಯಿಂದಲೇ ಕಾನೂನು ರೂಪಿಸಲಾಗಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.