ಮಂಗಳೂರು(ಡಿ.23): ಮಂಗಳೂರಿನಲ್ಲಿ ಗೋಲಿಬಾರ್‌ ನಡೆಸಲು ಯಾರು ಆದೇಶ ನೀಡಿದರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇಲ್ಲಿನ ಶಕ್ತಿಕೇಂದ್ರವಾದ ಆರೆಸ್ಸೆಸ್‌ ಮುಖಂಡ ಪ್ರಭಾಕರ ಭಟ್‌ ಕಲ್ಲಡ್ಕ ಅವರು ಸೂಚನೆ ನೀಡಿದರೇ? ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪ್ರಭಾಕರ ಭಟ್‌ ಮೇಲೆ ಆರೋಪ:

ಮಂಗಳೂರಿನಲ್ಲಿ ಶಕ್ತಿಕೇಂದ್ರವಾದ ಆರೆಸ್ಸೆಸ್‌ ಮುಖಂಡ ಪ್ರಭಾಕರ ಭಟ್‌ ಕಲ್ಲಡ್ಕ ಅವರು ಸೂಚನೆ ನೀಡಿದರೇ? ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ಘಟನೆಯ ಮುನ್ನಾ ದಿನ ಯಾರೆಲ್ಲ ಪ್ರಭಾಕರ ಭಟ್ಟರ ಮನೆಯಲ್ಲಿ ಇದ್ದರು ಎಂಬುದನ್ನೂ ಸರ್ಕಾರ ತನಿಖೆ ನಡೆಸಲು ಸಿದ್ಧವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಾಗರಿಕರು ವರ್ಸಸ್‌ ಇಲಾಖೆ:

ಈಗ ನಡೆದಿರುವುದು ಸಾರ್ವಜನಿಕ ಹಾಗೂ ಪೊಲೀಸ್‌ ಇಲಾಖೆ ನಡುವಿನ ಸಂಘರ್ಷ. ಇಲ್ಲಿ ಮಾನವೀಯತೆ ಇರಬೇಕಾಗಿದ್ದು, ಶಾಸಕರು ಹಾಗೂ ಅಧಿಕಾರಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಬೇಕಾಗಿತ್ತು. ಇದೆಲ್ಲವನ್ನು ಬಿಟ್ಟು ಸಿಎಂ ಬಂದ ಪುಟ್ಟ-ಹೋದ ಪುಟ್ಟಎಂಬಂತೆ ವರ್ತಿಸಿದ್ದಾರೆ ಎಂದು ದೂರಿದರು.

ಸಾವಿಗೀಡಾದವರ ವಿರುದ್ಧ ಕೇಸ್‌ ದಾಖಲಿಸುತ್ತಾರಾ?

ಪೊಲೀಸರ ಗುಂಡಿನ ದಾಳಿಗೆ ಮೃತಪಟ್ಟಕಂದಕ್‌ ನಿವಾಸಿ ಅಬ್ದುಲ್‌ ಜಲೀಲ್‌ ಹಾಗೂ ಕುದ್ರೋಳಿ ನಿವಾಸಿ ನೌಶೀನ್‌ ಮೃತ​ಪ​ಟ್ಟಿದ್ದು, ಇವರ ಇಬ್ಬರ ವಿರುದ್ಧವೇ ಪೊಲೀಸರು ಕೇಸು ದಾಖಲಿಸಿದ್ದಾರೆ. ಸತ್ತವರ ಮೇಲೂ ಪೊಲೀಸರು ಕೇಸು ದಾಖಲಿಸುತ್ತಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತಲಾ 5 ಲಕ್ಷ ರು. ಪರಿಹಾರ ಚೆಕ್‌ ವಿತರಣೆ

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಚೆಕ್‌ನ್ನು ಪಕ್ಷದ ವತಿ​ಯಿಂದ ಮಾಜಿ ಸಿಎಂ ಕುಮಾರಸ್ವಾಮಿ ವಿತರಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವ ಜೊತೆಗೆ ನತದೃಷ್ಟರಿಗೆ ಉದ್ಯೋಗ ಹಾಗೂ ಮನೆ ನಿರ್ಮಾಣಕ್ಕೆ ನೆರವಾಗುವ ಭರವಸೆ ನೀಡಿದರು.

ಕಾಂಗ್ರೆಸ್‌ ಪರ ಎಚ್‌ಡಿಕೆ ಬ್ಯಾಟಿಂಗ್‌

ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂದು ಬಿಜೆಪಿ ಪರವಾಗಿ ಇದುವರೆಗೆ ಹೇಳಿಕೆ ನೀಡುತ್ತಿದ್ದ ಕುಮಾರಸ್ವಾಮಿ ಈಗ ತಮ್ಮ ವರಸೆ ಬದಲಿಸಿ ಕಾಂಗೆಸ್‌ ಪರವಾಗಿ ಮಾತನಾಡಿದ್ದಾರೆ. ಸಂತ್ರಸ್ತರ ಭೇಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವಕಾಶ ನಿರಾಕರಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಕಿ ಹಾಕುವವರು ಯಾರು?

ಸಿದ್ದರಾಮಯ್ಯ ಮಂಗಳೂರಿಗೆ ಬಂದರೆ ಘಟನೆಗೆ ಬೆಂಕಿ ಹಾಕುತ್ತಾರೆ ಎನ್ನುತ್ತಿರುವ ಬಿಜೆಪಿ ಸರ್ಕಾರ, ಈ ಹಿಂದೆ ಯಡಿಯೂರಪ್ಪ ಅವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ, ರಾಜ್ಯ ಹೊತ್ತಿ ಉರಿದೀತು ಎಂದಿಲ್ಲವೇ? ಅದೇ ರೀತಿ ಹೊನ್ನಾವರದಲ್ಲಿ ಪರಮೇಶ ಮೇಸ್ತ ಸಾವಿನ ವೇಳೆ ಶೋಭಾ ಆಡಿದ ಮಾತು, ನಂತರ ನಳಿನ್‌ ಕುಮಾರ್‌ ಅವರು ದೇರಳಕಟ್ಟೆಯಲ್ಲಿ ಜಿಲ್ಲೆ ಹೊತ್ತಿ ಉರಿಯುತ್ತದೆ ಎಂದು ಹೇಳಿದ ಮಾತಿಗೆ ಎಫ್‌ಐಆರ್‌ ಹಾಕಿದ್ದಾರಾ? ಈಗ ಮಂಗಳೂರು ಗಲಭೆಗೆ ಶಾಸಕ ಖಾದರ್‌ ಹೇಳಿರುವುದೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಬಿಜೆಪಿಯವರು ಹೇಳಿದ ಮಾತುಗಳಿಗೆ ಬೆಲೆ ಇಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಸ್‌ಎಂಕೆಗೂ ಟೀಕೆ

ಮಾಜಿ ಸಿಎಂ ಎಂಸ್‌.ಎಂ.ಕೃಷ್ಣ ಅವರ ನಿಲುವಿಗೂ ಕುಮಾರಸ್ವಾಮಿ ಪರೋಕ್ಷವಾಗಿ ಕಟು ಟೀಕೆ ಮಾಡಿದ್ದಾರೆ. ತನ್ನ ಜೀವನದ ಕೃತಿಯನ್ನು ಹೊರತರುತ್ತಿರುವ ಮಾಜಿ ಸಿಎಂ ಒಬ್ಬರು ಕಾಂಗ್ರೆಸ್‌ನಲ್ಲಿ ಹುದ್ದೆ ಅನುಭವಿಸಿ, ತನ್ನ ಅಳಿಯನನ್ನು ಇಲ್ಲಿನ ನೇತ್ರಾವತಿ ನದಿಯಲ್ಲಿ ಕೆಡವಿದ ಅವರಿಗೆ ನಾಚಿಕೆ ಆಗಬೇಕು ಎಂದು ಎಸ್‌.ಎಂ.ಕೃಷ್ಣ ಅವರ ಹೆಸರು ಹೇಳದೆ ಟೀಕಿಸಿದ್ದಾರೆ.