ಬೆಂಗಳೂರು(ಜ.23):  ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಜಯನಗರದ ಕಾಂಗ್ರೆಸ್‌ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

ಈ ಘಟನೆ ಸಂಬಂಧ ಸಂತ್ರಸ್ತ ಸಿಬ್ಬಂದಿ ನೀಡಿದ ದೂರು ಆಧರಿಸಿ, ಹಲ್ಲೆ ಹಾಗೂ ಕರ್ತವ್ಯ ಅಡ್ಡಿಪಡಿಸಿದ ಆರೋಪದಡಿ ಶಾಸಕಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಸೌಮ್ಯಾರೆಡ್ಡಿ ಅವರಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಗರದಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್‌ ಪಕ್ಷವು ‘ರಾಜಭವನ ಚಲೋ’ ಪ್ರತಿಭಟನೆ ಆಯೋಜಿಸಿತ್ತು. ಆಗ ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದ್ದಾಗ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ತಮ್ಮನ್ನು ತಡೆದ ಮಹಿಳಾ ಗೃಹ ರಕ್ಷ ಸಿಬ್ಬಂದಿ ಮೇಲೆ ಸೌಮ್ಯಾರೆಡ್ಡಿ ಹಲ್ಲೆ ನಡೆಸಿ, ದರ್ಪ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಸೌಮ್ಯಾರೆಡ್ಡಿ ನಡೆಯನ್ನು ಬಿಜೆಪಿ ಮುಖಂಡರು ತೀವ್ರವಾಗಿ ವಿರೋಧಿಸಿದ್ದರು.

ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಶಾಸಕಿ ಸೌಮ್ಯಾ ದರ್ಪ.. ಹೀಗೆಲ್ಲಾ ಮಾಡೋದಾ?

ಗೃಹ ಸಚಿವರನ್ನು ಭೇಟಿ ಮಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ನೇತೃತ್ವದ ನಿಯೋಗವು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಬಿಡದೆ ಸೌಮ್ಯಾರೆಡ್ಡಿ ಉದ್ಧಟತನದ ದುವರ್ತನೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು. ಮಾಜಿ ಗೃಹ ಸಚಿವರ ಮಗಳಾದ ಸೌಮ್ಯರೆಡ್ಡಿ ಅವರು ಇತರರಿಗೆ ಮಾದರಿ ಆಗುವಂತೆ ನಡೆದುಕೊಳ್ಳಬೇಕಿತ್ತು. ಆದರೆ ಅವರು ದುವರ್ತನೆ ಕೋರಿದ್ದು, ಇದು ಕಾರ್ಯಕರ್ತರನ್ನು ಪ್ರಚೋದಿಸುವಂತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆ ಸಹ ಇದೆ. ಆದರಿಂದ ಶಾಸಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮೋರ್ಚಾ ಪದಾಧಿಕಾರಿಗಳು ಒತ್ತಾಯಿಸಿದ್ದರು.

ಶಾಸಕಿ ವಿರುದ್ಧ ಕ್ರಮ ಜರುಗಿಸುವಂತೆ ಸಲ್ಲಿಕೆಯಾಗಿದ್ದ ಮನವಿಯನ್ನು ರಾಜ್ಯ ಗೃಹ ಸಚಿವರು, ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ರವಾನಿಸಿದ್ದರು. ಕೊನೆಗೆ ಎರಡು ದಿನಗಳ ಬಳಿಕ ಸಂತ್ರಸ್ತ ಸಿಬ್ಬಂದಿಯು ಉಪ್ಪಾರಪೇಟೆ ಠಾಣೆಯಲ್ಲಿ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ದೂರು ನೀಡಿದ್ದಾರೆ. ಅಂತೆಯೇ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು, ಶಾಸಕಿ ವಿರುದ್ಧ ಅಧಿಕೃತ ತನಿಖೆ ಆರಂಭಿಸಿದ್ದಾರೆ. ಇದರಿಂದ ಶಾಸಕಿಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ.