ಬೆಂಗಳೂರು-ಮೈಸೂರು ಹೈವೇ ವಾಹನ ಸವಾರರ ಮೇಲೆ ದಂಡಾಸ್ತ್ರ
ರಾಮನಗರ ಪೊಲೀಸರ ವಿಶೇಷ ಕಾರಾರಯಚರಣೆ, ರೂಲ್ಸ್ ಬ್ರೇಕ್ ಮಾಡಿದರೆ ದಂಡ ಗ್ಯಾರಂಟಿ, 2 ದಿನಗಳಲ್ಲಿ 490 ಪ್ರಕರಣಗಳು ದಾಖಲು.
ರಾಮನಗರ(ಜು.09): ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಪೊಲೀಸರು ಶರವೇಗದಲ್ಲಿ ಸಂಚರಿಸುವ ವಾಹನಗಳ ಮೇಲೆ ದಂಡಾಸ್ತ್ರ ಪ್ರಯೋಗ ಮಾಡುತ್ತಿದ್ದು, ಕೇವಲ ಎರಡು ದಿನಗಳಲ್ಲಿ 490 ಪ್ರಕರಣಗಳು ದಾಖಲಿಸಿದ್ದಾರೆ.
ಎಕ್ಸ್ ಪ್ರೆಸ್ ವೇನಲ್ಲಿ ವಿಶೇಷ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಮೊದಲ ದಿನವಾದ ಗುರುವಾರ 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎರಡನೇ ದಿನವಾದ ಶುಕ್ರವಾರ 446 ಪ್ರಕರಣಗಳನ್ನು ದಾಖಲು ಮಾಡಿ ದಂಡ ವಸೂಲಿ ಮಾಡಿದ್ದಾರೆ.
ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರು ಗಮನವಿಟ್ಟು ಕೇಳಿ: ಟೋಲ್ ಅಷ್ಟೇ ಅಲ್ಲ, ಅತಿ ವೇಗಕ್ಕೂ ದಂಡ..!
ಇದರಲ್ಲಿ ಓವರ್ ಸ್ಪೀಡ್ 174 , ಲೇನ್ ಡಿಸಿಪ್ಲೀನ್ ಉಲ್ಲಂಘನೆ ಮಾಡಿದ್ದಕ್ಕಾಗಿ 137, ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ 81, ಹೆಲ್ಮೆಟ್ ಧರಿಸದ ಬೈಕ್ ಧರಿಸದ ಕಾರಣ 47 ಪ್ರಕರಣ ಹಾಗೂ ಇತರೆ 51 ಪ್ರಕರಣ ಸೇರಿದಂತೆ ಒಟ್ಟಾರೆ 490 ಪ್ರಕರಣಗಳು ಸೇರಿವೆ.
ರಾಮನಗರ ಪೊಲೀಸರು ರೇಡಾರ್ ಗನ್‌ಗಳೊಂದಿಗೆ ಹೆದ್ದಾರಿಯಲ್ಲಿ ವಾಹನಗಳ ವೇಗ ತಪಾಸಣೆಯಲ್ಲಿ ತೊಡಗಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವವರು, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸಿದ್ದಾರೆ. ಅನುಮತಿಸುವ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ಮಾರ್ಚ್‌ನಲ್ಲಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ 243 ಅಪಘಾತ ಪ್ರಕರಣಗಳು ಸಂಭವಿಸಿವೆ. ವರದಿಗಳ ಪ್ರಕಾರ, ರಾಮ ನಗರ ಜಿಲ್ಲಾ ವ್ಯಾಪ್ತಿಯಲ್ಲಿ 58 ಮಂದಿ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಮಂದಿ ಸೇರಿ ಒಟ್ಟು 122 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.
ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದರು. ಆನಂತರ ಮೇಜರ್ ಸರ್ಜರಿ ಕೈಗೊಳ್ಳಲಾಗಿದ್ದು, ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರೇಡಾರ್ ಗನ್ ಬಳಕೆ ಮಾಡುವುದಾಗಿ ಹೇಳಿದ್ದರು.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 100 ಕಿ.ಮೀ.ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120ರಿಂದ 160 ಕಿಮೀ ವೇಗದವರೆಗೆ ಚಾಲನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸರು ಸ್ಪೀಡ್ ರೇಡಾರ್ ಗನ್ ಮೂಲಕ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ರೇಡಾರ್ ಗನ್‌ನಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರವನ್ನು ಚಿತ್ರ ಸಮೇತ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
ವೀಲ್ಹಿಂಗ್ ಮಾಡಿದ ನಾಲ್ವರ ವಿರುದ್ಧ ಕ್ರಮ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ವೀಲಿಂಗ್ ಮಾಡಿದ್ದ ನಾಲ್ವರು ಯುವಕರ ವಿರುದ್ಧ ಕುಂಬಳಗೂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸುವ ಮೂಲಕ ಹೆದ್ದಾರಿಯಲ್ಲಿ ಹುಚ್ಚಾಟ ಆಡುವ ವಾಹನ ಸವಾರರಿಗೆ ಬಿಸಿಮುಟ್ಟಿಸಿದ್ದಾರೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲೂ ಡೆಡ್ಲಿ ವ್ಹೀಲಿಂಗ್ ಪುಂಡರ ಹಾವಳಿ: ಇಲ್ಲಿದೆ ಝಲಕ್
ಬೆಂಗಳೂರು ಮೂಲದ ಮಹಮ್ಮದ್ ಹುಸೇನ್, ವಾಸೀಂ ಖಾನ್, ಮುಜಮಿಲ್ ಮತ್ತು ಸುಲ್ತಾನ್ ಎಂಬ ನಾಲ್ಕು ಮಂದಿಯ ವಿರುದ್ಧ ಪ್ರಕರಣ ಭಾರತೀಯ ಮೋಟಾರು ವಾಹನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ರಿಂದ 6 ತಿಂಗಳ ಹಿಂದೆ ಹೆದ್ದಾರಿಯಲ್ಲಿ ಇವರು ಹುಡುಗಿಯನ್ನು ಕೂರಿಸಿಕೊಂಡು ವೀಲಿಂಗ್ ಮಾಡಿದ್ದರು. ಇದನ್ನು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ವ್ ಮಾಡಿದ್ದರು.
ವೀಲ್ಹಿಂಗ್ ಮಾಡುವ ಮೂಲಕ ಪ್ರಯಾಣಿಕರಿಗೆ ಅಪಾಯ ತಂದ್ದೊಡ್ಡುವ ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಪೊಲೀಸರು ನಾಲ್ಕು ಮಂದಿ ಯುವಕರ ವಿರು ದ್ಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದ ಯುವಕರನ್ನು ಪತ್ತೆಹಚ್ಚಿ ದಂಡವಿಧಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯ ವನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಪ್ರಶಂಸಿಸಿದ್ದಾರೆ.