ಖಾಲಿ ಸೈಟ್ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ದಂಡ ಕಟ್ಟಿ..!
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದ ಖಾಲಿ ನಿವೇಶನದಲ್ಲಿ ಭಾರೀ ಪ್ರಮಾಣದ ಗಿಡಗಂಟಿ ಬೆಳೆದು ನಿಂತಿದೆ. ಇಂತಹ ಖಾಲಿ ನಿವೇಶನಗಳು ಅನಧಿಕೃವಾಗಿ ಕಸ ಸುರಿಯುವ ಬ್ಲಾಕ್ ಸ್ಪಾಟ್‌ಗಳಾಗಿವೆ. ಇದರಿಂದ ಖಾಲಿ ನಿವೇಶನದಲ್ಲಿ ಹಾವು ಸೇರಿದಂತೆ ವಿಷ ಜಂತುಗಳಿಗೆ ದೊಡ್ಡ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ.

ಬೆಂಗಳೂರು(ನ.07): ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿನ ಗಿಡಗಂಟಿಗಳನ್ನು ಸ್ವಚ್ಛ ಮಾಡಿಕೊಳ್ಳದಿದ್ದರೆ ಬಿಬಿಎಂಪಿಗೆ ದಂಡ ಕಟ್ಟಬೇಕಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದ ಖಾಲಿ ನಿವೇಶನದಲ್ಲಿ ಭಾರೀ ಪ್ರಮಾಣದ ಗಿಡಗಂಟಿ ಬೆಳೆದು ನಿಂತಿದೆ. ಇಂತಹ ಖಾಲಿ ನಿವೇಶನಗಳು ಅನಧಿಕೃವಾಗಿ ಕಸ ಸುರಿಯುವ ಬ್ಲಾಕ್ ಸ್ಪಾಟ್‌ಗಳಾಗಿವೆ. ಇದರಿಂದ ಖಾಲಿ ನಿವೇಶನದಲ್ಲಿ ಹಾವು ಸೇರಿದಂತೆ ವಿಷ ಜಂತುಗಳಿಗೆ ದೊಡ್ಡ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ.
ಇನ್ನು ಕಳೆದ ವಾರ ನಗರದ ಹೊರ ವಲಯದ ಹೊಂಗಸಂದ್ರ ಗ್ರಾಮದ ಕೃಷ್ಣಾ ರೆಡ್ಡಿ ಲೇಔಟ್‌ನಲ್ಲಿ ಚಿರತೆಯು ಖಾಲಿ ನಿವೇಶನದಲ್ಲಿ ಸೇರಿಕೊಂಡಿತ್ತು. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಕಳೆ ಮತ್ತು ಸಸ್ಯಗಳನ್ನು ತೆರವುಗೊಳಿಸಲು ಜೆಸಿಬಿ ಕರೆಯಬೇಕಾಯಿತು. ಹೀಗಾಗಿ, ಚಿರತೆ ಸೆರೆ ಹಿಡಿಯುವುದು ವಿಳಂಬವಾಯಿತು.
ಬ್ರ್ಯಾಂಡ್ ಬೆಂಗಳೂರು ರಸ್ತೆಯಲ್ಲಿ ಮತ್ತೊಂದು ಮಹಾಗುಂಡಿ: ವಾಹನ ಸವಾರರೇ ಎಚ್ಚರ!
ಇದರಿಂದ ಬಿಬಿಎಂಪಿ ಇದೀಗ ನಗರದಲ್ಲಿರುವ ಖಾಲಿ ನಿವೇಶನಗಳ ಮಾಲೀಕರಿಗೆ ತಮ್ಮ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕು. ಇಲ್ಲವಾದರೆ, ಬಿಬಿಎಂಪಿಯಿಂದ ಸ್ವಚ್ಛಗೊಳಿಸಲಾಗುವುದು. ಸ್ವಚ್ಛಪಡಿಸಿದ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ತೆರಿಗೆಗೆ ಬಾಕಿ ರೂಪದಲ್ಲಿ ಸೇರಿಸಲಾಗುವುದು. ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ಪಾವತಿ ಮಾಡಬೇಕಾಗಲಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಬಿಬಿಎಂಪಿ ಸೋಮವಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿದೆ.