ಬ್ರ್ಯಾಂಡ್ ಬೆಂಗಳೂರು ರಸ್ತೆಯಲ್ಲಿ ಮತ್ತೊಂದು ಮಹಾಗುಂಡಿ: ವಾಹನ ಸವಾರರೇ ಎಚ್ಚರ!
ಬ್ರ್ಯಾಂಡ್ ಬೆಂಗಳೂರಿನ ವೈಟ್ ಟಾಪಿಂಗ್ ರಸ್ತೆಯಲ್ಲಿ ಮತ್ತೊಂದು ಮಹಾ ರಸ್ತೆಗುಂಡಿ ಬಿದ್ದಿದೆ. ವಾಹನ ಸವಾರರೇ ಎಚ್ಚರದಿಂದ ಪ್ರಯಾಣ ಮಾಡಿ.

ಬೆಂಗಳೂರು (ನ.06): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ಮಾಡುವ ವಾಹನ ಸವಾರರೇ ಎಚ್ಚರವಾಗಿ ವಾಹನಗಳನ್ನು ಚಲಾಯಿಸಿ. ಕಾರಣ ನೀವು ಪ್ರಯಾಣ ಮಾಡುವ ಯಾವುದೇ ರಸ್ತೆ, ಯಾವುದೇ ಸಂದರ್ಭದಲ್ಲಾದರೂ ಕುಸಿದು ಬಿದ್ದು ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಹುದು. ಆಡುಗೋಡಿ ಜಂಕ್ಷನ್ ಬಳಿಯ ಕಾಂಕ್ರೀಟ್ ರಸ್ತೆಯಲ್ಲಿ ಸುಮಾರು ಮರ್ನಾಲ್ಕು ಅಡಿ ರಸ್ತೆ ಕುಸಿತಗೊಂಡಿದೆ.
ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಬ್ರ್ಯಾಂಡ್ ಬೆಂಗಳೂರು, ಸ್ಮಾರ್ಟ್ ಸಿಟಿ ಎಂದೆಲ್ಲಾ ಹೇಳುವ ಬೆಂಗಳೂರಿನಲ್ಲಿ ರಸ್ತೆಗಳ ಸ್ಥಿತಿಯನ್ನು ನೋಡಿದರೆ ವಾಹನ ಸವಾರರ ಪ್ರಾಣಕ್ಕಂತೂ ಕುತ್ತು ಬರುವುದು ಶತಃಸಿದ್ಧ ಎಂಬಂತೆ ಕಂಡುಬರುತ್ತಿದೆ. ರಾಜಧಾನಿಯಲ್ಲಿ ರಸ್ತೆ ಗುಂಡಿಗಳಿಲ್ಲ ಎಂದು ಹೇಳುವ ಬಿಬಿಎಂಪಿ ನಿರ್ಮಿಸಿದ ಈ ಕಳಪೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿ ನಿರ್ಮಾಣ ಆಗಿರುವುದಕ್ಕೆ ಏನು ಹೇಳುತ್ತದೆ ನೋಡಬೇಕು. ಇನ್ನು ಬೆಂಗಳೂರಿನಲ್ಲಿ ಮೇಲ್ನೋಟಕ್ಕೆ ರಸ್ತೆ ಚೆನ್ನಾಗಿದೆ ಎಂದು ಮೈಮರೆತು ವಾಹನ ಚಲಾಯಿಸದರೆ ನಿಮ್ಮ ಪ್ರಾಣ ಪಕ್ಷಿ ಕ್ಷಣ ಮಾತ್ರದಲ್ಲಿ ಹಾರಿ ಹೋಗುವ ಸಾಧ್ಯತೆಯಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸೋ ಮುನ್ನ ವಾಹನ ಸವಾರರು ಅಲರ್ಟ್ ಆಗಿರಬೇಕು. ಸಿಲಿಕಾನ್ ಸಿಟಿಯ ರಸ್ತೆಗಳ ಕಳಪೆ ಗುಣಮಟ್ಟ ಮತ್ತೊಮ್ಮೆ ಅನಾವರಣ ಆಗುತ್ತಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರಿನ ಹೈಟೆಕ್ ರಸ್ತೆಗಳು ಎನ್ನುವಂತಾಗಿದೆ. ಆಡುಗೋಡಿ ಜಂಕ್ಷನ್ ಬಳಿ ಏಕಾಏಕಿ ಮೂರ್ನಾಲ್ಕು ಅಡಿ ಕಾಂಕ್ರೀಟ್ ರಸ್ತೆ ಕುಸಿತಗೊಂಡಿದೆ. ಕಳೆದ 5 ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ವೈಟ್ ಟಾಪಿಂಗ್ ರಸ್ತೆ ಕುಸಿತವಾಗಿದೆ. ಕುಸಿದಿರೋ ರಸ್ತೆ ಅಡಿಯಲ್ಲಿ ಟೊಳ್ಳಾಗಿದ್ದು, ಕಾಮಗಾರಿ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!
ಇನ್ನು ವೈಟ್ ಟಾಪಿಂಗ್ ಮಾಡಿದ ರಸ್ತೆಯು ಕುಸಿತಗೊಂಡ ಜಾಗದಲ್ಲಿಯೂ ಗಟ್ಟಿಯಾದ ಭಾಗವೇ ಇಲ್ಲ. ಟೊಳ್ಳು ಟೊಳ್ಳಾಗಿರೋ ಭೂಮಿಯ ಮೇಲೆ ಹೊಸ ಕಾಂಕ್ರೀಟ್ ಹಾಕಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಅತಿ ಹೆಚ್ಚು ವಾಹನಗಳು ಸಂಚರಿಸೋ ರಸ್ತೆಯಲ್ಲಿ ಗುಣಮಟ್ಟದ ರಸ್ತೆಯಿಲ್ಲದೇ ವಾಹನ ಸವಾರರು ಆತಂಕಕ್ಕೆ ಸಿಲುಕುವಂತಾಗಿದೆ. ವಾಹನ ಸಂಚಾರದ ವೇಳೆ ಅವಘಡ ಸಂಭವಿಸಿದ್ರೆ ಹೊಣೆ ಯಾರು ಇಲ್ಲ. ಕೋಟ್ಯಂತರ ಜನರು ವಾಹನ ಸಂಚಾರ ಮಾಡೋ ರಸ್ತೆಗಳನ್ನು ಬಿಬಿಎಂಪಿ ಕಳಪೆ ಗುಣಮಟ್ಟದ್ದಾಗಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.