PM Fasal Bima Yojana delay ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಸಿಗಬೇಕಿದ್ದ ಹಿಂಗಾರು ಬೆಳೆ ವಿಮೆ ಪರಿಹಾರ ತೀವ್ರ ವಿಳಂಬವಾಗಿದೆ. ಕೇಂದ್ರ ಸರ್ಕಾರ ಮತ್ತು ರೈತರು ತಮ್ಮ ಪಾಲಿನ ಹಣ ಪಾವತಿಸಿದರೂ, ರಾಜ್ಯ ಸರ್ಕಾರ ₹63 ಕೋಟಿ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.

  • ಫಸಲ್‌ ಬಿಮಾಗೆ ರೈತರು, ಕೇಂದ್ರದಿಂದ ವಿಮೆ ಹಣ ಪಾವತಿ
  • ಆದರೆ ರಾಜ್ಯ ಸರ್ಕಾರ ಪಾವತಿಸಬೇಕಿದ್ದ ₹63 ಕೋಟಿ ಬಾಕಿ
  • ಹೀಗಾಗಿ ರೈತರಿಗೆ ಹಿಂಗಾರು ವಿಮೆ ಪಾವತಿಸದ ಕಂಪನಿಗಳು

ಸೋಮರಡ್ಡಿ ಅಳವಂಡಿ

ಕೊಪ್ಪಳ (ನ.5): ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟದ ಬಿಸಿ ಇದೀಗ ಅನ್ನದಾತರಿಗೂ ತಟ್ಟಿದೆ. ರೈತರ ಸಂಕಷ್ಟಕ್ಕೆ ಆಸರೆಯಾಗಬೇಕಿದ್ದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಹಿಂಗಾರು ಬೆಳೆ ವಿಮಾ ಪರಿಹಾರ ರಾಜ್ಯದ ರೈತರ ಕೈ ಸೇರದೆ ವಿಳಂಬವಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ವಿಮಾ ಕಂತು ಪಾವತಿಸದಿರುವುದೇ ಪ್ರಮುಖ ಕಾರಣ ಎನ್ನುವುದು ಗಮನಾರ್ಹ ಸಂಗತಿ.

ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗಬೇಕಿತ್ತು. ವಿಮಾ ಕಂಪನಿಯು ಪರಿಹಾರ ಲೆಕ್ಕಾಚಾರ ಪೂರ್ಣಗೊಳಿಸಿದ್ದು, ಸರ್ಕಾರದ ಪಾಲಿನ ಕಂತು ಪಾವತಿಯಾದರೆ ರೈತರ ಖಾತೆಗೆ ಹಣ ಜಮೆಯಾಗಲಿದೆ. ಆದರೆ, ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟದ ಕಾರಣದಿಂದ ತನ್ನ ಪಾಲಿನ ಕಂತು ಪಾವತಿಯಾಗದೆ ಪರಿಹಾರ ವಿತರಣೆಗೆ ಅಡ್ಡಿಯಾಗಿದೆ.

₹63 ಕೋಟಿ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಹಿಂಗಾರು ಹಂಗಾಮಿಗೆ ರಾಜ್ಯದ 3,83,131 ರೈತರು ಡಿ.31ರೊಳಗೆ ₹42.67 ಕೋಟಿ ವಿಮಾ ಕಂತು ಪಾವತಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ₹62.85 ಕೋಟಿ ಪಾವತಿಸಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ₹62.92 ಕೋಟಿ ಪಾವತಿಸಬೇಕಿದ್ದು, ಈ ವರೆಗೂ ಪಾವತಿಸಿಲ್ಲ.

ರಾಜ್ಯ ಸರ್ಕಾರದ ಪಾಲಿನ ಹಣ ಪಾವತಿಯಾಗದಿರುವುದರಿಂದ ವಿಮಾ ಪರಿಹಾರ ವಿತರಣೆಗೆ ಅಡ್ಡಿಯಾಗಿದೆ. ಸಾಮಾನ್ಯವಾಗಿ ಹಿಂಗಾರು ಬೆಳೆ ವಿಮೆ ಪರಿಹಾರ ಆಗಸ್ಟ್ ತಿಂಗಳ ವೇಳೆಗೆ ರೈತರ ಖಾತೆಗೆ ಜಮೆಯಾಗುತ್ತದೆ. ಆದರೆ, ಈ ಬಾರಿ ಪರಿಹಾರಕ್ಕಾಗಿ ರೈತರು ಕಾಯುವಂತಾಗಿದೆ.

ಕೊಪ್ಪಳ ಜಿಲ್ಲೆಯೊಂದರಲ್ಲೇ ₹45 ಕೋಟಿ ಬೆಳೆ ವಿಮೆ ಪರಿಹಾರ ಬರಬೇಕಿದೆ!

ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 20,574 ರೈತರಿಗೆ ಸುಮಾರು ₹45 ಕೋಟಿ ಬೆಳೆ ವಿಮೆ ಪರಿಹಾರ ಬರಬೇಕಿದೆ. ರಾಜ್ಯದ ವಿವಿಧ ಜಿಲ್ಲೆಗಳ ರೈತರೂ ಇದೇ ಸಂಕಷ್ಟ ಎದುರಿಸುತ್ತಿದ್ದಾರೆ. ಬರದ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ರೈತರಿಗೆ ನೆರವಾಗಬೇಕಿದ್ದ ಪರಿಹಾರವೇ ವಿಳಂಬವಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ 2025 ಡಿಸೆಂಬರ್‌ ಅಂತ್ಯಕ್ಕೆ ಅಥವಾ ಜನವರಿ ವೇಳೆಗೆ ಪಾವತಿ ಮಾಡಿದ್ದರೆ ಇಷ್ಟೊತ್ತಿಗೆ ರೈತರ ಖಾತೆಗೆ ಪರಿಹಾರ ದೊರೆಯುತ್ತಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ರೈತ ಖಾತೆಗೆ ಜಮೆಯಾಗಬೇಕಾಗಿದ್ದ ನೂರಾರು ಕೋಟಿ ರುಪಾಯಿ ಪರಿಹಾರ ಜಮೆಯಾಗದಂತೆ ಆಗಿದೆ. ==

ಹಿಂಗಾರು ಬೆಳೆ ವಿಮೆ: ಅಂಕಿ-ಅಂಶ

  • ವಿಮಾ ಕಂತು ಪಾವತಿಸಿದ ರೈತರು: 3,83,131
  • ವಿಮೆ ಮಾಡಿಸಿದ ಭೂಮಿ: 17,29,287 ಎಕರೆ
  • ರೈತರು ಪಾವತಿಸಿದ ಕಂತು: ₹42.67 ಕೋಟಿ
  • ಕೇಂದ್ರ ಸರ್ಕಾರದ ಪಾಲು: ₹62.85 ಕೋಟಿ
  • ರಾಜ್ಯ ಪಾವತಿಸಬೇಕಿರುವ ಪಾಲು: ₹62.92 ಕೋಟಿ
  • ವಿಮೆ ಮಾಡಿಸಿದ ಮೊತ್ತ (Sum Insured): ₹2,827 ಕೋಟಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮಾ ಕಂತಿನ ಪಾಲನ್ನು ರಾಜ್ಯ ಸರ್ಕಾರ ಪಾವತಿಸದಿರುವುದರಿಂದ ಕಳೆದ ವರ್ಷದ ಹಿಂಗಾರು ಹಂಗಾಮಿನ ಪರಿಹಾರ ನೀಡಲಾಗಿಲ್ಲ.

- ಪವನ್, ಟಾಟಾ ಎಐಸಿ ಕಂಪನಿ ಪ್ರತಿನಿಧಿ, ಕೊಪ್ಪಳ

ರಾಜ್ಯ ಸರ್ಕಾರ ತನ್ನ ಪಾಲಿನ ವಿಮಾ ಕಂತು ಪಾವತಿಸದಿರುವುದರಿಂದ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ನೂರಾರು ಕೋಟಿ ರು. ಪರಿಹಾರ ಬರುವುದು ವಿಳಂಬವಾಗಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ಪಾಲಿನ ಹಣ ಪಾವತಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.

- ವಿರೂಪಾಕ್ಷಪ್ಪ, ರೈತ