Tungabhadra Dam : ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ರೈತರು ಶನಿವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರಾಯಚೂರು (ಮಾ.5) : ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ರೈತರು ಶನಿವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಮೀಪದ ಸಾಥ್ಮೈಲ್ ಕ್ರಾಸ್ನಲ್ಲಿ ಸೇರಿದ ರೈತ, ಮುಖಂಡರು ಸುಮಾರು ಐದಾರು ತಾಸು ಹೆದ್ದಾರಿ ಮೇಲೆ ಕುಳಿತು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಬೆಳಗ್ಗೆ ಆರಂಭಿಸಿದ ಸಂಚಾರ ತಡೆ ಸಂಜೆವರೆಗೂ ನಡೆಸಿದ್ದರಿಂದ ರಾಯಚೂರು-ಲಿಂಗಸುಗೂರು ಮತ್ತು ರಾಯಚೂರು-ಸಿಂಧನೂರು(Raichur-Sindhanuru) ಸೇರಿದಂತೆ ಅಂತರ್ ತಾಲೂಕು, ಜಿಲ್ಲೆ ಮತ್ತು ರಾಜ್ಯದ ವಾಹನಗಳ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸಾರಿಗೆ ಬಸ್ಗಳು ಸೇರಿದಂತೆ ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳ ಓಡಾಟವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ದೂರದ ಊರುಗಳಿಂದ ರಾಯಚೂರು ನಗರಕ್ಕೆ ಬರುತ್ತಿದ್ದ ಜನರು ವಾಹನ ವ್ಯವಸ್ಥೆಯಿಲ್ಲದೇ ಪರದಾಡಿದರು. ಜನಸಾಮಾನ್ಯರು ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲಿ ರಸ್ತೆ ಮೇಲೆ ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.
ರಾಯಚೂರು: ನೋವು ಅನುಭವಿಸಿದ ಸಮುದಾಯಕ್ಕೆ ಎಸ್ಸಿ ಮೀಸಲು ಒದಗಿಸಿ: ಕೆ. ಶಿವರಾಂ
ಈ ವೇಳೆ ಮಾತನಾಡಿದ ಶಾಸಕರು, ಮುಖಂಡರು ತುಂಗಾಭದ್ರ ಅಚ್ಚುಕಟ್ಟು ಪ್ರದೇಶ(Tungabhadra area)ದ ಕೆಳಭಾಗಕ್ಕೆ ನೀರು ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಸಿರವಾರ(Sirwar), ಮಾನ್ವಿ(Manvi), ರಾಯಚೂರು(Raichur) ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನಾಲೆ(Tungabhadra Canal)ಯನ್ನೆ ಅವಲಂಬಿತ ರೈತರಿಗೆ ಕಳೆದ ಒಂದು ತಿಂಗಳಿಂದ ನೀರಿಗೆ ತೊಂದರೆಯಾಗಿದೆ. ಭತ್ತ, ಹತ್ತಿ, ಜೋಳ, ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಕಾಳು ಕಟ್ಟುವ ಹಂತದಲ್ಲಿವೆ. ಈಗ ನೀರಿನ ಅವಶ್ಯಕತೆ ಹೆಚ್ಚು ಇದೆ. ಆದರೆ, ಮೇಲ್ಭಾಗದಲ್ಲಿಯೆ ನೀರನ್ನು ಬಳಕೆ ಮಾಡಿಕೊಂಡು ನಮಗೆ ನೀರು ಇಲ್ಲದಂತೆ ಮಾಡಲಾಗಿದೆ. ಕೆಳಭಾಗದ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಅನೇಕ ಬಾರಿ ಹೋರಾಟ ನಡೆಸಿದರು ಸಹ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಜಿಲ್ಲಾಡಳಿತ, ನೀರಾವರಿ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದಂತಾಗಿದೆ. ಕೊನೆಭಾಗಕ್ಕೆ ನೀರು ಹರಿಸುವಲ್ಲಿ ರೈತರು ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಸ್ಥಳೀಯ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ರಾಜಾ ವೆಂಕಟಪ್ಪ ನಾಯಕ, ತಿಪ್ಪರಾಜು ಹವಲ್ದಾರ, ಗಂಗಾಧರ ನಾಯಕ, ಚಾಮರಸ ಮಾಲಿಪಾಟೀಲ್, ಲಿಂಗರೆಡ್ಡಿ ಪಾಟೀಲ್, ಪ್ರಭಾಕರ ಪಾಟೀಲ್, ಬೂದಯ್ಯಸ್ವಾಮಿ ಗಬ್ಬೂರು, ಗೋವಿಂದ ನಾಯಕ, ಮಲ್ಲಣ್ಣ ದಿನ್ನಿ, ದೇವರಾಜ ನಾಯಕ, ಮಲ್ಲಪ್ಪ ಪೂಜಾರಿ, ಸಿದ್ದಯ್ಯಸ್ವಾಮಿ ಸೇರಿದಂತೆ ರಾಯಚೂರು, ಮಾನ್ವಿ, ಸಿರವಾರ ತಾಲೂಕುಗಳ ರೈತಬಾಂಧವರು ಭಾಗವಹಿಸಿದ್ದರು.
8ರವರೆಗೆ ಟಿಎಲ್ಬಿಸಿ ಮೇಲೆ ನಿಷೇಧಾಜ್ಞೆ ಜಾರಿ
ರಾಯಚೂರು: ತುಂಗಭದ್ರಾ ಎಡದಂಡೆ ಮುಖ್ಯ ಮೈಲ್-47 ರಿಂದ ಮೈಲ್-108 ( ವಿತರಣಾ ಕಾಲುವೆ 36 ರಿಂದ 94) ರವರೆಗೆ ಮುಖ್ಯ ಕಾಲುವೆಯ ಎಡದಂಡೆಯಿಂದ 100 ಮೀ. ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ 1973ರ ದಂಡ ಪ್ರಕ್ರಿಯೆ ಸಂಹಿತೆ ಕಲಂ.144 ರನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹೋಳಿ ಹಬ್ಬಕ್ಕೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟ
ಟಿಎಲ್ಬಿಸಿ ಕೆಳಭಾಗಕ್ಕೆ ಸಮಪರ್ಕ ನೀರು ಸರಬರಾಜು ಮಾಡುವ ಅಗತ್ಯವಿರುವ ಹಿನ್ನೆಲೆಯಲ್ಲಿ ಕಾಲುವೆ ಮೇಲೆ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ.8ರ ಮಧ್ಯರಾತ್ರಿ 12 ಗಂಟೆವರೆಗೆ ತುಂಗಭದ್ರ ಎಡದಂಡೆ ಕಾಲುವೆಯ ಮೈಲ್ 47ರಿಂದ ಮೈಲ್ 108 (ವಿತರಣಾ ಕಾಲುವೆ 36 ರಿಂದ 94 ರವರೆಗೆ 100 ಮೀ. ಅಂತರದ ವ್ಯಾಪ್ತಿಯ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಒಡಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮಾ.2ರಂದು ಜಾರಿಗೊಳಿಸಲಾಗಿದೆ. ಈ ಎಲ್ಲಾ ಷರತ್ತಿಗೊಳಪಟ್ಟು ಜಿಲ್ಲಾಧಿಕಾರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.