ಕೋಲಾರ [ಸೆ.04]:  ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಪಿ.ನಂಬರ್‌ ತೆಗೆಯುವ ಕಾರ್ಯದಲ್ಲಿ ತೊಡಗಿ ಹಗಲು ದರೋಡೆ ಮಾಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಇದೊಂದು ಪಿಡುಗಾಗಿದ್ದು ರೈತರನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ ಅದಾಲತ್‌ ರೂಪದಲ್ಲಿ ಜಿಲ್ಲೆಯ ಎಲ್ಲ ರೈತರ ಜಮೀನುಗಳ ಪಿ.ನಂಬರ್‌ ತೆಗೆಯಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಡಿಸಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಸಾವಿರಾರು ಮಂದಿ ರೈತರ ಪಿ.ನಂಬರ್‌ಗಳು ಹಾಗೆಯೇ ಉಳಿದಿವೆ. ರೈತರ ಪಹಣಿಗಳಲ್ಲಿ ಪಿ.ನಂಬರ್‌ಗಳು ಬಂದಿರುವುದರಿಂದ ಅದನ್ನು ಮಾರಾಟ ಮಾಡುವುದಕ್ಕಾಗಿಲೀ ಮತ್ತು ಇತರೆ ವ್ಯವಹಾರ ನಡೆಸುವುದಕ್ಕಾಗಲೀ ತೊಂದರೆ ಆಗುತ್ತಿದೆ ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದರು.

ಸರ್ಕಾರದ ಸೂಚನೆಯ ಕಡೆಗಣನೆ

ಕಳೆದ ನಾಲ್ಕೈದು ವರ್ಷಗಳಿಂದಲೂ ಪೋಡಿ ಅದಾಲತ್‌ ನಡೆಸಿ ರೈತರ ಪಹಣಿಗಳಲ್ಲಿ ಅಡಕವಾಗಿರುವ ಪಿ.ನಂಬರ್‌ಗಳನ್ನು ತೆಗೆಯುವಂತೆ ಸರ್ಕಾರವೇ ಸೂಚನೆ ನೀಡುತ್ತಲೇ ಬಂದಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಇದರ ಅನುಷ್ಟಾನ ಆಗುತ್ತಿಲ್ಲ. ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಡಿ.ಕೆ.ರವಿ ಅವರ ಕಾಲದಿಂದ ಇದರ ಪ್ರಸ್ತಾಪ ಆಗುತ್ತಿದೆ, ಆದರೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ತಿಳಿಸಿದರು.

ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ ಕುಮಾರ್‌ ಅವರೂ ಕೂಡ ಜಿಲ್ಲೆಯಲ್ಲಿ ಪಿ.ನಂಬರ್‌ಗಳಿಂದ ರೈತರು ಅನುಭವಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸಮರೋಪಾದಿಯಲ್ಲಿ ಈ ಕೆಲಸವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ನಡೆಸಿ ಜಿಲ್ಲೆಯ ಎಲ್ಲಾ ರೈತರ ಪಿ.ನಂಬರ್‌ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದರಾದರೂ ರೈತರು ನಿರೀಕ್ಷಿತ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿಲ್ಲ.

ಅಧಿಕಾರಿಗಳಿಂದ ಹಗಲು ದರೋಡೆ

ಕಂದಾಯ ಇಲಾಖೆ ಅಧಿಕಾರಿಗಳು ಪಿ.ನಂಬರ್‌ ತೆಗೆಯುವ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಕೊಳ್ಳೆ ಹೊಡೆಯುತ್ತಿದ್ದಾರೆ. ತಾಲೂಕು ಕಚೇರಿ, ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿ ಇದರ ಹಾವಳಿ ಹೆಚ್ಚಾಗಿದೆ, ಕಂದಾಯ ಇಲಾಖೆ ಅಧಿಕಾರಿಗಳು ಒಂದು ಹೆಕ್ಟೇರ್‌ಗೆ 2 ರಿಂದ 4 ಲಕ್ಷ ರು.ಗಳಷ್ಟುಲಂಚವನ್ನು ತೆಗೆದುಕೊಂಡು ವ್ಯವಹಾರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಬಡ ರೈತರು ಇಷ್ಟೊಂದು ಹಣವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ ಶಾಸಕರು, ರೈತರಿಂದ ಲಂಚ ತೆಗೆದುಕೊಳ್ಳುವ ಅಧಿಕಾರಿಗಳನ್ನು ಸುಮ್ಮನೆ ಬಿಡಬಾರದು, ಅಂತವರನ್ನು ಜಿಲ್ಲೆಯಿಂದಲೇ ಹೊರ ಹಾಕಬೇಕೆಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಿ.ನಂಬರ್‌ ಹೆಸರಿನಲ್ಲಿ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಲೋಪಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳನ್ನು ತಹಬಂದಿಗೆ ತರುವುದಲ್ಲದೆ ಪಿ.ನಂಬರ್‌ ತೆಗೆಯುವ ಕೆಲಸವನ್ನು ಅದಾಲತ್‌ ಮೂಲಕ ಇಡೀ ಜಿಲ್ಲೆಯಾದ್ಯಂತ ವೇಗವಾಗಿ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ತಾಲೂಕು ಕಚೇರಿ ಮತ್ತು ಉಪವಿಭಾಧಿಕಾರಿಗಳ ಕಚೇರಿಯಲ್ಲಿ ರೈತರು ಮತ್ತು ಸಾರ್ವಜನಿಕರ ಕೆಲಸಗಳಿಗೆ ಯಾವುದೇ ತೊಂದರೆ ಆಗಬಾರದು. ಬಡವರು ಮತ್ತು ಸಾರ್ವಜನಿಕರಿಂದ ಸುಲಿಗೆ ಮಾಡುವ ಅಧಿಕಾರಿಗಳನ್ನು ಇಲ್ಲಿಂದ ಹೊರ ಹಾಕುವುದಾಗಿ ಎಚ್ಚರಿಸಿದರು.

ಭ್ರಷ್ಟಅಧಿಕಾರಿಗಳಿಗೆ ಎಚ್ಚರಿಕೆ

ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೆ ತಾಯಿಯಂತಿದೆ ಜತೆಗೆ ಸಾರ್ವಜನಿಕರ ಎಲ್ಲ ಕೆಲಸ ಕಾರ್ಯಗಳು ಅಲ್ಲಿಯೇ ನಡೆಯಬೇಕು. ರೈತರು ಪಹಣಿಯಿಂದ ಹಿಡಿದು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಅವರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಆದಾಯ ಪ್ರಮಾಣ ಪತ್ತ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಮಾಡಿಕೊಡುವಾಗ ಲಂಚ ತೆಗೆದುಕೊಳ್ಳುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು, ಹಣಕ್ಕಾಗಿ ಜನರ ಪ್ರಾಣ ಹಿಂಡುವ ಅಧಿಕಾರಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

(ಸಾಂದರ್ಬಿಕ ಚಿತ್ರ)