ಹಸಿರೆಲೆ ಗೊಬ್ಬರ ಬೀಜದ ಸಬ್ಸಿಡಿಗೂ ಸರ್ಕಾರದ ಬಳಿಕ ಹಣ ಇಲ್ವಂತೆ..!
ಸಾವಯವ ಕೃಷಿಗೆ ಉತ್ತೇಜನ ನೀಡುವ ಸರ್ಕಾರ ಮೈಮರೆಯಿತೆ?| ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭೂಮಿಗೆ ಸತ್ವ ನೀಡುವ ಬೆಳೆಯ ಬೀಜ| ಈಗ ರೈತರೆ ಕೊಟ್ಟುಕೊಳ್ಳಬೇಕು, ಮುಂದೆ ವಾಪಸ್ ಕೊಡಲಾಗುತ್ತದೆಯಂತೆ| ಅನೇಕ ರೈತರು ತಮ್ಮ ಬಳಿ ಹಣ ಇಲ್ಲದೆ ಇರುವುದರಿಂದ ಹಸಿರು ಎಲೆ ಗೊಬ್ಬರದ ಬೀಜಗಳನ್ನು ಹಾಕುವುದನ್ನು ಬಿಡುತ್ತಿದ್ದಾರೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.22): ರೈತರು ಭೂಮಿಯನ್ನು ಸತ್ವಯುತವಾಗಿ ಮಾಡಲು ಹಾಕುವ ಹಸಿರು ಎಲೆ ಗೊಬ್ಬರದ ಸಬ್ಸಿಡಿ ಹಣಕ್ಕೂ ಸರ್ಕಾರದ ಬಳಿ ಹಣ ಇಲ್ವಂತೆ. ಈಗ ರೈತರೇ ಹಣ ಕೊಟ್ಟು ಖರೀದಿಸಿಕೊಳ್ಳಬೇಕಂತೆ, ಮುಂದೆ ಸರ್ಕಾರ ಸಾಧ್ಯವಾದರೆ ಕೊಡುತ್ತದೆಯಂತೆ.
ಕೃಷಿ ಇಲಾಖೆಯ ನಿರ್ದೇಶಕರ ಇಂಥದ್ದೊಂದು ಆದೇಶದ ವಿರುದ್ಧ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವಯವ ಕೃಷಿ ಮಾಡಿ ಎಂದು ಸರ್ಕಾರ ನೂರಾರು ಕೋಟಿ ರುಪಾಯಿ ವ್ಯಯ ಮಾಡುತ್ತಿದ್ದರೂ ಅದೇ ಮಾದರಿಯ ಕೃಷಿ ಹಸಿರು ಎಲೆ ಗೊಬ್ಬರಕ್ಕೆ ಸಬ್ಸಿಡಿ ಹಣ ಇಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕೊಪ್ಪಳದಲ್ಲಿ ಈಗ ಕೊರೋನಾ ಸೋಂಕಿತ ವ್ಯಕ್ತಿಯಿಂದ ಹೆಚ್ಚಿದ ಟೆನ್ಶನ್..!
ಏನಿದು ಸಮಸ್ಯೆ?
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಅತಿಯಾದ ರಸಾಯನಿಕ ಗೊಬ್ಬರವನ್ನು ಬಳಸಿದ್ದರಿಂದ ಲಕ್ಷಾಂತರ ಎಕರೆ ಭೂಮಿ ಇಂದು ಸವುಳಾಗುತ್ತಿದೆ. ಇಂಥದ್ದೊಂದು ವರದಿಯನ್ನು ಸ್ವತಃ ಕೃಷಿ ವಿವಿಯೇ ನೀಡಿದೆ. ಇದನ್ನು ಸಂರಕ್ಷಣೆ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ ಹಸಿರು ಎಲೆ ಗೊಬ್ಬರವೂ ಒಂದು.
ಪ್ರತಿ ವರ್ಷವೂ ಹಿಂಗಾರು ಬತ್ತವನ್ನು ಕಟಾವು ಮಾಡಿದ ಮೇಲೆ ರೈತರು ಸೆಣಬು ಮತ್ತು ಡಯಾಂಚ್ ಎನ್ನುವ ಹಸಿರು ಎಲೆಯನ್ನು ಬೆಳೆದು, ಅದನ್ನು ಕಟಾವು ಮಾಡದೆ ಹೊಲದಲ್ಲಿಯೇ ಟ್ರ್ಯಾಕ್ಟರ್ ಮೂಲಕ ಕ್ರಷ್ ಮಾಡುತ್ತಿದ್ದರು. ಇದರಿಂದ ಭೂಮಿ ಸವುಳಮುಕ್ತ ಆಗುವುದು ಅಲ್ಲದೆ ಸತ್ವಯುತವೂ ಆಗುತ್ತಿತ್ತು.
ಇದಕ್ಕಾಗಿ ಸರ್ಕಾರ ಸಬ್ಸಿಡಿಯಲ್ಲಿ ಸೆಣಬು ಮತ್ತು ಡಯಾಂಚ್ ಬೀಜಗಳನ್ನು ವಿತರಣೆ ಮಾಡುತ್ತಿತ್ತು. ಆದರೆ, ಈ ವರ್ಷ ಕೋವಿಡ್-19 ಸಮಸ್ಯೆಯಿಂದ ಹಸಿರು ಎಲೆ ಗೊಬ್ಬರದ ಬೀಜಗಳ ಸಬ್ಸಿಡಿಯನ್ನು ನೀಡಲು ಆಗುವುದಿಲ್ಲ. ಹೀಗಾಗಿ, ರೈತರೆ ಪೂರ್ಣಪ್ರಮಾಣದ ದುಡ್ಡುಕೊಟ್ಟು ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿ ಮಾಡಬೇಕು. ನಂತರದ ದಿನಗಳಲ್ಲಿ ಸರ್ಕಾರ ಸಾಧ್ಯವಾದರೆ ಅದರ ಸಬ್ಸಿಡಿಯನ್ನು ನೀಡುವುದಾಗಿ ಕೃಷಿ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರೈತರ ಆಕ್ರೋಶ
ಸರ್ಕಾರ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಲು ಶ್ರಮಿಸುತ್ತಿದೆ. ಇದಕ್ಕಾಗಿ ಸಾವಯವ ಕೃಷಿಗೆ ಅನೇಕ ಪ್ರೋತ್ಸಾಹದಾಯಕ ಯೋಜನೆಗಳನ್ನು ಮಾಡಿದೆ. ಅದರಡಿಯೇ ಇರುವುದೇ ಈ ಹಸಿರು ಎಲೆ ಗೊಬ್ಬರದ ಬೀಜದ ವಿತರಣೆ. ಆದರೆ, ಅದನ್ನೇ ಬಂದ್ ಮಾಡಿದರೆ ಹೇಗೆ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ಕೋವಿಡ್-19 ಸಮಸ್ಯೆಯಿಂದ ಮೊದಲೇ ರೈತರು ತೀವ್ರ ಸಮಸ್ಯೆಯಲ್ಲಿದ್ದಾರೆ. ಬತ್ತ ಕಟಾವು ಮಾಡಿದರೂ ಮಾರಾಟವಾಗದೆ ಇರುವುದರಿಂದ ತೀವ್ರ ಸಮಸ್ಯೆಯಲ್ಲಿದ್ದಾರೆ. ಇಂಥ ಸಮಯದಲ್ಲಿ ಹಸಿರು ಎಲೆ ಗೊಬ್ಬರದ ಬೀಜಗಳ ಸಬ್ಸಿಡಿಯನ್ನು ಕಡಿತ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅನೇಕ ರೈತರು ತಮ್ಮ ಬಳಿ ಹಣ ಇಲ್ಲದೆ ಇರುವುದರಿಂದ ಹಸಿರು ಎಲೆ ಗೊಬ್ಬರದ ಬೀಜಗಳನ್ನು ಹಾಕುವುದನ್ನು ಬಿಡುತ್ತಿದ್ದಾರೆ. ಹಾಕಿ ಬೆಳೆದರಾಯ್ತು ಬಿಡಿ ಎಂದು ಕೈ ಚೆಲ್ಲುತ್ತಿದ್ದಾರೆ.
ಅಚ್ಚುಕಟ್ಟು ಪ್ರದೇಶಕ್ಕೆ ಕುತ್ತು
ಸರ್ಕಾರದ ಈ ಕ್ರಮದಿಂದ ಹಾಗೊಂದು ವೇಳೆ ರೈತರು ತಾವೇ ಖರೀದಿ ಮಾಡಿ ಹಸಿರು ಎಲೆ ಗೊಬ್ಬರದ ಬೀಜವನ್ನು ಬಿತ್ತದಿದ್ದರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಭೂಮಿಗೆ ಗಂಡಾಂತರ ಕಾದಿದೆ. ಈಗಾಗಲೇ ಲಕ್ಷಾಂತರ ಎಕರೆ ಪ್ರದೇಶ ಸವುಳು ಆಗುತ್ತಿರುವುದು ಮತ್ತಷ್ಟು ಅಧಿಕಗೊಳ್ಳುಮುಂದೆ ರಾಸಾಯನಿಕ ಗೊಬ್ಬರವನ್ನು ತ್ತದೆ ಎನ್ನುತ್ತಾರೆ ಕೃಷಿ ವಿವಿಯ ಹೆಸರು ಹೇಳದ ಅಧಿಕಾರಿ.
ಸರ್ಕಾರ ಪ್ರತಿ ವರ್ಷ ಬತ್ತ ಬೆಳೆಯುವ ಪ್ರದೇಶದಲ್ಲಿ ಭೂಮಿಯನ್ನು ಸತ್ವಯುತವಾಗಿ ಮಾಡಲು ಹಸಿರು ಎಲೆ ಗೊಬ್ಬರದ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡುತ್ತಿತ್ತು. ಆದರೆ, ಈ ವರ್ಷ ಸಬ್ಸಿಡಿಯನ್ನೇ ಕಡಿತ ಮಾಡಿದ್ದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಹಿಟ್ನಾಳ ಗ್ರಾಮದ ರೈತ ಉಮೇಶ ಪಲ್ಲೇದ ಅವರು ಹೇಳಿದ್ದಾರೆ.