Asianet Suvarna News Asianet Suvarna News

ಕೊಪ್ಪಳದಲ್ಲಿ ಈಗ ಕೊರೋನಾ ಸೋಂಕಿತ ವ್ಯಕ್ತಿಯಿಂದ ಹೆಚ್ಚಿದ ಟೆನ್ಶನ್‌..!

ಮಹಾರಾಷ್ಟ್ರದಿಂದ ತಪ್ಪಿಸಿಕೊಂಡು ಬಂದ ಭೂಪ| ಕೊಪ್ಪಳದಲ್ಲಿ ಭಿಕ್ಷುಕರಿಗೆ ಪ್ರಾಥಮಿಕ ಸಂಪರ್ಕ ಕಲ್ಪಿಸಿದ|ಟಾಟಾ ಏಸ್‌ನಲ್ಲಿದ್ದ ಮತ್ತೊಬ್ಬ ತಮಿಳುನಾಡಲ್ಲಿ ಟ್ರೇಸ್‌| ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಶಂಟ್‌ ನನಗೆ ಸೇಬು ಬೇಕೇ ಬೇಕು ಎಂದು ಹಠ| ಅಲ್ಲದೆ ಊಟದ ವಿಷಯಕ್ಕೆ ಅನೇಕ ಕಿರಿಕಿರಿ ಮಾಡುತ್ತಿರುವುದು ಅಲ್ಲದೆ ಅಲ್ಲಿಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತನೆ|

Coronavirus Patient Given Wrong Information to District Administration in Koppal
Author
Bengaluru, First Published May 22, 2020, 7:57 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.22): ಮಹಾರಾಷ್ಟ್ರದ ಮುಂಬೈದಿಂದ ಕೊಪ್ಪಳಕ್ಕೆ ಆಗಮಿಸಿರುವ ಪಿ. 1173 ತಪ್ಪು ತಪ್ಪು ಮಾಹಿತಿ ನೀಡುವುದು ಅಲ್ಲದೆ ಯಾವುದೇ ಪೂರ್ವಾನುಮತಿ ಇಲ್ಲದೆಯೇ ಆಗಮಿಸಿದ್ದಾನೆ. ಈತನ ಜತೆಗಿದ್ದ ಮತ್ತೊಬ್ಬ ಪ್ರಯಾಣಿಕ ನೀಡಿದ ಮೊಬೈಲ್‌ ಸಂಖ್ಯೆ ತಮಿಳುನಾಡಲ್ಲಿ ಟ್ರೇಸ್‌ ಆಗುತ್ತಿದೆ.

ಹೀಗಾಗಿ ಕೊಪ್ಪಳ ಜಿಲ್ಲಾದ್ಯಂತ ಪಿ-1173 ಟೆನ್ಶನ್‌ ಪ್ರಾರಂಭವಾಗಿದೆ. ನಿಜವಾಗಿಯೂ ಈತ ಬಂದಿದ್ದಾದರೂ ಎಲ್ಲಿಂದ? ಎಲ್ಲೆಲ್ಲಿ ಇದ್ದ? ಈತನ ಜತೆಗೆ ಇದ್ದಾತ ಎಲ್ಲಿ ಹೋದ? ಟಾಟಾ ಏಸ್‌ ವಾಹನದ ಚಾಲಕನೂ ಪತ್ತೆಯಾಗುತ್ತಿಲ್ಲ. ಅಷ್ಟೇ ಯಾಕೆ? ಈತ ತಪ್ಪು ಮಾಹಿತಿ ನೀಡಿದ್ದರಿಂದ ಈತನನ್ನು ಕೊಪ್ಪಳದಿಂದ ಕುಷ್ಟಗಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದರಿಂದ ಅದರಲ್ಲಿದ್ದ 9 ಭಿಕ್ಷುಕರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ.
ಅಬ್ಬಾ, ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಪಿ-1173 ನಿಜಕ್ಕೂ ಜಿಲ್ಲಾಡಳಿತಕ್ಕೆ ದೊಡ್ಡ ಆತಂಕವನ್ನೇ ತಂದಿಟ್ಟಿದ್ದಾನೆ.

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಪೂರ್ವಾನುಮತಿಯೇ ಇಲ್ಲ

ಈತ ಸೇವಾ ಸಿಂಧು ಪುಸ್ತಕದಲ್ಲಿಯೂ ದಾಖಲು ಮಾಡಿಲ್ಲ. ಅನುಮತಿಯನ್ನು ಪಡೆದಿಲ್ಲ. ಅಷ್ಟೆ ಯಾಕೆ? ಕನಿಷ್ಠ ಪರೀ​ಕ್ಷೆ ಸಹ ಮಾಡಿಸಿಕೊಂಡಿಲ್ಲ. ಪಿ. 1173 ಪಾಸಿಟಿವ್‌ ವ್ಯಕ್ತಿ ತಪ್ಪಿಸಿಕೊಂಡು ಬಂದಿದ್ದಾನೆ. ಮುಂಬೈದಿಂದ ಲಾರಿಯಲ್ಲಿಯೇ ಬಂದಿರುವ ಈತ ಹುಬ್ಬಳ್ಳಿಯ ​ಚೆಕ್‌ಪೋಸ್ಟ್‌ನಲ್ಲಿಯೂ ತಪಾಸಣೆಗೆ ಒಳಗಾಗದೆ ತಪ್ಪಿಸಿಕೊಂಡು ಟಾಟಾ ಏಸ್‌ನಲ್ಲಿ ಬಂದಿದ್ದಾನೆ. ಹೀಗೆ ತಪ್ಪಿಸಿಕೊಂಡು ಕೊಪ್ಪಳಕ್ಕೆ ಆಗಮಿಸಿ, ಬಸ್‌ ನಿಲ್ದಾಣದಲ್ಲಿದ್ದ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಯೇ ಕುಷ್ಟಗಿಗೆ ಬಂದಿದ್ದಾನೆ.

ತಮಿಳುನಾಡಿನಲ್ಲಿ ಪತ್ತೆ

ಈತ ಬಂದಿರುವ ಟಾಟಾ ಏಸ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನಿದ್ದ. ಈತ ನೀಡಿರುವ ಮೊಬೈಲ್‌ ನಂಬರ್‌ ತಪ್ಪಿದೆ. ಸಹ ಪ್ರಯಾಣಿಕ ನೀಡಿದ ಮೊಬೈಲ್‌ ನಂಬರ್‌ ಲೋಕೇಶನ್‌ ತಮಿಳನಾಡಿನಲ್ಲಿ ಪತ್ತೆಯಾಗುತ್ತಿದೆ. ಆ ನಂಬರ್‌ ತಪ್ಪು ನೀಡಿರುವುದು ಪಕ್ಕಾ. ಹೀಗಾಗಿ, ಸಹ ಪ್ರಯಾಣಿಕ ಇದುವರೆಗೂ ಪತ್ತೆಯಾಗಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಟಾಟಾ ಏಸ್‌ ವಾಹನ ಚಾಲಕ ಇದುವರೆಗೂ ಪತ್ತೆಯಾಗಿಲ್ಲ.

ಕೊಪ್ಪಳಕ್ಕೆ ಗಂಡಾಂತರ

ಮಹಾರಾಷ್ಟ್ರದಿಂದ ಬಂದಿರುವ ಪಿ-1173 ವ್ಯಕ್ತಿ ಕೊಪ್ಪಳ ಜಿಲ್ಲೆಗೆ ಬಹುದೊಡ್ಡ ಗಂಡಾಂತರ ತಂದಿಟ್ಟಿದ್ದಾನೆ. ತಪ್ಪು ಮಾಹಿತಿ ನೀಡಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದು, ಅದೇ ಬಸ್ಸಿನಲ್ಲಿ 9 ಭಿಕ್ಷುಕರು ಇದ್ದರು. ಈ ಭಿಕ್ಷುಕರೆಲ್ಲರ ಲ್ಯಾಬ್‌ ವರದಿ ದೊಡ್ಡ ಆತಂಕವನ್ನೇ ಹುಟ್ಟುಹಾಕಿದ್ದು, ಇದುವರೆಗೂ ವರದಿ ಬಂದಿಲ್ಲ.

ಸೇಬು ಬೇಕಂತೆ!

ಕೊಪ್ಪಳ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಶಂಟ್‌ ನನಗೆ ಸೇಬು ಬೇಕೇ ಬೇಕು ಎಂದು ಹಠ ಮಾಡುತ್ತಿದ್ದಾರೆ. ಅಲ್ಲದೆ ಊಟದ ವಿಷಯಕ್ಕೆ ಅನೇಕ ಕಿರಿಕಿರಿ ಮಾಡುತ್ತಿರುವುದು ಅಲ್ಲದೆ ಅಲ್ಲಿಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವುದು ಕೋವಿಡ್‌ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮತ್ತು ವೈದ್ಯರಿಗೆ ದೊಡ್ಡ ತಲೆ​ನೋ​ವಾ​ಗಿ​ದೆ.

ನಂ. 1173 ಪಾಸಿ​ಟಿವ್‌ ವ್ಯಕ್ತಿ ಸೇವಾ ಸಿಂಧುವಿನಲ್ಲಿಯೂ ದಾಖಲಿಸಿಲ್ಲ ಮತ್ತು ಪೂರ್ವಾನುಮತಿಯನ್ನು ಪಡೆದಿಲ್ಲ. ಅಲ್ಲದೆ ಸಹ ಪ್ರಯಾಣಿಕ ಮತ್ತು ಚಾಲಕ ಪತ್ತೆಯಾಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಡಿಸಿ ಪಿ.ಸುನೀಲ್‌ಕುಮಾರ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios